Advertisement

ಹೂಳಿನ ಜಾತ್ರೆಗೆ ದೇಣಿಗೆ ಸಂಗ್ರಹ ಕ್ಷೀಣ: ಪುರುಷೋತ್ತಮಗೌಡ

04:47 PM Jun 10, 2019 | Team Udayavani |

ಬಳ್ಳಾರಿ: ತುಂಗಭದ್ರಾ ರೈತ ಸಂಘದಿಂದ ಸತತ ಮೂರನೇ ಬಾರಿಗೆ ತುಂಗಭದ್ರಾ ಜಲಾಶಯದಲ್ಲಿ ಕೈಗೊಳ್ಳಲಾಗಿದ್ದ ತುಂಗಭದ್ರಾ ಹೂಳಿನ ಜಾತ್ರೆಗೆ ದಾನಿಗಳಿಂದ ಸಂಗ್ರಹವಾಗಿದ್ದ ದೇಣಿಗೆಗಿಂತಲೂ 30 ಸಾವಿರಕ್ಕೂ ಹೆಚ್ಚು ಸಂಘದಿಂದಲೇ ಖರ್ಚು ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಹೇಳಿದರು.

Advertisement

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳನ್ನು ತೆರವುಗೊಳಿಸಲು ಎಚ್ಚೆತ್ತುಕೊಳ್ಳಬೇಕಿದ್ದ ರಾಜ್ಯ ಸರ್ಕಾರ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ತುಂಗಭದ್ರಾ ರೈತ ಸಂಘ ಸತತ ಮೂರನೇ ಬಾರಿಗೆ ತುಂಗಭದ್ರಾ ಹೂಳಿನ ಜಾತ್ರೆ ಹೆಸರಲ್ಲಿ ಹೂಳೆತ್ತುವ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ 2017ರಲ್ಲಿ ಸತತ 30 ದಿನಗಳ ಕಾಲ 80 ಟ್ರ್ಯಾಕ್ಟರ್‌, 20 ಲಾರಿಗಳು, 6 ಜೆಸಿಬಿ ಯಂತ್ರಗಳಿಂದ ಹೂಳೆತ್ತಲಾಗಿತ್ತು. ಆಗ 30 ಲಕ್ಷ ರೂ. ಖರ್ಚು ಮಾಡಲಾಗಿತ್ತು. 2018ರಲ್ಲಿ ಒಂದು ದಿನದ ಮಟ್ಟಿಗೆ 75 ಟ್ರ್ಯಾಕ್ಟರ್‌, 5 ಜೆಸಿಬಿ ಯಂತ್ರಗಳನ್ನು ಬಳಕೆ ಮಾಡಿ ಒಂದು ಲಕ್ಷ ರೂ. ಖರ್ಚು ಮಾಡಲಾಗಿತ್ತು. 2019ರಲ್ಲಿ ಮೂರನೇ ಬಾರಿಗೆ ಮೇ 29 ರಿಂದ ಜೂ.2ರ ವರೆಗೆ ಐದು ದಿನಗಳ ಕಾಲ 25 ಟ್ರ್ಯಾಕ್ಟರ್‌ಗಳಿಂದ ಹೂಳನ್ನು ತೆರವುಗೊಳಿಸಲಾಗಿದ್ದು, ಇದಕ್ಕಾಗಿ ದಾನಿಗಳಿಂದ 5,47,100 ರೂ.ಗಳು ಸಂಗ್ರಹವಾದರೆ, 5,77,428 ರೂ. ಖರ್ಚು ಮಾಡಲಾಗಿದೆ. 30 ಸಾವಿರಕ್ಕೂ ಹೆಚ್ಚು ಹಣ ಸಂಘದಿಂದ ಹೆಚ್ಚುವರಿಯಾಗಿ ಖರ್ಚು ಮಾಡಲಾಗಿದೆ. ಈ ಕುರಿತ ಲೆಕ್ಕಪತ್ರಗಳನ್ನು ದೇಣಿಗೆ ನೀಡಿದ ದಾನಿಗಳ ಮನೆಗೂ ತಲುಪಿಸಲಾಗುವುದು ಎಂದು ತಿಳಿಸಿದರು.

ಕೇವಲ ಪುಸ್ತಕ ಓದಿ ಇಂಜಿನಿಯರ್‌ಗಳಾಗಿರುವ ಇವರಿಗೆ ಸಾಮಾನ್ಯ ರೈತನಿಗೆ ಇರುವ ಅನುಭವವಿಲ್ಲ. ಇಂಥಹ ಇಂಜಿನಿಯರ್‌ಗಳು ಸರ್ವೆ ನಡೆಸಿ ಜಲಾಶಯಲ್ಲಿ ಹೂಳು ತೆಗೆಯಲು ಸಾಧ್ಯವಿಲ್ಲ. ಒಂದು ವೇಳೆ ಪ್ರಯತ್ನಿಸಿದರೆ ಹೂಳನ್ನು ಹಾಕಲು 66 ಸಾವಿರ ಎಕರೆ ಜಮೀನು ಬೇಕು ಎಂದು ತಪ್ಪು ಮಾಹಿತಿ ನೀಡಿ ಜಲಾಶಯವನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು.

ಎಲ್ಎಲ್ಸಿ ಕಾಲುವೆ ಬಗ್ಗೆ ಗೊಂದಲ ಬೇಡ: ತುಂಗಭದ್ರಾ ಬಲದಂಡೆ ಎಲ್ಎಲ್ಸಿ ಕಾಲುವೆ ಆಧುನೀಕರಣ ವಿಷಯದಲ್ಲಿ ರೈತರಲ್ಲಿ ಯಾವುದೇ ಗೊಂದಲ ಬೇಡ. ಕಾಲುವೆಯನ್ನು ಆಧುನೀಕರಣ ನೆಪದಲ್ಲಿ ಯಾವುದೇ ಕಾರಣಕ್ಕೂ ಅಗಲೀಕರಣ ಮಾಡಲಾಗುವುದಿಲ್ಲ. ಈ ಕುರಿತು ಸಂಬಂಧಪಟ್ಟ ಇಂಜಿನಿಯರ್‌ಗಳನ್ನು ಸಂಪರ್ಕಿಸಿ ಅಧಿಕೃತವಾಗಿ ಮಾಹಿತಿ ಪಡೆಯಲಾಗಿದೆ. ಕಾಲುವೆ ಈಗಿರುವ ಅಗಲವನ್ನು ಒಂದು, ಒಂದುವರೆ ಅಡಿಗಳಷ್ಟು ಕಡಿಮೆ ಮಾಡಲಾಗುತ್ತಿದೆ. ಆದ್ದರಿಂದ ರೈತರು ಯಾವುದೇ ಕಾರಣಕ್ಕೆ ಗೊಂದಲಕ್ಕೀಡಾಗದೇ ಅನುಮಾನವಿದ್ದಲ್ಲಿ ದೂರವಾಣಿಗೆ ಸಂಪರ್ಕಿಸಿದರೆ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ರೈತರ ಅನುಮಾನವನ್ನು ದೂರ ಮಾಡಲಾಗುವುದು. ಜಿಂದಾಲ್ಗೆ ಜಮೀನು ಪರಭಾರೆಯಿಂದಾಗಿ ರೈತರಿಗೆ ಯವುದೇ ಲಾಭವಿಲ್ಲ. ಜಮೀನಿಗೆ ಸಂಬಂಧಿಸಿದಂತೆ ದಶಕದ ಹಿಂದೆಯೇ ಈ ಎಲ್ಲ ಮಾತುಗಳು ನಡೆದಿವೆ. ಜಿಂದಾಲ್ ಮತ್ತು ಸರ್ಕಾರದ ನಡುವಿನ ಒಳಒಪ್ಪಂದಕ್ಕೆ ಮೈತ್ರಿ ಸರ್ಕಾರದ ಮಾಜಿ ಸಚಿವರೇ ಆರೋಪಿಸುತ್ತಾರೆ ಹೊರತು ಇದರಿಂದ ಸಾಮಾನ್ಯ ಜನರಿಗೆ ಯಾವುದೇ ಲಾಭಗಳಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ವೀರನಗೌಡ, ಕುರುಬರಮೂರ್ತಿ, ಜಾಲಿಹಾಳ್‌ ಶ್ರೀಧರಗೌಡ, ಗಂಗಾವತಿ ವೀರೇಶ್‌, ದರೂರು ರಂಜಾನ್‌ಸಾಬ್‌, ಶಾನವಾಸಪುರ ಶರಣನಗೌಡ ಇತರರಿದ್ದರು.

Advertisement

ಜಲಾಶಯದಲ್ಲಿನ ಹೂಳು ತೆರವುಗೊಳಿಸುವ ಹೂಳಿನ ಜಾತ್ರೆಯನ್ನು ಮುಂದಿನ ವರ್ಷದಿಂದ ಸಾಂಕೇತಿಕವಾಗಿ ಮಾಡಲ್ಲ. ದೀರ್ಘಾವಧಿ ಯೋಜನೆಯನ್ನಾಗಿ ಮಾಡಿಕೊಂಡು ಜನವರಿ ತಿಂಗಳಲ್ಲೇ ಹೂಳೆತ್ತುವ ಕೆಲಸಕ್ಕೆ ಚಾಲನೆ ನೀಡಲಾಗುವುದು. ಜಲಾಶಯದ ಇಂಜಿನಿಯರ್‌ಗಳು, ಅಧಿಕಾರಿಗಳು ಜಲಾಶಯದಲ್ಲಿನ ಹೂಳೆತ್ತುವುದು ಅಸಾಧ್ಯ ಎಂದು ರೈತರನ್ನು, ಜನಪ್ರತಿನಿಧಿಗಳನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು.
ದರೂರು ಪುರುಷೋತ್ತಮಗೌಡ,
ತುಂಗಭದ್ರಾ ರೈತ ಸಂಘದ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next