ಸುಳ್ಯ: ಮೋದಿ ಯೋಜನೆಯ ಹೆಸರು ಹೇಳಿ ಅಪರಿಚಿತ ವ್ಯಕ್ತಿಯೋರ್ವ ಕೊಡಿಯಾಲದ ವೃದ್ಧ ರೋರ್ವರಿಂದ ಚಿನ್ನದ ಉಂಗುರ ಪಡೆದು ಪರಾರಿಯಾಗಿರುವ ಘಟನೆ ಬೆಳ್ಳಾರೆಯಲ್ಲಿ ಮೇ 20ರಂದು ನಡೆದಿದೆ.
ಮೇ 20ರಂದು ಬೆಳ್ಳಾರೆ ಪೇಟೆಯಲ್ಲಿ ಕೊಡಿಯಾಲದ ವ್ಯಕ್ತಿಯೋರ್ವರಿಗೆ ಅಪರಿಚಿತ ವ್ಯಕ್ತಿ ಮೋದಿಯ ಹೆಸರು ಹೇಳಿ ನನ್ನ ಅಕೌಂಟಿಗೆ ಹಣ ಬಂದಿದೆ. ಅದನ್ನು ತೆಗೆಯಲು ಮ್ಯಾನೇಜರ್‌ಗೆ ಕೊಡಲು 7,000 ರೂ. ಹಣ ಬೇಕು ಎಂದು ಕೇಳಿ ಪರಿಚಯಸ್ಥರಂತೆ ಆ ವ್ಯಕ್ತಿ ಮಾತನಾಡಿದ್ದ. ಹಣ ಇಲ್ಲ ಎಂದರೂ ಸ್ವಲ್ಪವಾದರೂ ಕೊಡಿ ಎಂದಾಗ 2,000 ರೂ. ಮಾತ್ರ ಇದೆ ಎಂದು ಕೊಡಿಯಾಲದ ವ್ಯಕ್ತಿ ತಿಳಿಸಿದ್ದ.ಅದು ಸಾಕಾಗುವುದಿಲ್ಲ, ನಿಮ್ಮ ಕೈಯಲ್ಲಿದ್ದ ಉಂಗುರ ತೆಗೆದು ಕೊಡಿ ಎಂದಾಗ ಕೊಡಿಯಾಲದ ವ್ಯಕ್ತಿ ತನ್ನ ಕೈಯಲ್ಲಿದ್ದ ಉಂಗುರವನ್ನು ತೆಗೆದುಕೊಟ್ಟರು.
ಉಂಗುರ ಪಡೆದ ಅಪರಿಚಿತ ವ್ಯಕ್ತಿ ನೀವು 50 ರೂ. ಠಸೆ ಪೇಪರು ತನ್ನಿ, ನಾವು ಮತ್ತೆ ಒಟ್ಟಿಗೆ ಬ್ಯಾಂಕಿಗೆ ಹೋಗುವ. ಈಗ ನಾನು ಇಲ್ಲೆ ಇರುತ್ತೇನೆ ಎಂದು ಹೇಳಿದ್ದ. ಕೊಡಿಯಾಲದ ವ್ಯಕ್ತಿ ಠಸೆ ಪೇಪರು ತರಲು ಸ್ವಲ್ಪ ದೂರ ನಡೆದುಕೊಂಡು ಹೋಗುವಾಗ ಸಂಶಯ ಬಂದು ಹಿಂದಿರುಗಿ ಬರುವಾಗ ಅಪರಿಚಿತ ವ್ಯಕ್ತಿ ಚಿನ್ನದ ಉಂಗುರ ಸಹಿತ ಪರಾರಿಯಾಗಿದ್ದ.
ಈ ಬಗ್ಗೆ ಕೊಡಿಯಾಲದ ವ್ಯಕ್ತಿ ಬೆಳ್ಳಾರೆ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಸಿಸಿ ಕೆಮರಾ ಪರಿಶೀಲನೆ ನಡೆಸಿದ್ದಾರೆ. ಆದರೆ ಅಪರಿಚಿತ ವ್ಯಕ್ತಿಯ ಯಾವುದೇ ಸುಳಿವು ಲಭ್ಯವಾಗಿಲ್ಲ. ವಂಚನೆಗೊಳಗಾದ ವ್ಯಕ್ತಿ ಠಾಣೆಯಲ್ಲಿ ಯಾವುದೇ ದೂರು ದಾಖಲಿಸಿಲ್ಲ.