ಗಜೇಂದ್ರಗಡ: ಭಕ್ತರ ಏಳ್ಗೆಗೆ ದಣಿವರಿಯದೇ ಸೇವೆ ಮಾಡಿದ ಡಾ|ಅಭಿನವ ಅನ್ನದಾನ ಸ್ವಾಮಿಗಳು ಪವಿತ್ರಾತ್ಮರಾಗಿದ್ದಾರೆ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಡಾ| ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.
ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಸಂಸ್ಥಾನಮಠದ ಡಾ|ಅಭಿನವ ಅನ್ನದಾನ ಸ್ವಾಮಿಗಳ ಅಂತಿಮ ದರ್ಶನ ಪಡೆದು ಮಾತನಾಡಿದ ಅವರು, ಡಾ|ಸಂಗನಬಸವ ಸ್ವಾಮಿಗಳ ಅಗಲಿಕೆ ರಾಜ್ಯದ ಶೈಕ್ಷಣಿಕ, ಧಾರ್ಮಿಕ, ಅಧ್ಯಾತ್ಮ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಶಿವಯೋಗ ಮಂದಿರದ ಅಧ್ಯಕ್ಷರಾಗಿ ನೂರಾರು ವಟು ಸಾಧಕರನ್ನು ಸ್ವಾಮಿಗಳನ್ನು ನಾಡಿಗೆ ಕೊಡುಗೆಯನ್ನಾಗಿ ನೀಡಿದ್ದಾರೆ ಎಂದರು.
ಶ್ರೀ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ಸ್ವಾಮಿಗಳಾದವರಿಗೆ ತತ್ವದ ಜ್ಞಾನ ಇರಬೇಕು ಎನ್ನುವುದಕ್ಕೆ ಡಾ|ಅಭಿನವ ಅನ್ನದಾನೇಶ್ವರ ಸ್ವಾಮೀಜಿ ಉತ್ತಮ ನಿದರ್ಶನ. ಪೂಜ್ಯರು ನಾಡಿನ ಎಲ್ಲಾ ಸ್ವಾಮಿಗಳನ್ನು ಬೆಸೆಯುವ ಕೊಂಡಿಯಾಗಿದ್ದರು ಎಂದು ಹೇಳಿದರು. ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಹಾಲಕೆರೆಯ ಅನ್ನದಾನೇಶ್ವರ ಮಠವು ಧಾರ್ಮಿಕವಾಗಿ ಪ್ರಖ್ಯಾತವಾಗಿದ್ದು, ಶ್ರೀಮಠಕ್ಕೆ ತನ್ನದೆಯಾದ ಭವ್ಯ ಪರಂಪರೆ ಇದೆ. ಅಭಿನವ ಅನ್ನದಾನ ಸ್ವಾಮಿಗಳು ಬಸವಾದಿ ಶರಣರ ತತ್ವಗಳನ್ನು ಸಾಕಾರಗೊಳಿಸಿದ್ದಾರೆ ಎಂದರು.
ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಈ ಜಗತ್ತಿನಲ್ಲಿ ನಾವೆಲ್ಲಾ ಯಾತ್ರಿಗಳು. ಕರೆ ಬಂದಾಗ ಪ್ರಯಾಣ ಮುಗಿಸಿ, ಭಗವಂತನ ಕಡೆಗೆ ಸಾಗಬೇಕಾಗುತ್ತದೆ. ಹಾಗೇ ಬಂದಂತ ಡಾ|ಅಭಿನವ ಅನ್ನದಾನ ಸ್ವಾಮಿಗಳು ಧಾರ್ಮಿಕ, ಶೈಕ್ಷಣಿಕ ಹಾಗೂ ಕೃಷಿ ಕಾಯಕವಂತರಾಗಿ ಕ್ರಾಂತಿಯನ್ನೇ ಮಾಡಿದ್ದಾರೆ ಎಂದರು.
ಶಿರಹಟ್ಟಿಯ ಜ| ಫಕೀರೇಶ್ವರ ಸ್ವಾಮಿಗಳು ಮಾತನಾಡಿ, ಡಾ| ಅಭಿನವ ಅನ್ನದಾನ ಸ್ವಾಮಿಗಳ ಅಗಲಿಕೆ ತುಂಬಲಾರದ ನಷ್ಟ ಉಂಟು ಮಾಡಿದೆ. ಲಿಂಗೈಕ್ಯರಾಗಿರುವ ನಮಗೆ ಕಣ್ಣಿಗೆ ಕಾಣುತ್ತಿಲ್ಲ ಆದರೆ ಅವರ ಆತ್ಮ ಭಕ್ತ ಕೋಟಿಯ ಮನದಲ್ಲಿದೆ ಎಂದರು.
ಜಮಖಂಡಿ ಓಲೇಮಠದ ಸ್ವಾಮೀಜಿ, ಕಮತಗಿ-ಕೋಟೆಕಲ್ಲದ ಹುಚ್ಚೇಶ್ವರ ಸ್ವಾಮೀಜಿ, ನರೇಗಲ್ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ನಿಡಗುಂದಿಕೊಪ್ಪ ಶಾಖಾ ಶಿವಯೋಗಮಂದಿರದ ಚನ್ನಬಸವ ಸ್ವಾಮೀಜಿ, ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಮಣಕವಾಡ ಸಿದ್ಧರಾಮ ಸ್ವಾಮೀಜಿ, ಶಿವಮೊಗ್ಗ ಮೋಡಿಮಠದ ಸ್ವಾಮೀಜಿ, ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯರು, ವಳಬಳ್ಳಾರಿಯ ಸಿದ್ಧಲಿಂಗ ಸ್ವಾಮೀಜಿ, ಇಲಕಲ್ಲನ ಗುರುಮಹಾಂತ ಸ್ವಾಮೀಜಿ, ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ ರಾಜ್ಯದ ವಿವಿಧ ಮಠದ 250ಕ್ಕೂ ಹೆಚ್ಚು ಹಿರಿಯ-ಕಿರಿಯ ಸ್ವಾಮಿಗಳು ಲಿಂ| ಅಭಿನವ ಅನ್ನದಾನೇಶ್ವರ ಸ್ವಾಮಿಗಳ ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದರು.