Advertisement

ಬೆಳ್ಳಾರೆ: ಬಿಜೆಪಿ ಕಾರ್ಯಕರ್ತನ ಕೊಲೆ: ಕೇರಳ ನೋಂದಣಿ ಬೈಕ್‌ ನಲ್ಲಿ ಬಂದಿದ್ದ ದುಷ್ಕರ್ಮಿಗಳು

12:46 AM Jul 27, 2022 | Team Udayavani |

ಸುಳ್ಯ/ಬೆಳ್ಳಾರೆ: ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸಮಿತಿ ಸದಸ್ಯ, ಬೆಳ್ಳಾರೆ ಮಾಸ್ತಿಕಟ್ಟೆಯಲ್ಲಿ ಚಿಕನ್‌ ಸೆಂಟರ್‌ ನಡೆಸುತ್ತಿದ್ದ ಪ್ರವೀಣ್‌ (30) ಅವರನ್ನು ದುಷ್ಕರ್ಮಿಗಳು ಮಂಗಳವಾರ ರಾತ್ರಿ ತಲವಾರಿನಿಂದ ಕಡಿದು ಕೊಲೆ ಮಾಡಿದ್ದಾರೆ.

Advertisement

ಸುಳ್ಯ ತಾಲೂಕಿನ ಬೆಳ್ಳಾರೆಯ ನೆಟ್ಟಾರು ನಿವಾಸಿಯಾಗಿರುವ ಪ್ರವೀಣ್‌ ಅವರು ಎಂದಿನಂತೆ ಮಂಗಳವಾರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ತನ್ನ ಚಿಕನ್‌ ಸೆಂಟರ್‌ ಅನ್ನು ಮುಚ್ಚುವ ತಯಾರಿಯಲ್ಲಿದ್ದಾಗ ಅಲ್ಲಿಗೆ ಬಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

ಮುಸುಕು ಹಾಕಿದ್ದ ದುಷ್ಕರ್ಮಿಗಳು ಕೈಯಲ್ಲಿ ಆಯುಧ ಹಿಡಿದುಕೊಂಡು ಬರುತ್ತಿರುವುದನ್ನು ಗಮನಿಸಿದ ಪ್ರವೀಣ್‌ ಅವರು ಅಪಾಯವನ್ನು ಅರಿತು ಪಕ್ಕದ ಅಂಗಡಿಯತ್ತ ಓಡಲು ಪ್ರಯತ್ನಿಸಿದರೂ ದುಷ್ಕರ್ಮಿಗಳು ಬೆನ್ನಟ್ಟಿ ತಲೆಗೆ ಹೊಡೆದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಗಂಭೀರ ಗಾಯಗೊಂಡ ಪ್ರವೀಣ್‌ ಅವರನ್ನು ಕೂಡಲೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎನ್ನಲಾಗಿದೆ. ಅವರಿಗೆ ಮದುವೆಯಾಗಿ ಒಂದು ವರ್ಷವಷ್ಟೇ ಆಗಿತ್ತು.

ಕೇರಳ ನೋಂದಣಿ ಬೈಕ್‌
ದುಷ್ಕರ್ಮಿಗಳು ಕೇರಳ ನೋಂದಣಿಯ ಬೈಕ್‌ನಲ್ಲಿ ಆಗಮಿಸಿದ್ದರು. ಬೈಕ್‌ನಲ್ಲಿ ಇಬ್ಬರಿದ್ದು, ಮುಸುಕು ಧರಿಸಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರವೀಣ್‌ ಅವರ ಮನೆ ನೆಟ್ಟಾರಿನಲ್ಲಿದ್ದು, ಆ ಬದಿಯ ರಸ್ತೆಯಿಂದಲೇ ಬೈಕ್‌ ಬಂದಿತ್ತೆನ್ನಲಾಗಿದೆ. ಹಲ್ಲೆ ನಡೆಸಿದ ಬಳಿಕ ಅವರು ಎತ್ತ ಹೋಗಿದ್ದಾರೆ ಎಂಬುದು ಗೊತ್ತಾಗಿಲ್ಲ.
ಬೆಳ್ಳಾರೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಘಟನ ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಆಗಮಿಸುವಂತೆ ಪಟ್ಟು
ಪುತ್ತೂರಿನ ಆಸ್ಪತ್ರೆಯ ಎದುರು ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕೆಂದು ಆಗ್ರಹಿಸಿದರು. ತಡರಾತ್ರಿಯವರೆಗೂ ಪ್ರತಿಭಟನೆ ಮುಂದುವರಿದಿತ್ತು. ಎಸ್‌ಪಿ ಸೋನಾವಣೆ ಸ್ಥಳಕ್ಕೆ ಭೇಟಿ ನೀಡಿ ಬಂದೋಬಸ್ತ್ ಗೆ ಕ್ರಮ ಕೈಗೊಂಡರು.

ಅಂಗಡಿ ಮುಂಗಟ್ಟು ಬಂದ್‌
ಘಟನೆಯ ಸುದ್ದಿ ಹರಡುತ್ತಿದ್ದಂತೆ ಬೆಳ್ಳಾರೆ ಮತ್ತು ನೆಟ್ಟಾರಿನ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡ ಲಾಯಿತು. ಪುತ್ತೂರಿಗೆ ಗಾಯಾಳುವನ್ನು ಕರೆದುಕೊಂಡು ಬಂದ ಬಳಿಕ ಅಲ್ಲಿನ ಪರಿಸರದ ಅಂಗಡಿಗಳನ್ನೂ ಬಂದ್‌ ಮಾಡಲಾಯಿತು.

ಪುತ್ತೂರು, ಸುಳ್ಯ, ಕಡಬ ಬಂದ್‌ಗೆ ಕರೆ
ಪ್ರವೀಣ್‌ ಹತ್ಯೆಯನ್ನು ಖಂಡಿಸಿ ಬುಧವಾರ ಪುತ್ತೂರು, ಸುಳ್ಯ, ಕಡಬ ತಾಲೂಕಿನಾದ್ಯಂತ ಸ್ವಯಂ ಪ್ರೇರಿತ ಬಂದ್‌ಗೆ ಹಿಂದೂ ಸಂಘಟನೆಗಳು ಕರೆ ನೀಡಿವೆ ಎಂದು ತಿಳಿದುಬಂದಿದೆ.

ಗಂಭೀರವಾಗಿ ಪರಿಗಣನೆ: ಸುನಿಲ್‌
ಮಂಗಳೂರು: ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಈ ಬಗ್ಗೆ ರಾಜ್ಯ ಗೃಹಸಚಿವರ ಜತೆ ಚರ್ಚೆ ನಡೆಸಲಾಗಿದೆ ಎಂದು ಸಚಿವ ವಿ. ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

ಬಿಜೆಪಿಯ ಯುವ ಮುಖಂಡ, ಅಮಾಯಕ ಪ್ರವೀಣ್‌ ಬೆಳ್ಳಾರೆ ಮೇಲೆ ದಾಳಿ, ಕೊಲೆ ಕೃತ್ಯ ಖಂಡನೀಯ. ಘಟನೆ ಬಗ್ಗೆ ಈಗಾಗಲೇ ಪೊಲೀಸ್‌ ವರಿಷ್ಠಾಧಿಕಾರಿಗಳಿಂದ ಮಾಹಿತಿ ಕಲೆ ಹಾಕಿ ಗೃಹ ಸಚಿವರಿಗೆ ವರದಿ ಮಾಡಲಾಗಿದೆ. ಆರೋಪಿಗಳ ಬಂಧನಕ್ಕೆ ಶೀಘ್ರ ತಂಡ ರಚಿಸಿ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಎಲ್ಲ ನಿಟ್ಟಿನಲ್ಲೂ ತನಿಖೆ: ಆರಗ
ಪ್ರವೀಣ್‌ ಹತ್ಯೆಗೆ ಕಾರಣವೇನೆಂಬುದು ಸ್ಪಷ್ಟ ವಾಗಿಲ್ಲ. ಆದರೆ ಬೆಳ್ಳಾರೆಯ ಕಳಂಜದಲ್ಲಿ ವಾರದ ಹಿಂದೆ ನಡೆದಿರುವ ಮಸೂದ್‌ ಅವರ ಹತ್ಯೆಗೆ ಪ್ರತೀಕಾರವಾಗಿ ಈ ಕೃತ್ಯ ನಡೆ ದಿರಬಹುದೇ ಎಂಬ ಗುಮಾನಿ ದಟ್ಟವಾಗಿದ್ದು, ಪೊಲೀಸರು ಆ ನಿಟ್ಟಿನಲ್ಲಿಯೂ ತನಿಖೆ ನಡೆಸುತ್ತಿದ್ದಾರೆ ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next