Advertisement
ಅದು 1997ರ ಹೀರೋ ಹೊಂಡ ಮಹಿಳಾ ಏಕದಿನ ವಿಶ್ವಕಪ್. ಈ ಕೂಟದ ಆತಿಥ್ಯ ವಹಿಸಿದ್ದು ನಮ್ಮ ಭಾರತ. ಆಸ್ಟ್ರೇಲಿಯಾ ಮತ್ತು ಡೆನ್ಮಾರ್ಕ್ ನಡುವಿನ ಪಂದ್ಯ. ಸ್ಥಳ ಬಾಂದ್ರಾದ ‘ಮಿಡಲ್ ಇನ್‌ಕಂ ಗ್ರೂಪ್ ಗ್ರೌಂಡ್’. ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ದುಕೊಳ್ಳುತ್ತದೆ. ಓಪನಿಂಗ್ ಬ್ಯಾಟರ್ ಕ್ಲಾರ್ಕ್ ಕಣಕ್ಕಿಳಿಯುತ್ತಾರೆ. ಕೊನೆಯ ಓವರ್ ತನಕ ಕ್ರೀಸ್ ಕಚ್ಚಿಕೊಂಡಿದ್ದ ಕ್ಲಾರ್ಕ್ 155 ಎಸೆತಗಳಿಂದ ಅಜೇಯ 229 ರನ್ ಬಾರಿಸಿ, ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆಯನ್ನು ಬರೆಯುತ್ತಾರೆ. ಇದಾಗಿ 13 ವರ್ಷಗಳ ಅನಂತರ, ಅಂದರೆ 2010ರಲ್ಲಿ ಸಚಿನ್ ತೆಂಡುಲ್ಕರ್ ದಕ್ಷಿಣಆಫ್ರಿಕಾ ವಿರುದ್ಧ ಗ್ವಾಲಿಯರ್ ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಮೂಲಕ ಈ ದಾಖಲೆಯನ್ನು ತಮ್ಮ ಹೆಸರಿಗೂ ಬರೆದುಕೊಂಡರು.
Related Articles
Advertisement
14 ವರ್ಷಗಳ ಕ್ರಿಕೆಟ್ ಜರ್ನಿ
2005ರಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದ ಕ್ಲಾರ್ಕ್ ಕ್ರಿಕೆಟ್‌ನಲ್ಲಿ ನೆಟ್ಟ ಮೈಲುಗಲ್ಲುಗಳು ಅವೆಷ್ಟೋ. 14 ವರ್ಷಗಳ ಸುದೀರ್ಘ ಕ್ರಿಕೆಟ್ ಪಯಣದಲ್ಲಿ 15 ಟೆಸ್ಟ್ ಪಂದ್ಯಗಳನ್ನು ಆಡಿರುವ ಕ್ಲಾರ್ಕ್ 2 ಶತಕ, 6 ಅರ್ಧಶತಕ ಸಹಿತ 919 ರನ್ ಕಲೆಹಾಕಿದ್ದಾರೆ. 118 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿಂದ ಒಂದು ದ್ವಿಶತಕ, 5 ಶತಕ, 30 ಅರ್ಧಶತಕ ಸಹಿತ 4,844 ರನ್ ರಾಶಿ ಹಾಕಿದ್ದಾರೆ.
12 ವರ್ಷಗಳ ಕಾಲ ನಾಯಕಿಯಾಗಿ ಆಸ್ಟ್ರೇಲಿಯಾ ತಂಡವನ್ನು ಕ್ಲಾರ್ಕ್ ಮುನ್ನೆಡೆಸಿದ್ದಾರೆ. ಅವರ ಅವಧಿಯಲ್ಲಿ ಆಸ್ಟ್ರೇಲಿಯಾ ಎರಡು ಏಕದಿನ ವಿಶ್ವಕಪ್ ಗೆದ್ದು ಬೀಗಿತ್ತು. ನಾಯಕಿಯಾಗಿ 101 ಏಕದಿನ ಪಂದ್ಯಗಳನ್ನು ಗೆದ್ದ ದಾಖಲೆ ಇವರ ಹೆಸರಲ್ಲಿದೆ. 1997ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 997 ರನ್ ರಾಶಿ ಹಾಕುವ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಮಹಿಳಾ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ದಾಖಲೆಯೂ ಇವರ ಹೆಸರಲ್ಲಿದೆ.
ಸಾಲು ಸಾಲು ಪ್ರಶಸ್ತಿಗಳು
ಇಷ್ಟೆಲ್ಲ ಸಾಧನೆಗಳನ್ನು ಮಾಡಿದ ಕ್ಲಾರ್ಕ್‌ಗೆ ಸಂದ ಪ್ರಶಸ್ತಿ, ಸಮ್ಮಾನಗಳು ಹತ್ತು ಹಲವು. 2011ರಲ್ಲಿ ಐಸಿಸಿ ಹಾಲ್ ಆಫ್ ಫ್ರೇಮ್ ಗೌರವ, 2014ರಲ್ಲಿ ಆಸ್ಟ್ರೇಲಿಯಾ ಹಾಲ್ ಆಫ್ ಫ್ರೇಮ್ ಗೌರವ ಒಲಿಯುತ್ತದೆ. ಈ ಗೌರವ ಪಡೆದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆ ಕ್ಲಾರ್ಕ್ ಅವರದ್ದು. ಇಷ್ಟೇ ಅಲ್ಲದೇ 2023ರ ಜ. 5ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಕ್ಲಾರ್ಕ್ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿ ಗೌರವ ಸಲ್ಲಿಸಿದ್ದಾರೆ. ಇದು ವಿಶ್ವದಲ್ಲೇ ಮಹಿಳಾ ಕ್ರಿಕೆಟರ್ ಒಬ್ಬರಿಗೆ ಒಲಿದ ಪ್ರಥಮ ಗೌರವವಾಗಿದೆ. ಕ್ಲಾರ್ಕ್ ಈ ಗೌರವಕ್ಕೆ ನಿಜಕ್ಕೂ ಅರ್ಹರಾಗಿದ್ದಾರೆ.
ಬೆಲಿಂಡಾ ಕ್ಲಾರ್ಕ್ ಸಾಧನೆ ಇಂದಿನ ಯುವ ಕ್ರಿಕೆಟ್ ಆಟಗಾರರಿಗೆ ದೊಡ್ಡ ಪ್ರೇರಣೆ ಎಂಬುದರಲ್ಲಿ ಎರಡು ಮಾತಿಲ್ಲ.
-ಸುಶ್ಮಿತಾ ನೇರಳಕಟ್ಟೆ