Advertisement

ಯೋಗ-ಪ್ರಾಣಾಯಾಮದಿಂದ ಆರೋಗ್ಯ ವೃದ್ಧಿ: ಸ್ವಾಮೀಜಿ

04:23 PM Jul 22, 2019 | Naveen |

ಬಳ್ಳಾರಿ: ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಯೋಗಾಭ್ಯಾಸ ಮತ್ತು ಪ್ರಾಣಾಯಾಮ ಅಳವಡಿಸಿ ಕೊಳ್ಳುವುದರಿಂದ ಆರೋಗ್ಯವಂತ ಬದುಕನ್ನು ಕಟ್ಟಿಕೊಳ್ಳಬಹುದಾಗಿದೆ ಎಂದು ಕುರೇಕುಪ್ಪ ರೇಣುಕಾಶ್ರಮದ ಶರಣಬಸವ ಸ್ವಾಮೀಜಿ ತಿಳಿಸಿದರು.

Advertisement

ಜಿಲ್ಲೆಯ ಸಂಡೂರು ತಾಲೂಕು ವಡ್ಡು ಗ್ರಾಮದ ಲಿಟಲ್ ಫ್ಲವರ್‌ ಶಾಲೆಯಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಉಚಿತ ಯೋಗ ಮತ್ತು ಪ್ರಾಣಾಯಾಮ ತರಬೇತಿ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.

ಪ್ರತಿನಿತ್ಯ ಯೋಗಾಭ್ಯಾಸ ಮಾಡುವುದರಿಂದ ಉತ್ತಮ ಆರೋಗ್ಯದ ಜೊತೆಗೆ ಮನಸ್ಸು ಸ್ಪಷ್ಟ ಹಾಗೂ ಕೇಂದ್ರೀಕೃತವಾಗಿರುತ್ತದೆ. ಒತ್ತಡವು ನಿಯಂತ್ರಣದಲ್ಲಿರುತ್ತದೆ. ಹಾಗೆ ನಮ್ಮ ದೇಹ ಹಾಗೂ ಮನಸ್ಸಿಗೆ ಸಂತೋಷ ಹಾಗೂ ಶಕ್ತಿಯನ್ನು ನೀಡುತ್ತದೆ.ಪ್ರಾಣಾಯಾಮದಿಂದ ದೇಹದಲ್ಲಿ ಸಕಾರಾತ್ಮಕ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಆತಂಕ, ಖನ್ನತೆ ಕಡಿಮೆ ಮಾಡುತ್ತದೆ. ಜೊತೆಗೆ ಪ್ರಾಣಾಯಾಮ ಮಾಡುವುದರಿಂದ ಉಸಿರಾಟದ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದರು.

ಯೋಗಗುರು ಎಸ್‌.ಎಂ. ಕೊಟ್ರಯ್ಯ ಮಾತನಾಡಿ, ಇಂದಿನ ಜನರು ಕೆಲಸದ ಒತ್ತಡಕ್ಕೆ ಸಿಲುಕಿ ಮನಸ್ಸಿನ ಖನ್ನತೆಗೆ ಒಳಗಾಗುತ್ತಿದ್ದಾರೆ. ದೈನಂದಿನ ಕಾರ್ಯಶೀಲತೆಗೆ ಹಿನ್ನಡೆಯಾಗುತ್ತಿದೆ. ಈ ಎಲ್ಲದರಿಂದ ಹೊರಬರಲು, ದಿನಪೂರ್ತಿ ಲವಲವಿಕೆಯಿಂದ ಇರಲು ಯೋಗಾಭ್ಯಾಸ, ಪ್ರಾಣಾಯಾಮ ಹಾಗೂ ಧ್ಯಾನ ನಮಗೆ ಪರಿಹಾರ ನೀಡುತ್ತದೆ. ಅತಿಯಾದ ಆಹಾರ ಸೇವನೆಯೂ ಕೂಡ ರೋಗಕ್ಕೆ ಆಹ್ವಾನಿಸಿದಂತೆ ಎಂದ ಅವರು, ಹಿತ-ಮಿತ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಯೋಗಾಭ್ಯಾಸ ಮತ್ತು ಪ್ರಾಣಾಯಮವನ್ನು ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಒಂದು ವಾರದ ಕಾಲ ನಡೆದ ಶಿಬಿರದಲ್ಲಿ ಯೋಗಾಸಾನ, ಪ್ರಾಣಾಯಾಮ, ಧ್ಯಾನದ ಕುರಿತು ತಿಳಿಸಿಕೊಡಲಾಯಿತು. ಇದೇ ವೇಳೆ ಶಿಬಿರಾರ್ಥಿಗಳಿಂದ ಕುರೇಕುಪ್ಪದ ರೇಣುಕಾಶ್ರಮದ ಶರಣಬಸವ ಸ್ವಾಮೀಜಿ ಹಾಗೂ ಯೋಗ ಗುರು ಎಸ್‌.ಎಂ. ಕೊಟ್ರಯ್ಯ ಅವರನ್ನು ಸನ್ಮಾನಿಸಲಾಯಿತು.

Advertisement

ಡಾ| ಕೆ.ಆರ್‌.ವೆಂಕಟೇಶ್‌, ಯೋಗ ಮಾಧವ, ಸಿ.ವೀರೇಶ, ಎನ್‌.ರಮೇಶ್‌, ಸಿ.ಬಸ್ಸಪ್ಪ, ವೀರೇಶ್‌, ನಾಗರಾಜ ಇದ್ದರು. ಬರ್ಮಪ್ಪ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next