Advertisement

ನಂಬಿಕೆ ಎಂಬ ಸಂಸ್ಕಾರ

03:38 PM Sep 08, 2018 | |

ನಂಬಿಕೆ ಎಂಬುದು ಹುಟ್ಟಿನಿಂದ ಬರಬೇಕಾದದ್ದು. ಅದಕ್ಕೆ ಶುದ್ಧವಾದ ಸಂಸ್ಕಾರವೂ ಬೇಕು. ಹಾಗಾಗಿ ರಕ್ಕಸರು ಪರಸ್ಪರ ಒಬ್ಬರನೊಬ್ಬರು ನಂಬುವುದಿಲ್ಲ. ಯಾಕೆಂದರೆ ಅವರು ಮೂಲತಃ ಸಂಸ್ಕಾರ ವಿಹೀನರಾಗಿಯೇ ಹುಟ್ಟಿರುತ್ತಾರೆ; ಬದುಕುತ್ತಿರುತ್ತಾರೆ. 

Advertisement

 ಜಗತ್ತು ಯಾವುದರ ಮೇಲೆ ನಿಂತಿದೆ? ಎಂದು ಕೇಳಿದರೆ ಹಲವಾರು ಉತ್ತರಗಳು ಸಾಲಾಗಿ ಹೊಳೆಯುತ್ತಲೇ ಹೋಗುತ್ತವೆ.  ಆದಿಶೇಷನ ಮೇಲೆ, ಸಮುದ್ರದಲ್ಲಿ, ಸೌರಮಂಡಲದಲ್ಲಿ, ಗುರುತ್ವಾಕರ್ಷಣೆಯಲ್ಲಿ ಹೀಗೆ ಹಲವಾರು ಉತ್ತರಗಳು ದೊರೆಯುವುದು ಸಹಜ. ದೈವಿಕವಾಗಿ ನಾವು, ಈ ಭೂಮಂಡಲವು ಆದಿಶೇಷನ ಮೇಲೆ ನಿಂತಿದೆ, ಆತನೇನಾದರೂ ತಲೆಯಲ್ಲಾಡಿಸಿ ಬಿಟ್ಟರೆ, ಭೂಮಿ ನೀರಿನಲ್ಲಿ ಮುಳುಗಿ ಸರ್ವನಾಶವಾಗುತ್ತದೆ ಎಂದು ನಂಬಿದ್ದೇವೆ. ಅಂದರೆ ಇಲ್ಲಿ ನಂಬಿಕೆ ಎಂಬುದು ಬಲವಾದ ಅಂಶ. ಯಾಕೆಂದರೆ ಮನುಷ್ಯ ಏನೇ ಸಂಶೋಧನೆ ಮಾಡಿ ಕರಾರುವಾಕ್ಕಾಗಿ ಭೂಮಿಯಲ್ಲಿನ ಘಟನೆಗಳಿಗೆ ವೈಜ್ಞಾನಿಕವಾದ ಕಾರಣಗಳನ್ನು ಎದುರಿಗಿಟ್ಟರೂ ಅವೆಲ್ಲವನ್ನೂ ಸತ್ಯವೆಂದು ಒಪ್ಪಿಕೊಳ್ಳುವಲ್ಲಿ ನಂಬಿಕೆ ಕೆಲಸ ಮಾಡಲೇಬೇಕು. ನಂಬಿಕೆ ಎಂಬುದು ಮನಸ್ಸಿಗೆ ಸಂಬಂಧಿಸಿದ್ದು. ಯಾವುದೋ ಒಂದು ಸಂಗತಿಯನ್ನುನಂಬುವುದಿಲ್ಲವೆಂದು ಮನಸ್ಸು ನಿರ್ಧರಿಸಿಬಿಟ್ಟರೆ, ಅಲ್ಲಿಗೆ ಶುದ್ಧ ಚಿನ್ನವನ್ನೇ ತಂದು ಇದಿರಿಗಿಟ್ಟರೂ ನಾವು ಅದನ್ನು ಚಿನ್ನವೆಂದು ನಂಬುವುದಿಲ್ಲ. ಯಾಕೆಂದರೆ, ಇಲ್ಲಿ ನಂಬಿಕೆ ಎಂಬುದು ಕೆಲಸ ಮಾಡುತ್ತಿರುತ್ತದೆ. ಚಿನ್ನಕ್ಕೆ ಯಾರೋ ಇದು ಚಿನ್ನ ಎಂದು ಹೆಸರಿಸಿದ್ದಾರೆ; ನಂಬಿಸಿದ್ದಾರೆ. ಹಾಗಾಗಿಯೇ ಅದನ್ನೇ ಚಿನ್ನವೆಂದು ನಂಬುತ್ತಲೇ ಬಂದಿದ್ದೇವೆ. ಅದು ಚಿನ್ನವೇ ಹೌದೋ, ಅಲ್ಲವೋ ಗೊತ್ತಿಲ್ಲ!

ಹಾಗಾಗಿಯೇ ಈ ನಂಬಿಕೆ ಎಂಬುದು ಸಂಸ್ಕಾರ. ಆದಿಶೇಷನೆಂಬುದು ನಂಬಿಕೆಯ ಪ್ರತಿರೂಪ. ನಂಬಿಕೆ ಎಂಬುದು ಹುಟ್ಟಿನಿಂದ ಬರಬೇಕಾದದ್ದು. ಅದಕ್ಕೆ ಶುದ್ಧವಾದ ಸಂಸ್ಕಾರವೂ ಬೇಕು. ಹಾಗಾಗಿ ರಕ್ಕಸರು ಪರಸ್ಪರ ಒಬ್ಬರನೊಬ್ಬರು ನಂಬುವುದಿಲ್ಲ. ಯಾಕೆಂದರೆ ಅವರು ಮೂಲತಃ ಸಂಸ್ಕಾರ ವಿಹೀನರಾಗಿಯೇ ಹುಟ್ಟಿರುತ್ತಾರೆ; ಬದುಕುತ್ತಿರುತ್ತಾರೆ. ಬದುಕಿನ ಪ್ರತಿಕ್ಷ$ಣವೂ ನಂಬಿಕೆಯ ಮೇಲೆಯೇ ನಿಂತಿದೆ. ಅಂದರೆ ಈ ಪ್ರಪಂಚವೇ ನಂಬಿಕೆ ಮೇಲೆ ನಿಂತಿದೆ. ಸಾವು ಯಾವಾಗ ಎಂಬುದನ್ನು ಯಾವುದೇ ವಿಜ್ಞಾನ ಕರಾರುವಾಕ್ಕಾಗಿ ಹೇಳದು. ಆದರೆ ನಾವು ನಾಳೆಯ ಬಗ್ಗೆ ಯೋಚಿಸುತ್ತ, ನಾಳಿನ ಅಗತ್ಯವನ್ನು ಪೂರೈಸಲು ಇಂದು ಪ್ರಯತ್ನಿಸುತ್ತಲೇ ಇರುತ್ತೇವೆ. ಕಾರಣ ಮಹತ್ತರದ್ದೇನಿಲ್ಲ; ಕೇವಲ ನಂಬಿಕೆ. ಆದ್ದರಿಂದಲೇ ನಂಬಿಕೆಯ ಸಂಸ್ಕಾರ ಪ್ರತಿಯೊಬ್ಬನಲ್ಲಿಯೂ ಇರಲೇಬೇಕು.

ನಂಬಿಕೆಯೆಂಬುದು ಮನುಷ್ಯನ ಪ್ರತಿ ಹೆಜ್ಜೆಯ ಶಕ್ತಿ. ಅದು ಸತ್ಯದೆಡೆಗೆ ಇದ್ದಾಗ ಇನ್ನೂ ಬಲವಾಗಿರುತ್ತದೆ. ಅದರ ಪರಿಣಾಮವೂ ಫ‌ಲದಾಯಕವಾಗಿರುತ್ತದೆ. ದೋಣಿಯಲ್ಲಿ ನದಿ ದಾಟುವಾಗ ಅಂಬಿಗನ ಮೇಲೆ ನಂಬಿಕೆ ಇಟ್ಟಿರುತ್ತೇವೆ. ಆದರೆ ಏನು ಅನಾಹುತವಾಗುವುದೋ? ಅಂಬಿಗನಿಂದ ಅದನ್ನು ತಪ್ಪಿಸಲು ಸಾಧ್ಯವೇ? ಎಂಬ ಅಪನಂಬಿಕೆ ನಮ್ಮನ್ನು ಆವರಿಸಿದರೆ ನದಿಯ ದಡ ಸೇರುವತನಕವೂ ನರಕಯಾತನೆಯನ್ನೇ ಅನುಭವಿಸಬೇಕಾಗುತ್ತದೆ. ಅಥವಾ ಪಯಣವನ್ನು ಮುಂದುವರಿಸದೆ ಅಲ್ಲಿಯೇ ಮೊಟಕುಗೊಳಿಸಬೇಕಾಗುತ್ತದೆ. ಇದು ಬದುಕಿಗೆ ನೇರವಾಗಿ ಸಂಬಂಧಿಸಿದ ಹೋಲಿಕೆ. ನಾವು ದೇವರನ್ನು ನಂಬುತ್ತೇವೆ. ಆತನಿಗಿರುವ ಶಕ್ತಿಯನ್ನು ನಂಬುತ್ತೇವೆ. ಅವನನ್ನು ಆಧರಿಸಿ ಬದುಕುತ್ತ ಕಷ್ಟಗಳನ್ನು ಮರೆಯುತ್ತೇವೆ. ಆದರೆ ನಂಬಿಕೆಯ ಸಂಸ್ಕಾರ ಇನ್ನೂ ಬಲವಾಗಿಲ್ಲ ಎಂಬುದು ನನ್ನ ಅಬಿಪ್ರಾಯ. ಯಾಕೆಂದರೆ ದೇವರು ಎಲ್ಲಾ ಕಡೆಯಿದ್ದಾನೆ ಎಂಬ ನಂಬಿಕೆಯಿದ್ದರೂ ನಾವು ಅನಾಚಾರಗಳಲ್ಲಿ ತೊಡಗಿಕೊಳ್ಳುತ್ತಿದ್ದೇವೆ. ನಮಗೆ ನಮ್ಮ ಕಷ್ಟಗಳು ಗೊತ್ತು. ಅದಕ್ಕೆ ಕಾರಣಗಳೂ ಹಲವರಿಗೆ ತಿಳಿದಿರಬಹುದು. ಯಾಕೆಂದರೆ ಸರ್ವಾಂತರ್ಯಾಮಿಯಾದ ದೇವರನ್ನು ಮರೆತು ಆತನ ಕಣ್ಣೆದುರಲ್ಲೇ ದುಷ್ಕೃತ್ಯಗಳನ್ನು ಮಾಡಿರುತ್ತೇವೆ. ಅಲ್ಲದೆ ನಂಬಿದವನಿಗೆ ಮೋಸ ಮಾಡುತ್ತೇವೆ. ಅಚಲವಾದ ನಂಬಿಕೆ ಪ್ರತಿಶತವಿದ್ದು ಅದಕ್ಕೆ ತಪ್ಪದೆ ನಡೆದುಕೊಂಡರೆ ಜೀವನ ಆನಂದಮಯವಾಗುವುದರಲ್ಲಿ ಸಂದೇಹವಿಲ್ಲ.

ನಂಬಿಕೆಯ ಶಕ್ತಿ

Advertisement

 ಜಗತ್ತು ನಂಬಿಕೆಯ ಮೇಲೆ ನಿಂತಿದೆ; ನಂಬಿಕೆಯೇ ದೇವರು. ನಂಬಿಕೆಯ ಸಂಸ್ಕಾರ ನಮ್ಮ ಆಚಾರದಲ್ಲಿ ಬೆನ್ನೆಲುಬಾಗಿ ನಿಂತರೆ ಜಗತ್ತು ಆನಂದದ ಬೆಳಕಿನಲ್ಲಿ ಹೊಳೆಯುತ್ತಿರುತ್ತದೆ.

ವಿಷ್ಣು ಭಟ್ಟ ಹೊಸ್ಮನೆ

Advertisement

Udayavani is now on Telegram. Click here to join our channel and stay updated with the latest news.

Next