Advertisement

ಬೆಳಗಾವಿ: ಸಾರಾಯಿ ಬಿಲ್‌ ಕೊಡದ್ದಕ್ಕೆ ಹ*ತ್ಯೆಗೈದ ಇಬ್ಬರು ಜೈಲಿಗೆ

12:00 PM Dec 01, 2024 | Team Udayavani |

■ ಉದಯವಾಣಿ ಸಮಾಚಾರ
ಬೆಳಗಾವಿ: ಲಿಫ್ಟ್‌ ಕೊಡಲು ಸಾರಾಯಿ ಕುಡಿಸಿದ ಬಿಲ್‌ ನೀಡದ್ದಕ್ಕೆ ಯುವಕನನ್ನು ಹ*ತ್ಯೆ ಮಾಡಿ ಬಂಧನಕ್ಕೊಳಗಾಗಿದ್ದ ಇಬ್ಬರು ಆರೋಪಿಗಳನ್ನು ಮಾರಿಹಾಳ ಪೊಲೀಸರು ಶನಿವಾರ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಮಾರಿಹಾಳದ ಶಿವಾನಂದ ನಿಂಗಪ್ಪ ಕರವಿನಕೊಪ್ಪ (28) ಹಾಗೂ ಆಕಾಶ ಗಂಗಪ್ಪ ಮ್ಯಾಗೋಟಿ(21) ಎಂಬಿಬ್ಬರನ್ನು ಪೊಲೀಸರು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ. ಬಂಧಿತರಿಂದ ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.

Advertisement

ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದ, ಸದ್ಯ ಶ್ರೀನಗರ ನಿವಾಸಿ ನಿಂಗನಗೌಡ ಸಂಗನಗೌಡ  ಸಣ್ಣಗೌಡ್ರ(26) ಎಂಬಾತನನ್ನು ಬೆಳಗಾವಿ ವಿಮಾನ ನಿಲ್ದಾಣ ಕಾಂಪೌಂಡ್‌ ಸನಿಹದ ಹೊನ್ನಿಹಾಳ- ಮಾವಿನಕಟ್ಟಿ ಬಳಿ ಇಟ್ಟಿಗೆಯಿಂದ ಜಜ್ಜಿ ಕೊಲೆ ಮಾಡಿದ್ದರು. ನ.18ರಂದು ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಪೊಲೀಸರು 11 ದಿನಗಳ ಬಳಿಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿ ಗ್ರಾಮೀಣ ಎಸಿಪಿ ಗಂಗಾಧರ ಬಿ.ಎಂ. ಮಾರ್ಗದರ್ಶನದಲ್ಲಿ ಮಾರಿಹಾಳ ಠಾಣೆ ಇನ್ಸ್‌ಪೆಕ್ಟರ್‌ ಗುರುರಾಜ ಕಲ್ಯಾಣಶೆಟ್ಟಿ, ಪಿಎಸ್‌ಐಗಳಾದ ಮಂಜುನಾಥ, ಚಂದ್ರಶೇಖರ, ಸಿಬ್ಬಂದಿ ಬಿ.ಎನ್‌. ಬಳಗನ್ನವರ, ಬಿ.ಬಿ. ಕಡ್ಡಿ, ಎಂ.ಬಿ. ಬಡಿಗೇರ, ಹನುಮಂತ ಯರಗುದ್ರಿ, ರಾಮಕೃಷ್ಣ ತಳವಾರ, ಚನ್ನಪ್ಪ ಹುಣಚ್ಯಾಳ, ರೇವಣಸಿದ್ದ ಬಳುಂಡಗಿ, ರಮೇಶ ಅಕ್ತಿ, ಮಹಾದೇವ ಕಾರ್ಯಾಚರಣೆ ನಡೆಸಿದ್ದರು.

ಯರಗಟ್ಟಿಯಿಂದ ಬೆಳಗಾವಿ ಕಡೆಗೆ ಬಸ್‌ನಲ್ಲಿ ಹೋಗುವಾಗ ಮಾರ್ಗಮಧ್ಯೆ ಮೋದಗಾ ಬಳಿ ನಿಂಗನಗೌಡ ಸಣ್ಣಗೌಡ್ರ ಇಳಿದಿದ್ದನು. ಬಳಿಕ ಮಾರಿಹಾಳವರೆಗೆ ನಡೆದು ಸಾಗಿದ್ದು, ಅಲ್ಲಿ ಶಿವಾನಂದ ಹಾಗೂ ಆಕಾಶ ಬಳಿ ಲಿಫ್ಟ್‌ ಕೇಳಿದ್ದಾನೆ. ನಿಮಗೆ ಸಾರಾಯಿ ಕುಡಿಸುತ್ತೇನೆ.

ಒಂದು ಸಾವಿರ ರೂ. ನೀಡುತ್ತೇನೆ. ಬೆಳಗಾವಿ ವರೆಗೆ ಡ್ರಾಪ್‌ ಮಾಡುವಂತೆ ಹೇಳಿದ್ದಾನೆ. ಬಳಿಕ ಮೂವರೂ ಸೇರಿ ಬಾಳೇಕುಂದ್ರಿ ಕೆ.ಎಚ್‌. ಬಳಿ ಸಾರಾಯಿ ಕುಡಿದಿದ್ದು, ಹಣ ನೀಡಲು ನಿಂಗನಗೌಡ ನಿರಾಕರಿಸಿದ್ದಕ್ಕೆ ಇಟ್ಟಿಗೆಯಿಂದ ಜಜ್ಜಿ ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಕೊಲೆ ಪ್ರಕರಣವನ್ನು ಪೊಲೀಸರು ಹಲವು ಆಯಾಮಗಳಿಂದ ತನಿಖೆ ನಡೆಸಿ ಹಂತಕರನ್ನು ವಶಕ್ಕೆ ಪಡೆದಿರುವ ಬಗ್ಗೆ ನ.29ರಂದೇ “ಉದಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next