ಬಳ್ಳಾರಿ: ಐಎಎಸ್ ಎಂದರೆ ನಮ್ಮ ಆಡು ಭಾಷೆಯಲ್ಲಿ ಐ ಯಮ್ ಆಲ್ವೇಸ್ಸ್ ಸೇಫ್ ಅಂತಾರೆ ಆದರೆ ದಕ್ಷ ಜಿಲ್ಲಾಧಿಕಾರಿ ಆದ ಡಾ.ರಾಮ್ ಪ್ರಸಾತ್ ಮನೋಹರ್ ಅವರು ಐ ಯಮ್ ಆಲ್ವೇಸ್ಸ್ ಸರ್ವಿಸ್ ಆಗಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. 3 ವರ್ಷಗಳ ಕಾಲ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ ಬಣ್ಣಿಸಿದರು.
ನಗರದ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ಜಿಲ್ಲಾಡಳಿತ, ವಿವಿಧ ಸಂಘ ಸಂಸ್ಥೆಗಳಿಂದ ಹಮ್ಮಿಕೊಂಡಿದ್ದ ನಿಕಟಪೂರ್ವ ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಪ್ರತಿಯೊಂದು ತಾಲೂಕಿನಲ್ಲಿ ಪ್ರತ್ಯೇಕ ಸಮಸ್ಯೆ ಇರುತ್ತದೆ. ಅದನ್ನು ಸಮತೋಲನ ರೀತಿಯಲ್ಲಿ ನಿರ್ವಹಿಸಲು ಎಲ್ಲಾ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಎಂಬುವುದು ಎರಡು ಕಣ್ಣು ಇದ್ದಂತೆ; ಆ ಎರಡನ್ನು ಸರಿದೂಗಿಸಿ ಜನರಿಗೆ ಸೇವೆ ಸಲ್ಲಿಸಿದ ಅಧಿಕಾರಿಗಳಾಗಿದ್ದಾರೆ ಎಂದು ಡಾ. ರಾಮ್ ಪ್ರಸಾತ್ ಅವರ ಸೇವೆಗೆ ಪ್ರಶಂಸೆ ವ್ಯಕ್ತಪಡಿಸಿದರು.
ಜಿಲ್ಲೆಯ ಸುತ್ತಮುತ್ತ ಹಳ್ಳಿಗಳಲ್ಲಿ ಸಣ್ಣ ಸಣ್ಣ ಕೈಗಾರಿಕೆಗಳಾಗಲಿ, ಉದ್ಯೋಗ ಸೃಷ್ಟಿ, ಬಡವರಿಗೆ ಮನೆ ಸೂರು, ಶೈಕ್ಷಣಿಕ ಅಭಿವೃದ್ಧಿ ನೀಡುವುದರ ಜತೆಗೆ ಇತರೆ ಯೋಜನೆ ರೂಪಿಸಿ ಜನ ಸಾಮಾನ್ಯರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಆ ಮೂಲಕ ಸಾರ್ಥಕ ಸೇವೆ ಸಲ್ಲಿಸಿದ್ದಾರೆ ಎಂದು ಗುಣಗಾನ ಮಾಡಿದ ಸಚಿವ ತುಕಾರಾಂ, ಎಲ್ಲೆ ಇದ್ದರೂ ಸಮಸ್ಯೆಗಳಿಗೆ ಸ್ಪಂದಿಸಿ, ಅದಕ್ಕೆ ಸಂಬಂಧಿಸಿದ ಸೂಕ್ತ ಸಲಹೆ ನೀಡುವುದರ ಜತೆಗೆ ಜನರಲ್ಲಿ ಆ ಕುರಿತು ಮನವರಿಕೆ ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿದ ನಿಕಟಪೂರ್ವ ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮಾತನಾಡಿ, ನಾನು ಮೊದಲಿಗೆ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದಾಗ ಇಲ್ಲಿನ ಜನರ ಮತ್ತು ಅಧಿಕಾರಿಗಳ ಮನೋಭಾವ ಅರಿತು ಈ ಜಿಲ್ಲೆಯನ್ನು ಒಂದು ಮಾದರಿ ಜಿಲ್ಲೆಯನ್ನಾಗಿ ಮಾರ್ಪಡು ಮಾಡಬೇಕು ಎಂದು ಪಣತೊಟ್ಟು ಸಕಾಲ ಯೋಜನೆಯಡಿ ಇಡೀ ರಾಜ್ಯಕ್ಕೆ ಕಡೆತ ವಿಲೇವಾರಿ ಮಾಡುವಲ್ಲಿ ನಮ್ಮ ಬಳ್ಳಾರಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ 25 ಸಾವಿರ ಅಹವಾಲು ಸ್ವೀಕರಿಸಿ ಯಾವುದೇ ಲೋಪವಿಲ್ಲದೇ 16 ಸಾವಿರ ಜನರಿಗೆ ಪಟ್ಟ ನೀಡುವ ಕೆಲಸ ಮಾಡಿದ್ದಾರೆ. ಅದೇ ರೀತಿಯಲ್ಲಿ ಶಿಕ್ಷಣ ಇಲಾಖೆ, ಕೈಗಾರಿಕಾ ಇಲಾಖೆ, ಇತರೆ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳು ಸಹಕಾರ ನೀಡಿದ್ದು, ಇದರಿಂದ ಜಿಲ್ಲೆಯ ಅಭಿವೃದ್ಧಿಗೆ ಸಾಧ್ಯವಾಗಿದೆ ಎಂದರು.
ಕಲ್ಯಾಣ ಸ್ವಾಮೀಜಿ, ರೈತ ಮುಖಂಡರಾದ ಪುರುಷೋತ್ತಮಗೌಡ, ಪನ್ನಾರಾಜ್, ಜಿಪಂ ಸಿಇಒ ನಿತೀಶ್, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಹೊಸಪೇಟೆಯ ಸಹಾಯಕ ಆಯುಕ್ತ ಲೋಕೇಶ್, ಜಿಲ್ಲಾಧಿಕಾರಿ ಪತ್ನಿ ದಿವ್ಯಪ್ರಭು, ಸ್ವಚ್ಛ ಭಾರತ ಅಭಿಯಾನದ ಮುಖ್ಯಸ್ಥ ರಿಜ್ವಾನ ಸೇರಿದಂತೆ ಇತರರು ಜಿಲ್ಲಾಧಿಕಾರಿಗಳ ಕೆಲಸ-ಕಾರ್ಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಸಹಾಯಕ ಆಯುಕ್ತ ರಮೇಶ್ ಕೋನರೆಡ್ಡಿ, ಪಾಲಿಕೆಯ ಆಯುಕ್ತೆ ತುಷಾರಮಣಿ, ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಪೌರ ಕಾರ್ಮಿಕರು, ಸಾರ್ವಜನಿಕರು ಇದ್ದರು.