ಬಳ್ಳಾರಿ: ರಾಜ್ಯದ ಮೈತ್ರಿ ಸರ್ಕಾರ ಜಿಂದಾಲ್ ಸಂಸ್ಥೆಗೆ ಅತ್ಯಂತ ಕಡಿಮೆ ಬೆಲೆಗೆ ಜಮೀನನ್ನು ಪರಭಾರೆ ಮಾಡುವುದನ್ನು ವಿರೋಧಿಸಿ ನಗರದ ಜಿಲ್ಲಾಧಿಕಾರಿ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿದ ಕನ್ನಡಪರ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಮತ್ತು ಪದಾಧಿಕಾರಿಗಳನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೆಲಹೊತ್ತು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ, ರಾಜ್ಯದ ಮೈತ್ರಿ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾನಿರತರು ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ವಾಟಾಳ್ ನಾಗರಾಜ್ ಸೇರಿ ಪದಾಧಿಕಾರಿಗಳನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ರಾಜ್ಯ ಸರ್ಕಾರ ಜಿಂದಾಲ್ ಕಂಪನಿಗೆ ಅತ್ಯಂತ ಕಡಿಮೆ ಬೆಲೆಗೆ 3667 ಎಕರೆ ಜಮೀನನ್ನು ಪರಭಾರೆ ಮಾಡಲು ಮುಂದಾಗುತ್ತಿರುವುದಕ್ಕೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಇದರಲ್ಲಿ ಏನೋ ಗೋಲ್ಮಾಲ್ ನಡೆಯುತ್ತಿದೆ ಎಂಬ ಸಂಶಯ ರಾಜ್ಯದ ಜನರಲ್ಲಿ ಮೂಡಿದೆ. ಸಿಎಂ ಸೇರಿ ಜಿಲ್ಲೆಯ ಕೆಲ ಶಾಸಕರು, ಸಚಿವರು ತಮ್ಮ ಲಾಬಿಗಾಗಿ ಸಂಪದ್ಭರಿತ ಜಮೀನನ್ನು ಜಿಂದಾಲ್ಗೆ ನೀಡುತ್ತಿರುವ ಉದ್ದೇಶದ ಹಿಂದೆ ಸಾಕಷ್ಟು ಕೈವಾಡವಿರುವ ಅನುಮಾನಗಳು ಮೂಡುತ್ತಿವೆ. ಇದು ಕಾನೂನಾತ್ಮಕವಾಗಿ ನಡೆದಿರುವ ಸೇಲ್ಡೀಡ್‌ನಾ? ಅಥವಾ ಲೂಟಿ ಹೊಡೆಯುವ ತಂತ್ರನಾ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇದರ ವಿರುದ್ಧ ಈಗಾಗಲೇ ಜನಪರ, ಕನ್ನಡಪರ, ರೈತಪರ ಸಂಘಟನೆಗಳು ಹೋರಾಟಕ್ಕಿಳಿದಿದ್ದು, ವಿವಿಧ ಪಕ್ಷಗಳ ನಾಯಕರು ಸಹ ಧ್ವನಿಯೆತ್ತಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೂ, ರಾಜ್ಯ ಸರ್ಕಾರ ಕ್ಯಾರೆ ಎನ್ನದೆ, ತನ್ನ ಸರ್ವಾಧಿಕಾರಿ ಧೋರಣೆ ಮುಂದುವರಿಸಿದೆ ಎಂದು ಆರೋಪಿಸಿದರು.
ಕೋಟ್ಯಂತರ ರೂ. ಬೆಲೆಬಾಳುವ ಜಮೀನನ್ನು ಕೇವಲ ಎಕರೆಗೆ 1.22 ಲಕ್ಷ ರೂ.ಗಳಿಗೆ ಕ್ರಯಪತ್ರ ಮಾಡಿಕೊಳ್ಳಲು ಸರ್ಕಾರ ನಿರ್ಣಯ ಕೈಗೊಂಡಿರುವುದೇಕೆ? ಖನಿಜಯುಕ್ತ ಜಮೀನು ಅತ್ಯಂತ ಮೌಲ್ಯಯುತವಾಗಿದ್ದು, ಕಡಿಮೆ ಬೆಲೆಗೆ ನೀಡುವ ಉದ್ದೇಶವೇನು? ಅದೇ ತಾಲೂಕಿನಲ್ಲಿ ಖಾಸಗಿ ಕೈಗಾರಿಕೆಗಳಿಗೆ ಎಕರೆಗೆ 30 ಲಕ್ಷ ರೂ.ಗಳಿಂದ ಒಂದು ಕೋಟಿಗೂ ಹೆಚ್ಚು ಬೆಲೆಗೆ ಪರಿಹಾರ ನೀಡಲಾಗಿದೆ. ಆದರೆ, ಜಿಂದಾಲ್ ಕಂಪನಿಗೆ ಕೇವಲ 1.22 ಲಕ್ಷ ರೂ.ಗಳಿಗೆ ಜಮೀನು ಕೊಡಲು ಕಾರಣವೇನು? ಇದರಿಂದ ಸರ್ಕಾರದ ಬೊಕ್ಕಸಕ್ಕೆ ಉಂಟಾಗುವ ನಷ್ಟವೆಷ್ಟು? ಎಂಬಿತ್ಯಾದಿ ವಿಷಯಗಳ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟೀಕರಣ ನೀಡುತ್ತಿಲ್ಲ. ಈ ಎಲ್ಲ ಅಂಶಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕು. ಒಂದುವೇಳೆ ನಿರ್ಲಕ್ಷ್ಯ ವಹಿಸಿದಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜನಸೈನ್ಯದ ರಾಜ್ಯಾಧ್ಯಕ್ಷ ಕೆ.ಎರ್ರಿಸ್ವಾಮಿ, ಗಿರೀಶ್‌ಗೌಡ, ಆರ್.ವಿಜಯಕುಮಾರ್, ರಾಜೇಶ್‌ರೆಡ್ಡಿ, ವಿರೂಪಾಕ್ಷಗೌಡ, ಬಿ.ಹೊನ್ನೂರಪ್ಪ, ಕೆ.ಎಸ್.ಅಶೋಕ್‌ಕುಮಾರ್, ಚಂಚೆಯ್ಯ, ಫಯಾಜ್‌ಬಾಷಾ, ಎಸ್.ಖಾಜಾ, ವಿ.ಶ್ರೀನಿವಾಸ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.