Advertisement

ಸಿಎಂ ಸ್ಲಂಗಳಲ್ಲಿ ವಾಸ್ತವ್ಯ ಮಾಡಲಿ

11:13 AM Jul 04, 2019 | Team Udayavani |

ಬಳ್ಳಾರಿ: ಪ್ರಾಣಿ ಪಕ್ಷಿಗಳಿಗಿಂತ ಕಡೆಯಾಗಿ ಜನರು ಜೀವನ ಸಾಗಿಸುತ್ತಿರುವ ಸ್ಲಂ ಪ್ರದೇಶಗಳಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಾಸ್ತವ್ಯ ಮಾಡಿ ಅಲ್ಲಿಯ ಸಮಸ್ಯೆಗಳನ್ನು ಅರಿತು ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸ್ಲಂ ಜನಾಂದೋಲನ ಸಂಘಟನೆಯ ರಾಜ್ಯ ಸಂಚಾಲಕ ಎ.ನರಸಿಂಹ ಮೂರ್ತಿ ಆಗ್ರಹಿಸಿದರು.

Advertisement

ನಗರದ ಗಾಂಭವನದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಜಿಲ್ಲಾ ಕೊಳಗೇರಿ ನಿವಾಸಿಗಳ ಒಕ್ಕೂಟದ ಸಹಯೋಗದಲ್ಲಿ ಬುಧವಾರ ಆಯೋಜಿಸಲಾಗಿದ್ದ ಸ್ಲಂ ಜನರ ಬೃಹತ್‌ ಸಮಾವೇಶ ಹಾಗೂ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಿಎಂ ಎಚ್.ಡಿ. ಕುಮಾರಸ್ವಾಮಿಯವರು ಕೇವಲ ಗ್ರಾಮಗಳಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ. ಸ್ಲಂ ಪ್ರದೇಶಗಳಲ್ಲಿ ಜನರು ಪ್ರಾಣಿ ಪಕ್ಷಿಗಳಿಗಿಂತ ಕಡೆಯಾಗಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಘನತೆಯಿಂದ ಬದುಕು ಹಕ್ಕು ಕಲ್ಪಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಹೀಗಾಗಿ ಗ್ರಾಮಗಳಲ್ಲಿ ವಾಸ್ತವ್ಯ ಮಾಡುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸ್ಲಂ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿ, ಅಲ್ಲಿನ ಸಮಸ್ಯೆಗಳನ್ನು ಅರಿತು ಆದ್ಯತೆಯ ಮೇಲೆ ಇತ್ಯರ್ಥ ಪಡಿಸುವ ಮೂಲಕ ಸ್ಲಂ ಪ್ರದೇಶಗಳೊಂದಿಗೆ ಅಲ್ಲಿನ ಜನರನ್ನು ಅಭಿವೃದ್ಧಿಪಡಿಸಬೇಕು ಎಂದವರು ಒತ್ತಾಯಿಸಿದರು.

ರಾಜ್ಯದಲ್ಲಿ ರಾಜಧಾನಿ ಬೆಂಗಳೂರು ಬಿಟ್ಟರೆ ಗಣಿನಾಡು ಬಳ್ಳಾರಿಯಲ್ಲೇ ಹೆಚ್ಚಿನ ಮಟ್ಟದಲ್ಲಿ ಕೊಳಚೆ ಪ್ರದೇಶಗಳಲ್ಲಿ ಜನರು ವಾಸಿಸುತ್ತಿದ್ದಾರೆ. ನಗರದ ಅಭಿವೃದ್ಧಿಗೆ ಸ್ಲಂ ನಿವಾಸಿಗಳ ಕೊಡುಗೆ ಅಪಾರ. ನಮ್ಮ ಕೊಡುಗೆಯನ್ನು ಯಾರು ಸ್ಮರಿಸುತ್ತಿಲ್ಲ. ಕೊಳಗೇರಿ ಎಂದರೆ ಸಮಸ್ಯೆಗಳ ಕೇಂದ್ರ ಬಿಂದು ಎಂದು ಬಿಂಬಿಸಲಾಗುತ್ತಿದೆ. ನಮ್ಮಲ್ಲಿರುವ ಶ್ರಮಕ್ಕೆ ಬೆಲೆ ಸಿಗುತ್ತಿಲ್ಲ. ನಮ್ಮ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಅಘೋಷಿತ ಕೊಳಚೆ ಪ್ರದೇಶಗಳಿಗೆ ಅನುದಾನ ಒದಗಿಸಿ ಅಭಿವೃದ್ಧಿ ಒದಗಿಸಬೇಕು. ಸ್ಲಂ ಜನರ ಮತ ಪಡೆದವರು ಅಭಿವೃದ್ಧಿ ಹೊಂದುತಿದ್ದಾರೆ ಹೊರತು, ಸ್ಲಂ ಜನರು ಅಭಿವೃದ್ಧಿ ಹೊಂದುತ್ತಿಲ್ಲ. ಸ್ಥಳೀಯ ಸಂಸ್ಥೆಗಳ ಅನುದಾನದಲ್ಲಿ ಅಭಿವೃದ್ಧಿ ಮಾಡಬೇಕು ಎಂದವರು ತಿಳಿಸಿದರು.

ಸ್ಲಂ ನಿವಾಸಿಗಳಿಗಿಲ್ಲ ಮನೆ: ರಾಜ್ಯದಲ್ಲಿ 6 ಕೋಟಿ ಜನರು ಇದ್ದಾರೆ. ಇದರಲ್ಲಿ 90 ಲಕ್ಷ ಜನರು ಕೊಳಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ಶೇ. 2ರಷ್ಟು ಭೂ ಒಡೆತನ ಮಾತ್ರ ಸ್ಲಂ ನಿವಾಸಿಗಳಿಗೆ ಲಭಿಸಿದೆ. ಹಾಗಾದರೆ ಈ ಸರ್ಕಾರಕ್ಕೆ ಸ್ಲಂ ನಿವಾಸಿಗಳ ಬಗ್ಗೆ ಯಾವ ರೀತಿ ಕಾಳಜಿಯಿದೆ ಎಂದು ಪ್ರಶ್ನಿಸಿದ ಅವರು, ಸಮಾಜದಲ್ಲಿ ಗೌರವಯುತವಾಗಿ ಬದುಕುವುದು ಯಾವಾಗ? ಉದ್ಯೋಗ ಸಮರ್ಪಕವಾಗಿ ಒದಗಿಸಬೇಕು. ಭೂ ಒಡೆತನದಲ್ಲಿ ಪಾಲು ಕೊಡಬೇಕು. ದೇಶ ಅಭಿವೃದ್ದಿ ಹೊಂದಿದೆ ಎನ್ನಲಾಗುತ್ತಿದೆ. ನಾವು ಯಾವಾಗ ಅಭಿವೃದ್ಧಿ ಹೊಂದುವುದು ಎಂದು ಪ್ರಶ್ನಿಸಿದರು.

Advertisement

ಕಾರ್ಯಕ್ರಮದಲ್ಲಿ ಸಂಘದ ಹೇಮರಾಜ, ಪಾಲಿಕೆ ಉಪ ಆಯುಕ್ತ ಸಿ. ಭೀಮಣ್ಣ, ಕಾರ್ಯಪಾಲಕ ಅಭಿಯಂತರ ಹೇಮಂತ, ಗಾದಿಲಿಂಗಪ್ಪ, ರಾಮಚಂದ್ರಪ್ಪ, ಶೇಖರಬಾಬು, ಪದಾಕಾರಿಗಳು, ಕಾರ್ಯಕರ್ತರು ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next