Advertisement

ಭೀತಿ ಮೂಡಿಸಿದ ಬೆಳ್ಳಂದೂರು ಕೆರೆ ಬೆಂಕಿ

12:15 PM May 08, 2017 | Team Udayavani |

ಬೆಂಗಳೂರು: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಆದೇಶದನ್ವಯ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು  ಮಹಾನಗರ ಪಾಳಿಕೆ ಜಂಟಿಯಾಗಿ ಬೆಳ್ಳಂದೂರು ಕೆರೆ ಸ್ವತ್ಛತೆ ಕಾರ್ಯದಲ್ಲಿ ತೊಡಗಿರುವ ನಡುವೆಯೇ, ಕೆರೆ ಆವರಣದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ! 

Advertisement

ರಾಸಾಯನಿಕ ಮಿಶ್ರಿತ, ಮಲಿನ ನೀರಿನಿಂದ ಆಗಾಗ್ಗೇ ಬೆಂಕಿ ಹೊತ್ತಿಕೊಂಡು ಸ್ಥಳೀಯರನ್ನು ಬೆಚ್ಚಿಬೀಳಿಸುತ್ತಿದ್ದ ಬೆಳ್ಳಂದೂರು ಕೆರೆ ದಂಡೆಯಲ್ಲಿ ಭಾನುವಾರ ಮಧ್ಯಾಹ್ನ ಮತ್ತೂಮ್ಮೆ ಬೆಂಕಿ ಕಂಡ ಸ್ಥಳೀಯರು ಆತಂಕಗೊಂಡಿದ್ದರು. ಆದರೆ, ಸೊಳ್ಳೆ ನಿಯಂತ್ರಣಕ್ಕೆ ಕಾರ್ಮಿಕರೇ ಬೆಂಕಿ ಹಚ್ಚಿದ್ದರು ಎಂಬ ವಿಷಯ ತಿಳಿದ ನಂತರ ನಿರಾಳವಾದರು.

ಆದರೆ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಡಿಎ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ಬೆಳ್ಳಂದೂರು ಕೆರೆ ಸಂಪರ್ಕಿಸುವ ನಾಗಸಂದ್ರ ಗ್ರಾಮದ ಬಳಿಯ ಕೆರೆ ದಂಡೆಯಲ್ಲಿ ಭಾನುವಾರ ಮಧ್ಯಾಹ್ನ 2.30ರ ವೇಳೆಗೆ ಸೊಳ್ಳೆಗಳ ನಿಯಂತ್ರಣಕ್ಕಾಗಿ ಉತ್ತರ ಭಾರತ ಮೂಲದ ಕಾರ್ಮಿಕರು ದಂಡೆಯಲ್ಲಿದ್ದ ಜೊಂಡಿಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಕೆನ್ನಾಲಿಗೆ ಸುತ್ತಮುತ್ತಲ ಪ್ರದೇಶಕ್ಕೆ ವ್ಯಾಪಿಸಿಕೊಂಡ ಹಿನ್ನೆಲೆಯಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ.

ಕೆರೆಯ ದಂಡೆಯಲ್ಲಿ ಬೆಂಕಿ ಕಂಡು ಗಾಬರಿಗೊಂಡ ಸ್ಥಳೀಯರು, ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವ ವೇಳೆಗಾಗಲೇ ಎರಡು ಮೂರು ಎಕರೆ ಜಾಗದಲ್ಲಿ ಬೆಂಕಿ ವ್ಯಾಪಿಸಿತ್ತು. ಸಿಬ್ಬಂದಿ ಕಾರ್ಯಾಚರಣೆಗೆ ಇಳಿಯುವ ವೇಳೆ ಮಳೆ ಬಿದ್ದ ಪರಿಣಾಮ ಬೆಂಕಿ ನಂದಿತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. 

ಬಿಡಿಎ ಸ್ಪಷ್ಟನೆ ಏನು?: ಬೆಳ್ಳಂದೂರು ಕೆರೆಯ ದಡದಲ್ಲಿ ಬೆಂಗಳೂರು ಜಲಮಂಡಳಿಯಿಂದ ತ್ಯಾಜ್ಯ ನೀರು ಸಂಸ್ಕರಣೆ ಘಟಕ (ಎಸ್‌ಟಿಪಿ) ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಉತ್ತರ ಭಾರತ ಮೂಲದ ಕಾರ್ಮಿಕರುನ್ನು ನಿಯೋಜನೆ ಮಾಡಿಕೊಂಡಿದ್ದು, ಬಿಡಿಎ ವತಿಯಿಂದ ಆರಂಭಿಸಿದ ಕೆರೆ ಸ್ವತ್ಛತಾ ಕಾರ್ಯದಿಂದ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿದೆ ಎಂದು ಕಾರ್ಮಿಕರು ಒಣಗಿದ ಹುಲ್ಲಿಗೆ ಬೆಂಕಿ ಹಚ್ಚಿದ್ದಾರೆ. ಈಗಾಗಲೇ ಜಲಮಂಡಳಿಯ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದ್ದು, ಕಾರ್ಮಿಕರ ವಿರುದ್ಧ ಸೋಮವಾರ ದೂರು ದಾಖಲಿಸಲಾಗುವುದು ಎಂದು ಬಿಡಿಎ ಕೆರೆ ವಿಭಾಗದ ನಾಗರಾಜ್‌ ಅವರು ಮಾಹಿತಿ ನೀಡಿದ್ದಾರೆ.

Advertisement

ಬಿಬಿಎಂಪಿ ಸ್ಪಷ್ಟನೆ  ಏನು?: ಬೆಳ್ಳಂದೂರು ಕೆರೆಯಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಈ ಭಾಗದ ಪಶುಪಾಲಕರು ಹುಲ್ಲು ಚಿಗುರಲಿ ಎಂಬ ಕಾರಣಕ್ಕೆ ಬೆಂಕಿಯಿಟ್ಟಿರುವ ಶಂಕೆಯಿದೆ. ಸದ್ಯ ಸ್ಥಳದಲ್ಲಿ ಪಾಲಿಕೆ ಪ್ರಹರಿ ವಾಹನ ಹಾಗೂ ಹತ್ತು ಮಂದಿ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಈ ಭಾಗದಲ್ಲಿನ ತಂತಿಬೇಲಿ ಹಾಕುವ ಕಾರ್ಯವನ್ನು ಕೂಡಲೇ ಕೈಗೆತ್ತಿಕೊಳ್ಳಲಾಗುವುದು ಮತ್ತು ಒಣ ಹುಲ್ಲಿಗೆ ಬೆಂಕಿ ಹಚ್ಚಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಮಹದೇವಪುರ ವಲಯದ ಜಂಟಿ ಆಯುಕ್ತರಾದ ಡಾ.ವಾಸಂತಿ ಅಮರ್‌ ತಿಳಿಸಿದ್ದಾರೆ. 

ಕೈಗಾರಿಕೆಗಳೇ ಬೆಂಕಿಗೆ ಕಾರಣ
ಬೆಳ್ಳಂದೂರು ಕೆರೆ ಭಾಗದಲ್ಲಿ ಗುರುತಿಸಲಾಗಿರುವ 488 ಮಾಲಿನ್ಯಕಾರಕ ಕೈಗಾರಿಕೆಗಳನ್ನು ಸ್ಥಗಿತಗೊಳಿಸುವಂತೆ ಎನ್‌ಜಿಟಿ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಕಟ್ಟುನಿಟ್ಟಾಗಿ ಆದೇಶ ಜಾರಿಗೆ ಮುಂದಾಗಿಲ್ಲ. ಈ ಹಿನ್ನೆಲೆಯಲ್ಲಿ ಬಹುತೇಕ ಕೈಗಾರಿಕೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು, ರಾಸಾಯನಿಕ ಅಂಶಗಳನ್ನು ಕೆರೆಗೆ ಹರಿಸುವ ಕಾರ್ಯವನ್ನೂ ಮುಂದುವರಿಸಿವೆ. ಇದರಿಂದ ಕೆರೆಯಲ್ಲಿ ಮತ್ತೂಮ್ಮೆ ಬೆಂಕಿ ಕಾಣಿಸಿಕೊಂಡಿದೆ ಎಂದು ಬೆಳ್ಳಂದೂರು ಕೆರೆ ಹಿತರಕ್ಷಣಾ ಸಮಿತಿ ಸದಸ್ಯರೊಬ್ಬರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next