Advertisement

Belagavi: ಮಾಲೀಕನನ್ನು ಹುಡುಕಿಕೊಂಡು 200 ಕಿ.ಮೀ ಕ್ರಮಿಸಿದ ನಾಯಿ!

04:32 PM Jul 30, 2024 | Team Udayavani |

■ ಉದಯವಾಣಿ ಸಮಾಚಾರ
ಬೆಳಗಾವಿ: ಇದು ಆಷಾಢ ಏಕಾದಶಿ ಸಂದರ್ಭದಲ್ಲಿ ಪಂಢರಪುರಕ್ಕೆ ವಾರಕರಿಗಳ ಜತೆಗೆ ಪಾದಯಾತ್ರೆಯಲ್ಲಿ ತೆರಳಿ ನಂತರ ಮನೆಗೆ ಹಿರೋನಂತೆ ಬಂದ ನಾಯಿಯ ಕಥೆ. ಅಚ್ಚರಿ ಎನಿಸಿದರೂ ಸತ್ಯ. ಇದು ನಡೆದಿದ್ದು ನಿಪ್ಪಾಣಿ ತಾಲೂಕಿನ ಯಮಗರಣಿ ಗ್ರಾಮದಲ್ಲಿ. ಇಲ್ಲಿಯ ಜ್ಞಾನದೇವ ಕುಂಬಾರ ಅವರ ಮನೆಯ ನಾಯಿ ಈಗ ಎಲ್ಲರ ಮನೆ ಮಾತು.ಎಲ್ಲರಿಗೂ ಅಚ್ಚುಮೆಚ್ಚು.

Advertisement

ಪಂಢರಪುರಕ್ಕೆ ವಾರಕರಿಗಳ ಜತೆಗೆ ಪಾದಯಾತ್ರೆಯಲ್ಲಿ ಹೋಗಿ ತಪ್ಪಿಸಿಕೊಂಡಿದ್ದ ನಾಯಿ ನಂತರ 200 ಕಿಮೀ ಕ್ರಮಿಸಿ ಸುರಕ್ಷಿತವಾಗಿ ಮತ್ತೆ ತನ್ನ ಮಾಲೀಕನ ಮನೆ ಸೇರಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಆಷಾಢ ಏಕಾದಶಿಯ ಅಂಗವಾಗಿ
ಯಮಗರ್ಣಿ ಗ್ರಾಮದಿಂದ ಪಂಢರಪೂರಕ್ಕೆ ದಿಂಡಿ ಯಾತ್ರೆ ಹೋಗಿತ್ತು.

ಊರಿನ ಭಕ್ತರ ಜತೆ ಜ್ಞಾನದೇವ ಕುಂಬಾರ ಅವರ ಸಾಕು ನಾಯಿಯೂ ದಿಂಡಿಯಾತ್ರೆಯನ್ನು ಹಿಂಬಾಲಿಸಿ ಪಂಢರಪುರ ತಲುಪಿತ್ತು. ಯಮಗರ್ಣಿಯ ದಿಂಡಿ ಯಾತ್ರೆ ಆಷಾಢ ಏಕಾದಶಿಯ ಪೂಜೆ ಮುಗಿಸಿ ಊರಿಗೆ ಮರಳುವ ಸಂದರ್ಭದಲ್ಲಿ ಈ ನಾಯಿ ತಪ್ಪಿಸಿಕೊಂಡಿತ್ತು. ಯಮಗರ್ಣಿಯ ಭಕ್ತರು ಪಂಢರಪುರದಲ್ಲಿ ಸಮಾವೇಶಗೊಂಡ ಲಕ್ಷಾಂತರ ಭಕ್ತರ ನಡುವೆ ನಾಯಿಯನ್ನು ಹುಡುಕಿದರೂ ಎಲ್ಲಿಯೂ ನಾಯಿ ಪತ್ತೆ ಆಗಲಿಲ್ಲ.

ನಾಯಿಯನ್ನು ಹುಡುಕಿ ಸುಸ್ತಾದ ಯಮಗರ್ಣಿಯ ಭಕ್ತರು ಕೊನೆಗೆ ನಿರಾಸೆ ಮತ್ತು ನೋವಿನಿಂದ ಊರಿಗೆ ಮರಳಿ ಬಂದಿದ್ದರು. ಈ ನಾಯಿಯೂ ಸಹ ತನ್ನ ಮಾಲೀಕನನ್ನು ಹುಡುಕುವ ಪ್ರಯತ್ನ ಮಾಡಿದೆ. ಎಲ್ಲಿಯೂ ತನ್ನ ಮಾಲೀಕನು ಕಾಣಿಸದೇ ಇದ್ದಾಗ ಕೊನೆಗೆ ಏಕಾಂಗಿ ಯಾಗಿ 200 ಕಿಮೀ ಕ್ರಮಿಸಿ ಸುರಕ್ಷಿತವಾಗಿ ಯಮಗರ್ಣಿ ಗ್ರಾಮಕ್ಕೆ ತಲುಪಿದೆ.

ಸೋಮವಾರ ನಾಯಿ ಮನೆಗೆ ಹಿಂದಿರುಗಿದಾಗ ಯಮಗರ್ಣಿ ಗ್ರಾಮದ ಜನರಿಗೆ ಒಂದು ಕ್ಷಣ ನಂಬಿಕೆ ಬಂದಿಲ್ಲ. ತಮ್ಮ ಕಣ್ಣನ್ನು ತಾವೇ ನಂಬಿಲ್ಲ. ಸ್ವತಃ ನಾಯಿಯನ್ನು ಸಾಕಿರುವ ಜ್ಞಾನದೇವ ಕುಂಬಾರ ಅವರಿಗೂ ನಂಬಿಕೆಯಾಗಿಲ್ಲ. ಪಾಂಡುರಂಗನೇ ಈ ನಾಯಿಯನ್ನು ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಬಂದಿದ್ದಾನೆ. ನಾಯಿ ಹಿಂತಿರುಗಿ ಬಂದಿದ್ದು ನೋಡಿ ನಮಗೆ ಬಹಳ
ಸಂತೋಷವಾಗಿದೆ ಎಂದು ಕಂಬಾರ್‌ ಭಾವುಕರಾಗಿ ಹೇಳಿದರು.

Advertisement

ನಾಯಿಯು ತನ್ನ ಮಾಲೀಕ ಮತ್ತು ಊರಿನ ಜನರನ್ನು ಹುಡುಕುತ್ತ 200 ಕಿಮೀ ಕ್ರಮಿಸಿದೆ. ಗ್ರಾಮಕ್ಕೆ ತಲುಪಲು ಸರಿಯಾದ ಮಾರ್ಗವನ್ನು ಕಂಡುಕೊಳ್ಳಲು ದೇವರೇ ಸ್ವತಃ ಅದಕ್ಕೆ ಸಹಾಯ ಮಾಡಿದ್ದಾನೆ. ನಿಜಕ್ಕೂ ನಾವು ಪಾಂಡುರಂಗನಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಅವನ ದಯದಿಂದಲೇ ನಾಯಿ ಸುರಕ್ಷಿತವಾಗಿ ಮನೆಗೆ ಮರಳಿದೆ ಎಂದು ಜ್ಞಾನದೇವ ಕುಂಬಾರ ಹೆಮ್ಮೆಯಿಂದ ಹೇಳಿದರು.

ಏಕಾಂಗಿಯಾಗಿ ಸುರಕ್ಷಿತವಾಗಿ ಊರಿಗೆ ಬಂದಿರುವ ಈ ನಾಯಿಗೆ ಗ್ರಾಮಸ್ಥರು ಭವ್ಯ ಸ್ವಾಗತ ಮಾಡಿದ್ದಾರೆ. ನಾಯಿಯ ಕೊರಳಿಗೆ ಹೂ ಮಾಲೆ ಹಾಕಿ ಊರಿನಲ್ಲಿ ಪಾಂಡುರಂಗ ದೇವಸ್ಥಾನ ದಿಂದ ಕುಂಬಾರ ಗಲ್ಲಿಯವರೆಗೂ ಮೆರವಣಿಗೆ ಮಾಡಿದರು. ಇದೇ ಸಂದರ್ಭದಲ್ಲಿ ಗ್ರಾಮದ ಜನರಿಗೆ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next