Advertisement

ಧರ್ಮಾಚರಣೆಯಲ್ಲಿ ನಂಬಿಕೆಯಿದ್ದರೆ ಸತ್ಪಲ ಪ್ರಾಪ್ತಿ

01:15 PM Jul 29, 2017 | |

ಬಾಳೆಹೊನ್ನೂರು: ಮಾನವನ ಒಳಿತಿಗಾಗಿ ವಿಧಿ ವಿಧಾನ ಸಂಪ್ರದಾಯ ಮತ್ತು ಪವಿತ್ರ ಆಚರಣೆಗಳು ಬೆಳೆದು ಬಂದಿವೆ. ದೇವರು ಮತ್ತು ಧರ್ಮಾಚರಣೆಯಲ್ಲಿ ನಂಬಿಗೆ ವಿಶ್ವಾಸಗಳಿದ್ದರೆ ಸತ್ಪಲ ಪಡೆಯಲು ಸಾಧ್ಯವಾಗುವುದೆಂದು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ|ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

Advertisement

ಅವರು ಶ್ರೀ ರಂಭಾಪುರಿ ಪೀಠದಲ್ಲಿ ನಾಗಪಂಚಮಿ ನಿಮಿತ್ಯ ನಾಗ ದೇವರಿಗೆ ಹಾಲೆರೆದು ಪೂಜಿಸಿ ಆಶೀರ್ವಚನ ನೀಡಿದರು. ಮೀನು ನೀರಿನಲ್ಲಿದ್ದರೆ ಸಂತೋಷವಾಗಿರುತ್ತದೆ. ನೀರಿನಿಂದ ಆಚೆ ಬಂದರೆ ಚಟಪಡಿಸುತ್ತದೆ. ಮನುಷ್ಯ ಧರ್ಮ ದೇವರಲ್ಲಿ ನಂಬಿಕೆ ವಿಶ್ವಾಸದಿಂದ ಬಾಳಿದರೆ ಶಾಂತಿ ನೆಮ್ಮದಿ ಸಿಗಲು ಸಾಧ್ಯ. ಮನುಷ್ಯ ಇಂದು ಧರ್ಮ ಧ್ಯಾನ ಹಾಗೂ ಪರಮಾತ್ಮನ ಚಿಂತನೆಯಿಂದ ದೂರವಾದ ಕಾರಣ ತೊಂದರೆಯಾಗುತ್ತಿದೆ. ಬಾಲ್ಯದಲ್ಲಿ ಜ್ಞಾನ ಯೌವನದಲ್ಲಿ ಸಂಪತ್ತು ವೃದ್ಧಾಪ್ಯದಲ್ಲಿ ಪುಣ್ಯ ಕಾರ್ಯಗಳನ್ನು ಮಾಡಿ ಜೀವನ ಸಾರ್ಥಕಪಡಿಸಿಕೊಳ್ಳಬೇಕಾಗಿದೆ. ದೋಣಿಗೆ ಬಳಸಿದ ಮರ ಚೂರು ಚೂರಾಗಿ ಬಿಟ್ಟರೆ ಅದು ನೀರಿನಲ್ಲಿ ತೇಲಬಹುದು. ಆದರೆ ಜನರನ್ನು ಸುರಕ್ಷಿತವಾಗಿ ದಡ ತಲುಪಿಸಲಾಗದು. ಬಿಡಿ ಹೂಗಳು ಸುಂದರವಾಗಿ ಕಾಣಬಹುದು. ಆದರೆ ಅದು ಮಾಲೆಯಾದಾಗ ಪರಮಾತ್ಮನ ಕೊರಳನ್ನು ಅಲಂಕರಿಸುತ್ತದೆ. ಯಾವುದೇ ಸಮಾಜ ಸೂತ್ರವೊಂದರಲ್ಲಿ ಬಂಧಿಯಾದಾಗ ಆ ಬಂಧನವೇ ಅದಕ್ಕೆ ರಕ್ಷಾ ಕವಚವಾಗುತ್ತದೆ. ವೈಚಾರಿಕತೆ ಮತ್ತು ಸುಧಾರಣೆಯ ಹೆಸರಿನಲ್ಲಿ ಮೂಲ ನಂಬಿಕೆ ಸಂಪ್ರದಾಯಗಳನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ. ಸಮಾಜದಲ್ಲಿ ಬೆಳೆದು ಬಂದಿರುವ ಆಚರಣೆ ಸಂಪ್ರದಾಯಗಳು ಮಾನವನ ಶ್ರೇಯಸ್ಸಿಗಾಗಿ
ಹೊರತು ಅವನತಿಗಲ್ಲವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಬೋ ಧಿಸಿದ್ದಾರೆ ಎಂದರು.

ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯರು, ಮಹಾರಾಷ್ಟ್ರದ ಬಾಳಾಪುರ ಜಂಗಮಮಠದ ಡಾ| ವಿರೂಪಾಕ್ಷ ಶಿವಾಚಾರ್ಯರು ಹಾಗೂ ಅಪಾರ ಭಕ್ತರು ನಾಗರಕಟ್ಟೆಗೆ ಹಾಲೆರೆದು ಪೂಜಿಸುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next