ಬಳ್ಳಾರಿ: ಜಿಂದಾಲ್ ಸಂಸ್ಥೆಗೆ 3667 ಎಕರೆ ಜಮೀನು ಪರಭಾರೆ ಮಾಡಿಕೊಡುವುದಾಗಿ ಮೈತ್ರಿ ಸರ್ಕಾರ ಕೈಗೊಂಡ ನಿರ್ಣಯ ವಿರೋಧಿಸಿ ಜಿಂದಾಲ್ಗೆ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಪ್ರತಿಭಟನಾನಿರತರನ್ನು ಪೊಲೀಸರು ಶನಿವಾರ ವಶಕ್ಕೆ ತೆಗೆದುಕೊಂಡು ಬಿಡುಗಡೆ ಮಾಡಿದರು.
ಸ್ಥಳೀಯ ಕನ್ನಡಪರ ಸಂಘಟನೆಗಳ ಒಕ್ಕೂಟ, ರೈತ ಸಂಘದ ನೇತೃತ್ವದಲ್ಲಿ ಜಿಂದಾಲ್ ಕಾರ್ಖಾನೆಯ ಮುಖ್ಯದ್ವಾರ ಎದುರು ಪ್ರತಿಭಟನಾ ಧರಣಿ ನಡೆಸಿದ ವಾಟಾಳ್ ನಾಗರಾಜ್, ಕಾರ್ಖಾನೆ, ಮೈತ್ರಿ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯಾವ ಚಿಂತನೆಯನ್ನೂ ಮಾಡದೇ ಈ ನಿರ್ಣಯ ಒಪ್ಪಿದ್ದಾರೆ. ಈ ಜಮೀನು ಯಾರಪ್ಪನ ಮನೆಯ ಆಸ್ತಿ ಅಲ್ಲ. ಕನ್ನಡಿಗರ ಆಸ್ತಿ. ಮೈತ್ರಿ ಸರ್ಕಾರದ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಜಿಂದಾಲ್ ಕಾರ್ಖಾನೆಯಿಂದ ವಿಷ ಹರಡುತ್ತಿದೆ. ಸುತ್ತಲಿನ ಜನ ವಿಷ ಕುಡಿದು ಬದುಕುತ್ತಿದ್ದಾರೆ. ಸಚಿವ ಸಂಪುಟದಲ್ಲಿ ಮಹಾಮೋಸ ನಡೆದಿದೆ. ಉಪ ಸಮಿತಿ ಹೆಸರೇ ಮೋಸದ ಸಮಿತಿ. ಸರ್ಕಾರದ ಸಚಿವರೇ ಸಮಿತಿಯಲ್ಲೂ ಇದ್ದು, ದೇಶ ಕಂಡ ದೊಡ್ಡ ಭ್ರಷ್ಟಾಚಾರವಿದು. ಆದ್ದರಿಂದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಯಾಗಬೇಕು. ಕಳೆದ 1995ರಿಂದ ಆಗಿರುವ ಎಲ್ಲ ದಾಖಲೆಗಳನ್ನು ಪರಿಶೀಲಿಸಬೇಕು. ಕೊಟ್ಟ ಜಮೀನು ಯಾವುದಕ್ಕೆ ಬಳಕೆಯಾಗಿದೆ. ಈ ಬಗ್ಗೆ ಸರ್ಕಾರ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರದ ಸಚಿವರು ಕಡ್ಲೆಪುರಿ ವ್ಯಾಪಾರ ಮಾಡಿದಂತೆ ಕೇವಲ ಒಂದು ಲಕ್ಷಕ್ಕೆ ಎಕರೆ ಜಮೀನು ಮಾರಾಟ ಮಾಡಿದ್ದಾರೆ. ರಾಜ್ಯದ ರೈತರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಜನರನ್ನು ಮೌಡ್ಯರನ್ನಾಗಿ ಮಾಡಿದ್ದಾರೆ. ಜಿಂದಾಲ್ ಕಂಪನಿಯವರು ಅನಧಿಕೃತವಾಗಿ ತುಂಗಭದ್ರಾ ನೀರು ಬಳಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ವಿಷಯದಲ್ಲಿ ರಾಜ್ಯ ಸರ್ಕಾರ ಕೂಡಲೇ ಕಠಿಣ ನಿರ್ಣಯ ಕೈಗೊಳ್ಳದಿದ್ದಲ್ಲಿ ಜುಲೈ ತಿಂಗಳ ಮೊದಲ ವಾರದಲ್ಲಿ ಕನ್ನಡಿಗರ ಸಮ್ಮೇಳನ ಆಯೋಜಿಸಿ, ಕೊನೆಯ ವಾರದಲ್ಲಿ ಬಳ್ಳಾರಿ ಬಂದ್, ರಾಜ್ಯ ಹೆದ್ದಾರಿ ಬಂದ್, ಜೈಲ್ ಭರೋ ಚಳವಳಿ ಮಾಡುತ್ತೇವೆಂದು ವಾಟಾಳ್ ನಾಗರಾಜ್ ಎಚ್ಚರಿಸಿದರು.