Advertisement

ಬೆಳಗಾವಿ: ತ್ಯಾಜ್ಯ ನಿರ್ವಹಣೆಗೆ ಪರಿಣಾಮಕಾರಿ ಪರಿಹಾರ ಅಗತ್ಯ

04:38 PM Feb 15, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ಭಾರತವು ವಿಶ್ವದ ಮೂರನೇ ಆರ್ಥಿಕತೆಯ ರಾಷ್ಟ್ರವಾಗುವತ್ತ ದಾಪುಗಾಲಿಡುತ್ತಿದೆ. ಉತ್ಪಾದನಾ ಕ್ಷೇತ್ರದ ಕೈಗಾರಿಕೆಗಳಿಲ್ಲದೆ ಇದನ್ನು ಸಾಧಿಸಲಾಗುವುದಿಲ್ಲ. ಆದ್ದರಿಂದ ಉತ್ಪಾದನಾ ಕ್ಷೇತ್ರವು ದೇಶದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು
ಪಡೆಯುವುದರ ಜೊತೆಗೆ ವೇಗವಾಗಿ ಬೆಳೆಯುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

Advertisement

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎರಡು ದಿನಗಳ ಕಾಲ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಉತ್ಪಾದನಾ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಯು ಅಪಾರ ಪ್ರಮಾಣದ
ಅಪಾಯಕಾರಿ ಮತ್ತು ಕೈಗಾರಿಕಾ ತ್ಯಾಜ್ಯವನ್ನು ಉಂಟುಮಾಡುತ್ತದೆ. ಆದ್ದರಿಂದ ನಮ್ಮ ಪರಿಸರಕ್ಕೆ ಅಪಾಯಕಾರಿ ತ್ಯಾಜ್ಯ ವಸ್ತುಗಳಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಹೊಸ ಯೋಜನೆಗಳನ್ನು ಮತ್ತು ನಾಗರಿಕರಾಗಿ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಚಿಂತನೆ ನಡೆಸಿ ಯೋಜನೆಗಳನ್ನು ಅನುಷ್ಠಾನಗೊಳಿಸುವದು ಅನಿವಾರ್ಯವಾಗಿದೆ ಎಂದರು.

ಕೋವಿಡ್‌ ಸಾಂಕ್ರಾಮಿಕದ ನಂತರ ಪ್ರಪಂಚವು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಸಾಕಷ್ಟು ತ್ಯಾಜ್ಯವನ್ನು ಕಂಡಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವು ಈ ರೀತಿಯ ತ್ಯಾಜ್ಯವನ್ನು ನಿರ್ವಹಿಸಲು ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಅವರು ಹೇಳಿದರು.

ಇಂದಿನ ವಿದ್ಯಾರ್ಥಿಗಳು ಶುದ್ಧ ಗಾಳಿ, ನೀರು, ಮಣ್ಣಿನ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕು. ವೈಜ್ಞಾನಿಕ ರೀತಿಯಲ್ಲಿ
ತ್ಯಾಜ್ಯ ಮತ್ತು ಅಪಾಯಕಾರಿ ವಸ್ತುಗಳನ್ನು ಬೇರ್ಪಡಿಸುವ ಬಗ್ಗೆ ಸಂಬಂಧಪಟ್ಟ ಜನರು ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯ ಮತ್ತು ಇತ್ತೀಚಿನ ಬೆಳವಣಿಗೆಗಳನ್ನು ಶ್ಲಾಘಿಸಿದ ಅವರು, ಕ್ಯಾಂಪಸ್‌ನಲ್ಲಿ ಉದ್ಯಮ ಆಧಾರಿತ ಲ್ಯಾಬ್‌ಗಳನ್ನು ಸ್ಥಾಪಿಸುವ ಹೊಸ ತಂತ್ರಜ್ಞಾನವನ್ನು ತ್ವರಿತವಾಗಿ ಅಳವಡಿಸಿಕೊಳ್ಳುತ್ತಿದೆ, ಔದ್ಯೋಗಿಕ ಕ್ಷೇತ್ರದ ಅಗತ್ಯಗಳಿಗೆ ಅನುಗುಣವಾಗಿ ಪಠ್ಯಕ್ರಮವನ್ನು ಪರಿಷ್ಕರಿಸುತ್ತದೆ ಮತ್ತು ಈ ರೀತಿಯ
ಸಮ್ಮೇಳನಗಳನ್ನು ಹಮ್ಮಿಕೊಳ್ಳುವ ಮೂಲಕ ಅದರ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ವಿ ಟಿ ಯು ಕುಲಪತಿ ಪ್ರೊ. ವಿದ್ಯಾಶಂಕರ್‌ ಎಸ್‌. ಮಾತನಾಡಿ, ಅಪಾಯಕಾರಿ ವಸ್ತುಗಳ ನಿರ್ವಹಣೆ ಕುರಿತು ಜಾಗೃತಿ ಮತ್ತು ಶಿಕ್ಷಣ ಇಂದಿನ ಅಗತ್ಯವಾಗಿದೆ. ಆದ್ದರಿಂದ ಅಪಾಯಕಾರಿ ವಸ್ತುಗಳು ಮತ್ತು ನಿರ್ವಹಣೆ ವಿಷಯವನ್ನು ಕಡ್ಡಾಯವಾಗಿ ಕ್ರೆಡಿಟ್‌ ಕೋರ್ಸ್‌ ಪಠ್ಯಕ್ರಮದಲ್ಲಿ ಸೇರಿಸಲಾಗುವುದು ಎಂದು ಹೇಳಿದರು.

ಕುಲಸಚಿವರಾದ ಪ್ರೊ. ಬಿ. ಈ. ರಂಗಸ್ವಾಮಿ ಸ್ವಾಗತಿಸಿದರು. ಕುಲಸಚಿವರಾದ (ಮೌಲ್ಯಮಾಪನ), ಪ್ರೊ. ಟಿ. ಎನ್‌. ಶ್ರೀನಿವಾಸ ಹಾಗೂ ಪ್ರೊ. ಜಿ. ಸಿ. ರಂಗನಾಥ್‌ ಉಪಸ್ಥಿತರಿದ್ದರು. ಸಿವಿಲ್‌ ವಿಭಾಗದ ಮುಖ್ಯಸ್ಥ ಡಾ ನಾಗರಾಜ್‌ ಪಾಟೀಲ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next