Advertisement
ನಗರದ ಜಿಲ್ಲಾ ಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಂಪಿ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 4 ಕೋಟಿ ರೂ. ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ 5 ಕೋಟಿ ರೂ.ಗಳ ಅನುದಾನ ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ವರ್ಷದಲ್ಲಿ ಮುಖ್ಯ ವೇದಿಕೆಯಾಗಿ ಗಾಯಿತ್ರಿಪೀಠ ವೇದಿಕೆ, ಎದುರು ಬಸವಣ್ಣ ವೇದಿಕೆ, ವಿರುಪಾಕ್ಷೇಶ್ವರ ದೇವಸ್ಥಾನ ವೇದಿಕೆ, ಸಾಸಿವೆಕಾಳು ವೇದಿಕೆ ಸೇರಿ ಒಟ್ಟು ನಾಲ್ಕು ವೇದಿಕೆಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದರು.
Related Articles
Advertisement
ತಹಶೀಲ್ದಾರ್ ನೇತೃತ್ವದಲ್ಲಿ ತಾಲೂಕುವಾರು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಸ್ಪರ್ಧೆಯಲ್ಲಿ ವಿಜೇತ ಕಲಾತಂಡಕ್ಕೆ ಹಂಪಿ ಉತ್ಸವದ ಮುಖ್ಯ ವೇದಿಕೆಯಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಹಂಪಿ ಉತ್ಸವದ ಬಳಿಕವೂ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪ್ರತಿ ತಿಂಗಳು 2ನೇ ಶನಿವಾರ ಒಂದೊಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಮಾಡಿಕೊಡಲಾಗಿದೆ. ವಿಜಯನಗರ ವೈಭವದ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಏರ್ಪಡಿಸಲಾಗಿದೆ. ಹಂಪಿ ಬೈ ನೈಟ್ ಕಾರ್ಯಕ್ರಮವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ವಿವರಿಸಿದರು.
ಎರಡು ದಿನಗಳ ಹಂಪಿ ಉತ್ಸವ ಕಾರ್ಯಕ್ರಮದಲ್ಲಿ ಜಾನಪದ ವಾಹಿನಿ, ಶೋಭಾಯಾತ್ರೆ, ಪುಸ್ತಕ ಪ್ರದರ್ಶನ, ಶಿಲ್ಪಕಲೆ, ಚಿತ್ರಕಲೆ ಶಿಬಿರ ಏರ್ಪಡಿಸಲಾಗುತ್ತಿದೆ. ಈ ಎರಡು ದಿನಗಳ ಕಾಲ ಮನೋರಂಜನೆ, ವಸ್ತು ಪ್ರದರ್ಶನ, ಕರಕುಶಲ ಪ್ರದರ್ಶನ, ದೇಶಿ ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಕುಸ್ತಿ ಪ್ರದರ್ಶನ, ಅಕ್ಕಿಕಾಳು, ಮರಳು ಚಿತ್ರ ಸ್ಪರ್ಧೆ, ಚಿತ್ರಕಲೆ, ರಂಗೋಲಿ ಸ್ಪರ್ಧೆ, ಲೈಟ್ ಶೋ, ಡಾಗ್ ಶೋ, ಮತ್ಸ್ಯಮೇಳ, ಹಂಪಿ ಬೈಸ್ಕೈ ಮುಂತಾದ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತದೆ ಎಂದು ಹೇಳಿದರು.
ಪವಾಡ ಬಯಲು ಕಾರ್ಯಕ್ರಮ: ಹಂಪಿ ಉತ್ಸವದಲ್ಲಿ ಮೊದಲ ಬಾರಿಗೆ ಪವಾಡ ಬಯಲು ಮತ್ತು ಮ್ಯಾಜಿಕ್ ಷೋ ಕಾರ್ಯಕ್ರಮ ಆಯೋಜಿಸುವ ಕುರಿತು ಚಿಂತನೆ ನಡೆದಿದೆ. ಸಂಜೆ ವೇಳೆ ಎಲ್ಲ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಹಗಲು ವೇಳೆ ಸಾಸಿವೆಕಾಳು ಗಣಪ ದೇವಸ್ಥಾನ ಬಳಿಯ ವೇದಿಕೆಯಲ್ಲಿ ಹುಲಿಕಲ್ ನಟರಾಜ್, ಗುರುರಾಜ್ ಕರ್ಜಗಿ ಸೇರಿದಂತೆ ಇನ್ನಿತರೆ ಪವಾಡ ಬಯಲು ಕಾರ್ಯಕ್ರಮ ನಡೆಸುವವರನ್ನು ಕರೆಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ಎಸ್‌ಪಿ ಸಿ.ಕೆ. ಬಾಬಾ ಮಾತನಾಡಿ, ಹಂಪಿ ಉತ್ಸವದಲ್ಲಿ ಭದ್ರತೆಗೆ ಸಂಬಂಧಿಸಿದಂತೆ ಇಲಾಖೆಯ ಎಲ್ಲ ಹಂತದ ಅ ಧಿಕಾರಿಗಳು ಸೇರಿ ಒಟ್ಟು 2 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗುತ್ತದೆ. ಭದ್ರತೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಂಜುನಾಥ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಪ್ಪ ಇದ್ದರು.