ಬಳ್ಳಾರಿ: ವಿಘ್ನ ನಿವಾರಕ ಗಣೇಶನ ಆರಾಧನೆ ಗಣಿ ಜಿಲ್ಲೆಯಲ್ಲಿ ವಿಜೃಂಭಣೆಯಿಂದ ಮಾಡಲಾಗುತ್ತಿದ್ದು, ಸೋಮವಾರ ನಗರದ ವಿವಿಧ ಬಡಾವಣೆಗಳಲ್ಲಿ ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಯಿತು.
ಹಬ್ಬದ ನಿಮಿತ್ತ ಹೊಸಬಟ್ಟೆ ಧರಿಸಿ, ನಾನಾ ಕಡೆ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿಯ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು. ಕೆಲವರು ಮನೆಯಲ್ಲೇ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದರೇ, ಇನ್ನು ಕೆಲವರು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗುವ ಈ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಹಬ್ಬದ ನಿಮಿತ್ತ ಮಾರುಕಟ್ಟೆಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಖರೀದಿಸಿ, ವಿಶೇಷ ಪೂಜೆ ಸಲ್ಲಿಸಿರುವುದು ಸಾಮಾನ್ಯವಾಗಿ ಕಂಡು ಬಂತು. ವಿವಿಧ ಭಕ್ಷ ್ಯಗಳನ್ನು ಮನೆಯಲ್ಲಿ ತಯಾರಿಸಿ ಗಣೇಶನಿಗೆ ನೈವೇದ್ಯ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಗಣೇಶನಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ, ಅರ್ಚನೆ ಸೇರಿದಂತೆ ವಿವಿಧ ಮಂತ್ರಘೋಷಗಳೊಂದಿಗೆ ಗಣೇಶನನ್ನು ಪೂಜಿಸಿ ಭಕ್ತಿ ಸಮರ್ಪಿಸಿದರು.
ಗಣೇಶ ಪ್ರತಿಷ್ಠಾಪನೆ: ನಗರದ ಸೇರಿದಂತೆ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ನಗರದ ನೆಹರೂ ಕಾಲೋನಿ, ಬಸವೇಶ್ವರ ನಗರ, ಕೌಲ್ ಬಜಾರ್, ಬೆಂಗಳೂರು ರಸ್ತೆ, ಶಾಸ್ತ್ರೀ ಕಾಲೋನಿ, ಹೌಸಿಂಗ್ ಬೋರ್ಡ್ ಕಾಲೋನಿ, ಸತ್ಯನಾರಾಯಣ ಪೇಟೆ, ಗಾಂಧಿನಗರ ಸೇರಿದಂತೆ ನಗರದ ನಾನಾ ಕಡೆ ಬೃಹತ್ ಆಕಾರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಸೋಮವಾರ ಸಂಜೆ ನಾಗರಿಕರು ತಂಡೋಪ ತಂಡವಾಗಿ ತೆರಳಿ ಗೌರಿ ಗಣೇಶ ಮೂರ್ತಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಹಬ್ಬದ ನಿಮಿತ್ತ ಹೊಸಪೇಟೆ ನಗರ ರಾಣಿಪೇಟೆ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿದ ಗೌರಿ ಗಣೇಶ ಮೂರ್ತಿ ನಾಗರಿಕರು ದರ್ಶನ ಪಡೆದು ಸಂಭ್ರಮಿಸಿದರು. ನಂತರ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್, ನರಸಿಂಹ ಮೂರ್ತಿ ಸಂಗಡಿಗರಿಂದ ಹಾಸ್ಯಸಂಜೆ ಕಾರ್ಯಕ್ರಮ ನಡೆಯಿತು.
ನಗರದ ಸಿಂಗಿ ಕಾಂಪೌಂಡ್ ಬಳಿ ವಿನಾಯಕ ಮಿತ್ರ ಮಂಡಳಿ 42ನೇ ವರ್ಷದ ಗಣೇಶ ಮೂರ್ತಿ, ವಾಲ್ಮೀಕಿ ಚೌಕಿ ಹತ್ತಿರ ವಿನಾಯಕ ಮಿತ್ರ ಮಂಡಳಿ ವಾಲ್ಮೀಕಿ 15ನೇ ವರ್ಷದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅನಂತಪುರ ರಸ್ತೆಯಲ್ಲಿ ಸರ್ವ ಸಿದ್ಧಿ ವಿನಾಯಕ ಮಿತ್ರ ಮಂಡಳಿಯಿಂದ ಪ್ರತಿಷ್ಠಾಪಿಸಲಾಗಿರುವ 20ನೇ ವರ್ಷದ ಗಣೇಶ ಮೂರ್ತಿಯ ಪಕ್ಕದಲ್ಲಿ ಸುಭದ್ರ ಮತ್ತು ಬಲರಾಮನ ಮೂರ್ತಿ ಸಹ ಪ್ರತಿಷ್ಠಾಪಿಸಲಾಗಿದೆ.
ತಾಳೂರು ರಸ್ತೆಯ ಶ್ರೀನಗರದ ಗೋವಿಂದಪ್ಪ ಕಲ್ಯಾಣ ಮಂಟಪದಲ್ಲಿ ಬಾಲ ವಿನಾಯಕ ಗೆಳೆಯರ ಬಳಗದಿಂದ 6ನೇ ವರ್ಷದ ಮೂರ್ತಿ ಪ್ರತಿಷ್ಠಾಪಿಸಿದ್ದರೇ ಎಸ್‌ಎನ್‌ಪೇಟೆಯ 3ನೇ ಕ್ರಾಸ್‌ನ ಮೂರ್ತಿ ಕಾಂಪ್ಲೆಕ್ಸ್‌ನಲ್ಲಿ ಗಜಮುಖ ಫ್ರೆಂಡ್ಸ್ ಅಸೋಸಿಯೇಷನ್‌ನಿಂದ ಗಣೇಶ ಮೂರ್ತಿ, ನಗರದ ವಿವಿಧ ಬಡಾವಣೆ, ಏರಿಯಾಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದೆ.