Advertisement

ವಾಣಿಜ್ಯ ವಿದ್ಯಾರ್ಥಿಗಳ ಮೇಳ

01:24 PM Dec 27, 2019 | Naveen |

ಬಳ್ಳಾರಿ: ಪಿಯುಸಿ ವಿದ್ಯಾರ್ಥಿಗಳಲ್ಲಿ ವಾಣಿಜ್ಯ ವ್ಯವಹಾರದ ಬಗ್ಗೆ ಜ್ಞಾನ ಹೆಚ್ಚಿಸಲು ಮತ್ತು ಅರಿವು ಮೂಡಿಸುವ ಸಲುವಾಗಿ ಡಿ.28ರಂದು ಬೆಳಗ್ಗೆ 11ಗಂಟೆಗೆ ನಗರದ ಕಿತ್ತೂರುರಾಣಿ ಚೆನ್ನಮ್ಮ ಪ್ರೌಢಶಾಲೆ ಆವರಣದಲ್ಲಿ ಪಿಯು ವಾಣಿಜ್ಯ ವಿದ್ಯಾರ್ಥಿಗಳ ಮೇಳ, ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಲೆಕ್ಕಪರಿಶೋಧಕ, ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಪರಿಷತ್‌ ಸದಸ್ಯ ಎಸ್‌. ಪನ್ನಾರಾಜ್‌ ಹೇಳಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಯುಸಿಯಲ್ಲಿ ವಾಣಿಜ್ಯ ವಿಷಯದ ಬಗ್ಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ವಾಣಿಜ್ಯ ವ್ಯವಹಾರದ ಬಗ್ಗೆ ಸಮರ್ಪಕ ಜ್ಞಾನದ ಕೊರತೆಯಿದೆ. ಪಿಯುಸಿ ಮುಗಿಸಿ ಪದವಿ ಸೇರುವ ವಿದ್ಯಾರ್ಥಿಗಳು ಪಿಪಿಟಿ ತರಬೇತಿಗಾಗಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಅದರ ಅಗತ್ಯವೇ ಇಲ್ಲ. ಕೇವಲ ಬೇಸಿಕ್‌ ಬಿಕಾಂ ವ್ಯಾಸಂಗದಲ್ಲೇ ಸಾಕಷ್ಟು ವ್ಯವಹಾರಿಕ ಜ್ಞಾನ ಲಭಿಸಲಿದೆ. ಹಾಗಾಗಿ ವಿದ್ಯಾರ್ಥಿಗಳಲ್ಲಿ ಸಿಎ, ವಾಣಿಜ್ಯ ವ್ಯವಹಾರದ ಬಗ್ಗೆ ಜಾಗೃತಿ ಅರಿವು, ಜಾಗೃತಿ ಮೂಡಿಸುವ ಸಲುವಾಗಿ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಬಳ್ಳಾರಿ ಶಾಖೆಯಿಂದ ಈ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದರು.

ತಮಿಳುನಾಡು ಮಾದರಿಯಲ್ಲಿ ಕರ್ನಾಟಕ ಸರ್ಕಾರದ ಪದವಿ ಪೂರ್ವ ಶಿಕ್ಷಣ ಇಲಾಖೆಯೊಂದಿಗೆ ಕಳೆದ ವರ್ಷ ಒಡಂಬಡಿಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಕಾಲೇಜುಗಳಿಗೆ ಹೋಗಿ ಈ ಕುರಿತು ಅರಿವು ಮೂಡಿಸಲಾಗುತ್ತಿತ್ತು. ಅದರಿಂದ ನಿರೀಕ್ಷಿತ ಯಶಸ್ಸು ಲಭಿಸದ ಹಿನ್ನೆಲೆಯಲ್ಲಿ ಈ ಬಾರಿ ವಾಣಿಜ್ಯ ವಿದ್ಯಾರ್ಥಿಗಳ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

ಕೇವಲ ಬಳ್ಳಾರಿ ತಾಲೂಕಿನಲ್ಲಿ ಇರುವ 36 ಕಾಮರ್ಸ್‌ ಕಾಲೇಜುಗಳಲ್ಲಿ 4,600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 3,500 ವಿದ್ಯಾರ್ಥಿಗಳು ಸೇರುವ ನಿರೀಕ್ಷೆಯಿದೆ. ಮೇಳದಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಲೆಕ್ಕಪರಿಶೋಧನೆ ಬಗ್ಗೆ ಮಾತ್ರ ಮಾಹಿತಿ ನೀಡದೆ, ವಾಣಿಜ್ಯ ಅಧ್ಯಯನದಿಂದ ಲಭಿಸುವ ಅವಕಾಶಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು. ಕೇವಲ ಜಿಎಸ್‌ಟಿ ತರಬೇತಿ ಪಡೆದರೂ ಉದ್ಯೋಗ ಅವಕಾಶ ದೊರೆಯಲಿದೆ. ಮೇಳದಲ್ಲಿ ಬಿಡುವಿನ ಅವಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ ಎಂದು ವಿವರಿಸಿದರು.

ಮೇಳದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ವ್ಯವಹಾರ ಮತ್ತು ಲೆಕ್ಕಪತ್ರ ನಿರ್ವಹಣೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿ ಶಾಲೆಯ 5 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅವರು ತಲಾ 400 ರೂ. ಬಂಡವಾಳ ಹೂಡಿ, ವಸ್ತುವೊಂದನ್ನು ಖರೀದಿಸಿ ಅದನ್ನು ಮೇಳದಲ್ಲಿ ಮಾರಾಟ ಮಾಡಬೇಕು. ಬಳಿಕ ಅದಕ್ಕೆ ಸಂಬಂಧಿಸಿದ ಲೆಕ್ಕಪತ್ರ ಒಪ್ಪಿಸಬೇಕು. ಉತ್ತಮ ತಂಡಗಳಿಗೆ ಉತ್ತಮ ಪ್ರಶಸ್ತಿಗಳನ್ನು ನೀಡಲಾಗುವುದು ಎಂದರು.

Advertisement

ಪಿಯು ವಾಣಿಜ್ಯ ವಿದ್ಯಾರ್ಥಿಗಳ ಮೇಳವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌.ಉಮಾಶಂಕರ್‌ ಉದ್ಘಾಟಿಸುವರು. ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌, ಎಸ್‌ಪಿ ಸಿ.ಕೆ.ಬಾಬಾ, ಐಸಿಎಐ ಕೇಂದ್ರ ಪರಿಷತ್‌ ಸದಸ್ಯ ಪ್ರಸನ್ನ ಕುಮಾರ್‌, ಪ್ರಾದೇಶಿಕ ಪರಿಷತ್‌ ಸದಸ್ಯರಾದ ಎ.ಬಿ.ಗೀತಾ, ಪಂಪಣ್ಣ, ಎಸ್‌.ಪನ್ನಾರಾಜ್‌, ಬಿಡಿಸಿಸಿ ಅಧ್ಯಕ್ಷ ವಿ.ರವಿಕುಮಾರ್‌, ಡಿಡಿಪಿಯು ಬಿ.ಆರ್‌.ನಾಗರಾಜಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪರಿಷತ್‌ನ ಬಳ್ಳಾರಿ ಶಾಖೆಯ ಅಧ್ಯಕ್ಷ ಕಿರಣ್‌ ಕುಮಾರ್‌ ಜೈನ್‌, ಖಜಾಂಚಿ ವಿನೋದ್‌ ಬಾಗ್ರೇಚಾ, ವಿದ್ಯಾರ್ಥಿ ಘಟಕದ ಅಧ್ಯಕ್ಷ
ವೆಂಕಟನಾರಾಯಣ, ಉಪಾಧ್ಯಕ್ಷ ಕೆ.ಹೊನ್ನೂರಸ್ವಾಮಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next