ಬಳ್ಳಾರಿ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಿಲ್ಲೆಯಲ್ಲಿ 39 ಆಂಗ್ಲ ಮಾಧ್ಯಮ ಶಾಲೆ ತೆರೆಯಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ದತೆ ನಡೆಸಿದ್ದು, ಶಿಕ್ಷಕರಿಗೆ ತರಬೇತಿ, ಕೊಠಡಿಗಳು ಸೇರಿ ಅಗತ್ಯ ಸಿದ್ಧತಾ ಕಾರ್ಯ ಕೈಗೊಂಡಿದೆ. ಮೇ 29 ರಿಂದ ಮಕ್ಕಳ ದಾಖಲಾತಿಗೆ ಚಾಲನೆ ದೊರೆಯಲಿದೆ.
Advertisement
ಕಡ್ಡಾಯ ಶಿಕ್ಷಣ ಕಾಯ್ದೆ (ಆರ್‌ಟಿಇ), ಗ್ರಾಮೀಣ ಪ್ರದೇಶಗಳಲ್ಲೂ ನಾಯಿಕೊಡೆಗಳಂತೆ ವರ್ಷದಿಂದ ವರ್ಷಕ್ಕೆ ತಲೆಎತ್ತುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕ್ಷೀಣಿಸುತ್ತಿದೆ. ಕಡ್ಡಾಯ ಶಿಕ್ಷಣ ಕಾಯ್ದೆಯಿಂದಾಗಿ ಬಡಮಕ್ಕಳು ಸಹ ಪ್ರತಿಷ್ಠಿತ ಶಾಲೆಗಳತ್ತ ಮುಖ ಮಾಡಿದರೆ, ಶ್ರೀಮಂತರು, ಮಧ್ಯಮ ವರ್ಗದವರು ಸರ್ಕಾರಿ ಶಾಲೆಗಳಿಂದ ದೂರವೇ ಉಳಿದಿದ್ದಾರೆ. ಹೀಗಾಗಿ ಮುಚ್ಚುವ ಹಂತಕ್ಕೆ ತಲುಪಿರುವ ಸರ್ಕಾರಿ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಆರಂಭಿಸಲು ರಾಜ್ಯ ಸರ್ಕಾರ ನಿರ್ಣಯಿಸಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಆಯ್ದ 39 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ.
Related Articles
Advertisement
ಜಿಲ್ಲೆಯ 39 ಶಾಲೆಗಳಲ್ಲಿ ಆಂಗ್ಲಮಾಧ್ಯಮ ಆರಂಭಿಸಲಾಗುತ್ತದೆ. ಇದಕ್ಕಾಗಿ ಜಿಲ್ಲೆಯ ಪ್ರತಿವಿಧಾನಸಭಾ ಕ್ಷೇತ್ರವಾರು 1 ರಿಂದ 10ನೇ ತರಗತಿವರೆಗೆ ಇರುವ ಶಾಲೆಗಳನ್ನು ಆಯ್ಕೆ ಮಾಡಲಾಗಿದೆ. ಆಂಗ್ಲಮಾಧ್ಯಮದಲ್ಲಿ ಒಂದನೇ ತರಗತಿಗೆ ಮಾತ್ರ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲಾಗುತ್ತಿದ್ದು, 30 ಮಕ್ಕಳಿಗೆ ಸೀಮಿತಗೊಳಿಸಲಾಗಿದೆ. ಆಂಗ್ಲ ಮಾಧ್ಯಮ ಬೋಧಿಸಲು 56 ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಇರುವ ಎಲ್ಲ ಮೂಲ ಸೌಲಭ್ಯಗಳು ಆಂಗ್ಲಮಾಧ್ಯಮ ವಿದ್ಯಾರ್ಥಿಗಳಿಗೆ ಲಭಿಸಲಿವೆ. ಗ್ರಾಮೀಣ ಭಾಗದಲ್ಲಿ ಎಷ್ಟರ ಮಟ್ಟಿಗೆ ಬೇಡಿಕೆ ಇದೆ ಎಂಬುದು ದಾಖಲಾತಿ ಆರಂಭವಾದ ಬಳಿಕ ತಿಳಿಯಲಿದೆ.•ಶ್ರೀಧರನ್, ಡಿಡಿಪಿಐ,
ಸಾರ್ವಜನಿಕ ಶಿಕ್ಷಣ ಇಲಾಖೆ. ಆಂಗ್ಲಮಾಧ್ಯಮದಲ್ಲಿ ಸದ್ಯ ಒಂದನೇ ತರಗತಿ ಆರಂಭಿಸಲಾಗುತ್ತಿರುವುದರಿಂದ ಪ್ರತ್ಯೇಕ ಒಂದು ಕೊಠಡಿ ಮೀಸಲಿರಿಸಲಾಗಿದೆ. ಶಾಲೆಯ ಇಬ್ಬರು ಶಿಕ್ಷಕರು ಇತ್ತೀಚೆಗೆ ಡಯಟ್‌ನಲ್ಲಿ ತರಬೇತಿ ಪಡೆದಿದ್ದಾರೆ. ಮಕ್ಕಳು ಕೂಡಲು ಬೆಂಚ್‌ಗಳ ವ್ಯವಸ್ಥೆಯೂ ಇದೆ. ಪೋಷಕರು ಮಕ್ಕಳನ್ನು ಸೇರಿಸುವುದೊಂದೇ ಬಾಕಿ ಇದೆ. ಅಲ್ಲದೇ, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕರಪತ್ರಗಳನ್ನು ಸಿದ್ಧಪಡಿಸಲಾಗಿದ್ದು, ನಾಳೆಯಿಂದ ಪ್ರಭಾತ್ ಪೇರಿ ನಡೆಸಿ ಜಾಗೃತಿ ಮೂಡಿಸಲಾಗುತ್ತದೆ.
•ಎನ್.ವಿರೂಪಾಕ್ಷಪ್ಪ
ಮುಖ್ಯೋಪಾಧ್ಯಾಯರು,
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀರಾಂಪುರಂ ಕಾಲೋನಿ, ಬಳ್ಳಾರಿ.