ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ಜಿಂದಾಲ್ಗೆ ಜಮೀನು ಪರಭಾರೆಗೆ ವಿರೋಧ, ವಿಜಯನಗರ ಜಿಲ್ಲೆ ಘೋಷಣೆಗೆ ಒತ್ತಾಯಿಸಿ ದಿಢೀರ್‌ನೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಶಾಸಕ ಆನಂದ್‌ಸಿಂಗ್ ಅವರ ಮುಂದಿನ ರಾಜಕೀಯ ನಡೆ ಏನು ಎಂಬುದರತ್ತ ಕುತೂಹಲ ಮೂಡಿದೆ.
ಕಾಂಗ್ರೆಸ್ ಬಿಡಬೇಕಾ ಅಥವಾ ಆ ಪಕ್ಷದಲ್ಲಿಯೇ ಮುಂದುವರಿಯಬೇಕಾ? ಇಲ್ಲ ಮತ್ತೆ ಬಿಜೆಪಿ ಕದ ತಟ್ಟಬೇಕೆ ಎಂಬುದರ ಬಗ್ಗೆ ಆನಂದ ಸಿಂಗ್ ತಮ್ಮ ಆಪ್ತರ ಅಭಿಪ್ರಾಯ ಸಂಗ್ರಹಿಸುತ್ತಿದ್ದು ಮುಂದೆ ಯಾವ ಹೆಜ್ಜೆ ಇಡಬಹುದು ಎಂಬುದರತ್ತ ಎಲ್ಲರ ದೃಷ್ಟಿ ನೆಟ್ಟಿದೆ.
ಸೋಮವಾರ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಮಂಗಳವಾರ ಕ್ಷೇತ್ರಕ್ಕೆ ಆಗಮಿಸಿದ ಶಾಸಕ ಆನಂದ್‌ಸಿಂಗ್, ತಮ್ಮ ಆಪ್ತರು, ಕಾರ್ಯಕರ್ತರನ್ನು ಭೇಟಿಯಾಗುತ್ತಿದ್ದಾರೆ. ಹೊಸಪೇಟೆಯ ಖಾಸಗಿ ಹೋಟೆಲ್ನಲ್ಲಿ ಆಪ್ತರು, ಬೆಂಬಲಿಗರು, ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದ್ದು, ಶಾಸಕರಾಗಿ ಕಾಂಗ್ರೆಸ್ ಪಕ್ಷದಲ್ಲಿ ಮುಂದುವರೆಯಬೇಕಾ ಅಥವಾ ಪುನಃ ಕಮಲ ಪಾಳಯಕ್ಕೆ ಸೇರಬೇಕಾ ಎಂಬುದರ ಕುರಿತು ಚರ್ಚಿಸುತ್ತಿದ್ದಾರೆ. ಈ ವೇಳೆ ಕೆಲವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣವೇನು ಎಂಬುದನ್ನು ಸ್ಪಷ್ಟಪಡಿಸುವಂತೆ ಕೋರಿದರೆ, ಇನ್ನು ಕೆಲವರು ಮುಂದಿನ ನಡೆ ಬಗ್ಗೆ ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ.
ಡಿಕೆಶಿಯಿಂದ ಅಂತರ: ಬಿಜೆಪಿಯಿಂದಲೇ ರಾಜಕೀಯ ಜೀವನ ಆರಂಭಿಸಿದ್ದ ಆನಂದ್‌ಸಿಂಗ್, ಆ ಪಕ್ಷದಿಂದ ಎರಡು ಬಾರಿ ಶಾಸಕರಾಗಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ನಂತರ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಅವರು ಬಳ್ಳಾರಿಗೆ ಬಂದಾಗಲೆಲ್ಲ ವಿವಿಧ ವಿಷಯಗಳ ಕುರಿತು ಚರ್ಚಿಸುವ ಮೂಲಕ ತಮ್ಮಲ್ಲಿದ್ದ ಅಸಮಾಧಾನ ತೋಡಿಕೊಂಡಿದ್ದರು. ಡಿ.ಕೆ.ಶಿವಕುಮಾರ್ ಅವರು ಆನಂದ್‌ಸಿಂಗ್ ಮಾತಿಗೆ ಅಷ್ಟೊಂದು ಬೆಲೆ ಕೊಡದಿದ್ದರಿಂದ ಅವರೊಂದಿಗೂ ಅಂತರ ಕಾಯ್ದುಕೊಂಡು, ಪಕ್ಷದ ಕಾರ್ಯಚಟುವಟಿಕೆಗಳಿಂದಲೂ ದೂರ ಉಳಿದಿದ್ದರು.
ರಾಜೀನಾಮೆ ಪೂರ್ವನಿಯೋಜಿತ?: ಆನಂದ್‌ಸಿಂಗ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮೊದಲೇ ತಯಾರಿ ಮಾಡಿಕೊಂಡಿದ್ದರು. ಇದಕ್ಕಾಗಿ ಬಿಜೆಪಿ ನಾಯಕರನ್ನೂ ಭೇಟಿ ಮಾಡಿದ್ದರು. ಕಾಂಗ್ರೆಸ್ ತೊರೆದು ಪುನಃ ಮಾತೃಪಕ್ಷ ಸೇರಲು ಚಿಂತನೆ ನಡೆಸಿದ್ದರು ಎನ್ನಲಾಗಿದೆ. ಇದಕ್ಕೆ ಪುಷ್ಟಿ ಎಂಬಂತೆ ಮಾಜಿ ಪ್ರಧಾನಿ ದಿ|ಅಟಲ್ ಬಿಹಾರಿ ವಾಜಪೇಯಿ ಅಸ್ತಿ ವಿಸರ್ಜನೆ ಮೆರವಣಿಗೆ ಸೇರಿದಂತೆ ಹಲವು ಬಾರಿ ಬಿಜೆಪಿ ಮುಖಂಡರ ಜತೆ ಕಾಣಿಸಿಕೊಂಡಿದ್ದರು.
ಇನ್ನು ಬೆಂಗಳೂರಿನ ರೆಸಾರ್ಟ್‌ನಲ್ಲಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಜತೆ ಜಗಳವಾದ ಬಳಿಕ ಆನಂದ್‌ಸಿಂಗ್ ನಡೆ ಸಂಪೂರ್ಣವಾಗಿ ಗುಪ್ತ ಗಾಮಿನಿಯಾಗಿತ್ತು. ಲೋಕಸಭೆ ಉಪಚುನಾವಣೆಯಲ್ಲಿ ಸ್ವಲ್ಪ ಕಾಣಿಸಿಕೊಂಡಿದ್ದ ಅವರು, ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗ ಹೊರತುಪಡಿಸಿ ನಂತರ ಮಾಯವಾಗಿದ್ದರು.
ಇನ್ನು ವಿಜಯನಗರ ಜಿಲ್ಲೆಯಾಗಬೇಕು ಎಂಬುದು ಹಲವು ವರ್ಷಗಳಿಂದಲೂ ಕೇಳಿಬರುತ್ತಿರುವ ಒತ್ತಾಯ. ಈ ಮಾತುಗಳನ್ನು ಪದೇ ಪದೇ ಹೇಳುತ್ತಲೇ ಬಂದಿದ್ದ ಆನಂದ್‌ಸಿಂಗ್, ಎಂದೂ ಸಹ ಗಂಭೀರವಾಗಿ ಹೋರಾಟಕ್ಕೆ ಕೈ ಹಾಕಿರಲಿಲ್ಲ. ಹೀಗಾಗಿ ಆನಂದ್‌ಸಿಂಗ್ ರಾಜೀನಾಮೆಗೆ ಈ ಎರಡೂ ವಿಷಯಗಳು ಕಾರಣವಲ್ಲ ಎನ್ನಲಾಗುತ್ತಿದೆ. ಹಾಗಾಗಿ ರಾಜೀನಾಮೆ ನೀಡಿರುವ ಆನಂದ್‌ಸಿಂಗ್ ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದೆ.