Advertisement

ಆಂಗ್ಲ ಮಾಧ್ಯಮ ಶಾಲೆ ಆರಂಭಕ್ಕೆ ವಿರೋಧ

03:45 PM May 26, 2019 | Naveen |

ಬಳ್ಳಾರಿ: ರಾಜ್ಯ ಸರ್ಕಾರ ಪಬ್ಲಿಕ್‌ ಸ್ಕೂಲ್ ಹೆಸರಲ್ಲಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಕೈಗೊಂಡಿರುವ ನಿರ್ಣಯ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿ ಮೇ 30 ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಕೆ.ನಾಗರತ್ನಮ್ಮ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಸಕ್ತ ಸಾಲಿನಿಂದ 39 ಆಂಗ್ಲಮಾಧ್ಯಮ ಪಬ್ಲಿಕ್‌ ಸ್ಕೂಲ್ ತೆರೆಯಲು ನಿರ್ಧರಿಸಿದೆ. ಆದರೆ, ಇದು ಕೇವಲ 39 ಶಾಲೆಗಳಲ್ಲಿ ಮಾತ್ರವಲ್ಲ. ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು, ರಾಜ್ಯದಲ್ಲಿ 1000ಕ್ಕೂ ಹೆಚ್ಚು ಶಾಲೆಗಳಲ್ಲಿ ತೆರೆಯಲು ಕ್ರಮ ಕೈಗೊಂಡಿದ್ದು, ಇದರಲ್ಲಿ ಅಂಗನವಾಡಿ ಶಾಲೆಗಳನ್ನು ಯೋಜನೆಯಿಂದ ಕೈಬಿಡುವ ಹುನ್ನಾರವಾಗಿದೆ ಎಂದವರು ಆರೋಪಿಸಿದರು.

ಮಕ್ಕಳ, ಗರ್ಭಿಣಿಯರ ಪೌಷ್ಟಿಕಾಂಶದ ಕೊರತೆ ನೀಗಿಸುವಲ್ಲಿ ಅಂಗನವಾಡಿ ಶಾಲೆಗಳು ಪ್ರಮುಖ ಪಾತ್ರ ವಹಿಸಿವೆ. ಐಸಿಡಿಎಸ್‌ ಯೋಜನೆಯಡಿ ಜಾರಿಗೆ ತರಲಾಗಿರುವ ಅಂಗನವಾಡಿಗಳನ್ನು ದೇಶದ ಎಲ್ಲ ಗ್ರಾಮಗಳಲ್ಲೂ ತೆರೆಯಬೇಕು ಎಂದು ದಶಕಗಳ ಹಿಂದೆಯೇ ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದೆ. ಅಲ್ಲದೇ, ಸಾರ್ವಜನಿಕ ಶಿಕ್ಷಣ ಇಲಾಖೆಯು ಸಹ ಈ ಹಿಂದೆಯೇ ಅಂಗನವಾಡಿಗಳನ್ನು ಶಿಕ್ಷಣ ಇಲಾಖೆಯಡಿ ತೆರೆಯುವುದಾಗಿ ಆಶ್ವಾಸನೆಯನ್ನೂ ನೀಡಿತ್ತು. ಆದರೆ, ಇದೀ ಅಂಗನವಾಡಿಗಳನ್ನು ಶಾಶ್ವತವಾಗಿ ಕೈಬಿಡುವ ಹುನ್ನಾರ ನಡೆಸುತ್ತಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಪಬ್ಲಿಕ್‌ ಶಾಲೆಗಳನ್ನು ತೆರೆಯಬಾರದು ಎಂದು ಆಗ್ರಹಿಸಿದರು.

ಪಬ್ಲಿಕ್‌ ಶಾಲೆಗಳಲ್ಲಿ ನೀಡುವ ಶಿಕ್ಷಣವನ್ನು ಅಂಗನವಾಡಿಗಳಲ್ಲೇ ಮುಂದುವರಿಸುವಂತೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರಲ್ಲಿ ಬಹುತೇಕರು ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ವ್ಯಾಸಂಗ ಮಾಡಿದವರಿದ್ದಾರೆ. ಹಾಗಾಗಿ ಪಬ್ಲಿಕ್‌ ಶಾಲೆಗಳನ್ನು ಅಂಗನವಾಡಿಗಳಲ್ಲೇ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಆಂಗ್ಲಮಾಧ್ಯಮ ಶಾಲೆಗಳನ್ನು ತೆರೆಯುವ ಬಗ್ಗೆ ಎಲ್ಲೂ ಪ್ರಸ್ತಾಪಿಸದ ರಾಜ್ಯ ಸರ್ಕಾರ, ಶಿಕ್ಷಣ ತಜ್ಞರೊಂದಿಗೆ ಚರ್ಚೆಯನ್ನೇ ಮಾಡಿಲ್ಲ. ಕೇವಲ ಉನ್ನತ ಮಟ್ಟದ ಅಧಿಕಾರಿಗಳಿಂದ ಪರಿಶೀಲಿಸಿ ಅವರು ನೀಡಿದ ವರದಿಯನ್ನೇ ಅಂತಿಮಗೊಳಿಸಿ ಆದೇಶ ಹೊರಡಿಸಲಾಗಿದೆ. ಇದರಿಂದ ಕನ್ನಡ ಶಾಲೆಗಳ ಮೇಲೂ ಪರಿಣಾಮ ಬೀರಲಿದ್ದು, ಅಲ್ಲೂ ಮಕ್ಕಳ ಸಂಖ್ಯೆ ಕಡಿಮೆಯಾಗಲಿದೆ. ಕನ್ನಡ ಶಾಲೆಗಳನ್ನು ಉಳಿಸಬೇಕಾದರೆ ರಾಜ್ಯ ಸರ್ಕಾರ ಕೈಗೊಂಡಿರುವ ಪಬ್ಲಿಕ್‌ ಶಾಲೆಗಳನ್ನು ಕೈ ಬಿಟ್ಟು ಅಂಗನವಾಡಿಗಳಲ್ಲೇ ಎಲ್ಕೆಜಿ, ಯುಕೆಜಿ ಆರಂಭಿಸಬೇಕು. ಆದ್ದರಿಂದ ರಾಜ್ಯದ ಎಲ್ಲ ಶಾಲೆಗಳಿಂದ ಮೇ 30 ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗುವುದು ಎಂದವರು ಎಚ್ಚರಿಸಿದರು.

Advertisement

ಅಧ್ಯಕ್ಷೆ ಬಿ.ಉಮಾದೇವಿ, ಎಂ.ಎರ್ರೆಮ್ಮ, ಸ್ವಪ್ನ, ನೀಲಾವತಿ, ಈರಮ್ಮ, ಲೀಲಾವತಿ, ವರಲಕ್ಷ್ಮಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next