ಬೆಂಗಳೂರು: ಬೆಳ್ಳಂದೂರು ಕೆರೆಯನ್ನು ಸ್ವಚ್ಛಗೊಳಿಸಲು ತಿಂಗಳ ಗಡುವು ನೀಡಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಆದೇಶ ಹೊರಡಿಸಿ ವಾರ ಕಳೆಯುವ ಮೊದಲೇ ಬಿಡಿಎ ಕೆರೆ ಶುಚಿ ಕಾರ್ಯಕ್ಕೆ ಮುಂದಾಗಿದ್ದು, ಬಿಬಿಎಂಪಿಯೂ ನೆರವಿನ ಹಸ್ತ ಚಾಚಿದೆ.
ಅದರಂತೆ ಬೆಳ್ಳಂದೂರು ಕೆರೆಯನ್ನು ವ್ಯಾಪಕವಾಗಿ ಆವರಿಸಿರುವ ಜೊಂಡು ತೆರವುಗೊಳಿಸುವ ಪ್ರಾಥಮಿಕ ಹಂತದ ಕಾಮಗಾರಿಯನ್ನು ಬಿಡಿಎ ಆರಂಭಿಸಿದೆ. ಕೆರೆಗೆ ತ್ಯಾಜ್ಯ ಸುರಿಯದಂತೆ ತಡೆಯಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿ ಸಲಾಗಿದ್ದು, ನಿರಂತರ ನಿಗಾ ವಹಿಸಲಾಗಿದೆ. ಬಿಡಿಎ ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ಸಜ್ಜಾಗಿದ್ದರೆ ಎನ್‌ಜಿಟಿ ಆದೇಶ ಪ್ರತಿ ಸಿಕ್ಕಿಲ್ಲ ಎಂಬ ಕಾರಣಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈವರೆಗೆ ಕೆರೆಯ ಸುತ್ತಮುತ್ತಲಿನ ಕೈಗಾರಿಕೆಗಳನ್ನು ಬಂದ್ ಮಾಡಿಸುವ ಕಾರ್ಯಕ್ಕೇ ಮುಂದಾಗಿಲ್ಲ.
ಈ ಹಿಂದೆ ಕೆರೆ ಪ್ರದೇಶದಲ್ಲಿ ರಾತ್ರೋರಾತ್ರಿ ಕಸ ಸುರಿಯಲಾಗುತ್ತಿತ್ತು. ಆದರೆ ಎನ್‌ಜಿಟಿ ಆದೇಶದ ಬಳಿಕ ಯಾರೊಬ್ಬರೂ ಕಸ ಸುರಿಯುತ್ತಿಲ್ಲ. ಆದರೆ ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿ ಸ್ಥಳೀಯರು ಕಟ್ಟಡ ಅವಶೇಷ ತ್ಯಾಜ್ಯ ಸುರಿದಿರುವುದು ಕಂಡುಬಂದಿದ್ದು, ಇದರ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಕೆರೆಯ ಸುತ್ತಮುತ್ತ ಕೊಳವೆಬಾವಿ ನೀರು ಪರೀಕ್ಷೆ: ನಗರದಲ್ಲಿರುವ ಬಹುತೇಕ ಎಲ್ಲ ಕೆರೆಗಳ ನೀರು ಕಲುಷಿತಗೊಂಡಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಕೆರೆಗಳ ಸುತ್ತಮುತ್ತಲಿನ ಕೊಳವೆ ಬಾವಿಗಳ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಧರಿಸಿದೆ. ಈ ಹಿಂದೆ ಬೆಳ್ಳಂದೂರು, ವರ್ತೂರು ಕೆರೆಗಳ ಸುತ್ತಮುತ್ತಲಿನ ಕೊಳವೆ ಬಾವಿಗಳನ್ನು ಮಾತ್ರ ಪರೀಕ್ಷೆಗೊಳಪಡಿಸಲು ತೀರ್ಮಾನವಾಗಿತ್ತು. ಆದರೆ ಎನ್‌ಜಿಟಿ ಆದೇಶದ ತರುವಾಯ ಎಲ್ಲ ಕೆರೆಗಳ ಸುತ್ತಮುತ್ತಲಿನ ಕೊಳವೆ ಬಾವಿ ನೀರಿನ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಕೈಗಾರಿಕೆಗಳ ವಿಷಯುಕ್ತ ರಾಸಾಯನಿಕ ತ್ಯಾಜ್ಯವನ್ನು ಸಂಸ್ಕರಿಸದೆ ಕೆರೆಗಳಿಗೆ ಹರಿಸುತ್ತಿರುವ ಹಿನ್ನೆಲೆಯಲ್ಲಿ ಕೆರೆಗಳ ನೀರು ವಿಷಮಯವಾಗುತ್ತಿವೆ. ಹಾಗಾಗಿ ಕೆರೆಗಳಿಂದ ಒಂದು ಕಿ.ಮೀ.ವ್ಯಾಪ್ತಿಯಲ್ಲಿರುವ ಕೊಳವೆಬಾವಿಗಳ ನೀರಿನ ಮಾದರಿ ಸಂಗ್ರಹಿಸಿ ಪರಿಶೀಲಿಸಲಾಗುವುದು. ಒಂದೊಮ್ಮೆ ನೀರಿನಲ್ಲಿ ವಿಷಕಾರಕ ಅಂಶಗಳಿರುವುದು ಕಂಡುಬಂದರೆ ಆ ಕೊಳವೆಬಾವಿಗಳ ನೀರು ಬಳಕೆಯನ್ನು ನಿರ್ಬಂಧಿಸಲಾಗುವುದು ಎಂದು ಮಂಡಳಿ ಅಧ್ಯಕ್ಷ ಲಕ್ಷ್ಮಣ್ ತಿಳಿಸಿದ್ದಾರೆ.
ವರ್ತೂರು ಕೆರೆಯ ಅಭಿವೃದ್ಧಿಗೂ ಆಗ್ರಹ
ಬೆಳ್ಳಂದೂರು ಕೆರೆಯ ಸ್ವಚ್ಛತೆ ಕಾರ್ಯಕ್ಕೆ ಬಿಡಿಎ ಸೇರಿದಂತೆ ನಾನಾ ಸಂಸ್ಥೆಗಳು ಸಮರೋಪಾ ದಿಯಲ್ಲಿ ಸಜ್ಜಾಗಿರುವ ಬೆನ್ನಲ್ಲೇ ವರ್ತೂರು ಕೆರೆ ಅಭಿವೃದ್ಧಿ ಕಾರ್ಯವನ್ನು ಆರಂಭಿಸಬೇಕು ಎಂದು ಸ್ಥಳೀಯರು ಒತ್ತಾಯಿಸಲಾರಂಭಿಸಿದ್ದಾರೆ. ಬೆಳ್ಳಂದೂರು ಕೆರೆ ಮಾದರಿಯಲ್ಲೇ ವರ್ತೂರು ಕೆರೆಯೂ ಸಂಪೂರ್ಣ ಮಲಿನವಾಗಿದೆ. ಹಾಗಿದ್ದರೂ ಕೆರೆಯನ್ನು ನಿರ್ಲಕ್ಷಿಸುವುದು ಸರಿಯಲ್ಲ, ಕೂಡಲೇ ವರ್ತೂರು ಕೆರೆಯ ಅಭಿವೃದ್ಧಿಗೂ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.