ಬೆಳಗಾವಿ: ಬೆಳಗಾವಿ ಗಡಿ ವಿವಾದ ಸಂಬಂಧ ಮಹಾರಾಷ್ಟ್ರದ ಸರ್ವ ಪಕ್ಷದ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶೀಘ್ರದಲ್ಲೇ ಭೇಟಿಯಾಗಲಿದೆ ಎಂದು ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಸದಸ್ಯ, ಸಂಸದ ಧೈರ್ಯಶೀಲ ಮಾನೆ ತಿಳಿಸಿದರು.
ನಗರದಲ್ಲಿ ಗುರವಾರ ಮಾಧ್ಯಮದವರೊಂದಿಗೆ ಮಾತನಾಡಿ, ಮರಾಠಿ ಭಾಷಿಕರ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಭಾಷಿಕ ಅಲ್ಪಸಂಖ್ಯಾತ ಕಚೇರಿಯನ್ನು ಚೆನ್ನೈಗೆ ಸ್ಥಳಾಂತರಿಸಲಾಗಿದೆ. ಮರಾಠಿ ಭಾಷಿಕರು ಪಾಕಿಸ್ತಾನದಲ್ಲಿ ಇಲ್ಲ. ಕರ್ನಾಟಕ ಸರ್ಕಾರ ಮರಾಠಿ ಭಾಷೆಯ ಅವಮಾನ ಮಾಡುತ್ತಿರುವುದನ್ನು ನಾವು ಸಹಿಸುವುದಿಲ್ಲ ಎಂದು ಕಿಡಿಕಾರಿದರು.
ಕರ್ನಾಟಕ ವಿಧಾನಸಭೆ ಸಭಾಪತಿ ನಿಷ್ಪಕ್ಷಪಾತವಾಗಿ ಜವಾಬ್ದಾರಿ ವಹಿಸಬೇಕಾಗುತ್ತದೆ. ಒಂದೇ ಪಕ್ಷಕ್ಕೆ ಸೀಮಿತವಾದ ಸಭಾಧ್ಯಕ್ಷರಲ್ಲ. ಆದರೆ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರು ಮರಾಠಿ ಭಾಷಿಕರ ಮನಸ್ಸಿಗೆ ನೋವುಂಟಾಗುವಂತೆ ಮಾತನಾಡಿದ್ದಾರೆ ಇದನ್ನು ದಾಖಲೆ ಸಮೇತ ನಮ್ಮ ಪ್ರಕರಣ ಗಟ್ಟಿಯಾಗುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಸಭೆ ನಡೆಸಿದ್ದರು. ಎಲ್ಲವೂ ಶಾಂತಿಯುತವಾಗಿ ಹಾಗೂ ಯಾರಿಗೂ ನೋವಾಗದಂತೆ ಇರುವಂತೆ ತಿಳಿಸಿದ್ದರು. ಆದರೆ ಮೇಲಿನವರು ಹೇಳಿದರೂ ಕೆಳಗಿನವರು ಅದನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದರು.
ನವೆಂಬರ್ 1ರಂದು ಕರಾಳ ದಿನಾಚರಣೆ ಕಾರ್ಯಕ್ರಮ ಕ್ಕೆ ನಾನು ಬಾರದಂತೆ ಪೊಲೀಸರ ಮೇಲೆ ಒತ್ತಡ ಹಾಕಿ ನಿರ್ಬಂಧ ಹೇರಿದ್ದರು. ಕರ್ನಾಟಕ ಸರ್ಕಾರ ಜನರ ಮೂಲ ಹಕ್ಕುಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದು, ಈ ಎಲ್ಲ ದೌರ್ಜನ್ಯವನ್ನು ನಾವು ಕೇಸಿನಲ್ಲಿ ಉಲ್ಲೇಖಿಸುತ್ತೇವೆ ಎಂದರು.