Advertisement
ಬೆಳಗಾವಿ, ನ. 11: ಒಂದು ವರ್ಷ ಪ್ರವಾಹದ ಕಾಟ, ಅನಂತರ ಕೋವಿಡ್ ಮಹಾಮಾರಿಯ ಆಟ, ಈಗ ಭೀಕರ ಬರದ ಸಂಕಷ್ಟ. ಇಂತಹ ವಿಷಮ ಸ್ಥಿತಿಯಲ್ಲಿ ರಾಜ್ಯ ಸರಕಾರ ತನ್ನ ಸಂಪ್ರದಾಯ ಎನ್ನುವಂತೆ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಸಜ್ಜಾಗಿದೆ.10 ದಿನಗಳ ಅಧಿವೇಶನಕ್ಕೆ ಏನಿಲ್ಲ ಎಂದರೂ 20ರಿಂದ 30 ಕೋಟಿ ರೂ. ಖರ್ಚು.
ಕಷ್ಟದ ಈ ಸಮಯದಲ್ಲಿ ಇಷ್ಟೊಂದು ಹಣ
ವೆಚ್ಚ ಮಾಡಿ ಅಧಿವೇಶನ ನಡೆಸುವ ಅಗತ್ಯವಿದೆಯೇ ಎಂದು ಪ್ರಶ್ನೆ ಮಾಡಿರುವ ರೈತ ಸಮುದಾಯ, ಇದಕ್ಕೆ ಸಣ್ಣ ಪರಿಹಾರದ ರೂಪದಲ್ಲಿ ತಾವೇ ಒಂದು ಸಲಹೆ ನೀಡಿದ್ದಾರೆ. ದುಂದುವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಶಾಸಕರು, ಸಚಿವರು ಮತ್ತು ಅಧಿಕಾರಿಗಳಿಗೆ ಗ್ರಾಮಗಳಲ್ಲಿ ಆತಿಥ್ಯ ನೀಡಲು ಮುಂದಾಗಿದ್ದಾರೆ. ಅಧಿವೇಶನ ಮುಗಿಯುವವರೆಗೂ ತಮ್ಮ ಮನೆಯಲ್ಲಿ ಇರುವಂತೆ ಬಹಿರಂಗ ಆಹ್ವಾನ ಕೊಟ್ಟಿದ್ದಾರೆ.
ಬರಗಾಲದ ಈ ಸಮಯದಲ್ಲಿ ದುಂದು ವೆಚ್ಚ ಕಡಿತದ ಜತೆಗೆ ಚುನಾವಣೆ ಬಳಿಕ ಹಳ್ಳಿಗಳನ್ನು ಬಹುತೇಕ ಮರೆತಿರುವ ಜನಪ್ರತಿನಿಧಿಗಳಿಗೆ ಹಳ್ಳಿಯ, ವಿಶೇಷವಾಗಿ ರೈತಾಪಿ ಜನರ ಬದುಕಿನ ವಾಸ್ತವ ಸ್ಥಿತಿಯನ್ನು ತೋರಿಸಿಕೊಡುವುದು ಈ ಆಹ್ವಾನದ ಮುಖ್ಯ ಉದ್ದೇಶ. ಸರಕಾರ ಮತ್ತು ಶಾಸಕರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಬೇಕಷ್ಟೇ.
ಮನವಿಗೆ ಸಿಗುವುದೇ ಸ್ಪಂದನೆ?
ಬೆಳಗಾವಿ ಜಿಲ್ಲೆಯ ರೈತ ಮುಖಂಡರು ಮುಖ್ಯಮಂತ್ರಿ ಸಹಿತ ಸಚಿವರು, ಆಡಳಿತ ಮತ್ತು ವಿಪಕ್ಷದ ಶಾಸಕರು, ಪರಿಷತ್ ಸದಸ್ಯರು, ಹಿರಿಯ ಐಎಎಸ್ ಅಧಿಕಾರಿಗಳಿಗೆ ತಮ್ಮ ಮನೆಗಳಲ್ಲಿ ವಸತಿ-ಊಟದ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಸ್ಥಳೀಯ ಶಾಸಕರು ಮತ್ತು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ವಿಧಾನ ಪರಿಷತ್ ಸಭಾಪತಿ ಮತ್ತು ವಿಧಾನಸಭೆ ಸಭಾಧ್ಯಕ್ಷರ ಗಮನಕ್ಕೂ ತಂದಿದ್ಧಾರೆ.
ಬರ ಸ್ಥಿತಿಯಿಂದ ರೈತರು ಕಂಗೆಟ್ಟಿದ್ದಾರೆ. ಬರಪೀಡಿತ ಪ್ರದೇಶಗಳ ಘೋಷಿಸಿದರೂ ಇದುವರೆಗೆ ರೈತರಿಗೆ ಪರಿಹಾರ ಬಂದಿಲ್ಲ. ಸರಕಾರ ಗ್ಯಾರಂಟಿ ಯೋಜನೆಗಳ ಹೊಡೆತದಲ್ಲಿ ದಿಕ್ಕುತಪ್ಪಿದೆ. ಕೋವಿಡ್ ಸಮಯದಲ್ಲಿ ದೇಶದ ಆರ್ಥಿಕ ಕ್ಷೇತ್ರಕ್ಕೆ ಭದ್ರತೆ ಕೊಟ್ಟಿದ್ದೇ ರೈತರು ಎಂಬ ವಿಷಯ ಮರೆತಿದ್ದಾರೆ. ಇದನ್ನೆಲ್ಲ ತಿಳಿಯಬೇಕಾದರೆ ಶಾಸಕರು, ಸಚಿವರು ಮತ್ತು ಅಧಿಕಾರಿಗಳು ರೈತರ ಮನೆಗೆ ಬಂದು ವಾಸ್ತವ್ಯ ಮಾಡಬೇಕು. ಆಗ ನಮ್ಮ ಜೀವನ ನೋಡಿದ ಹಾಗಾಗುತ್ತದೆ ಎಂಬುದು ರೈತ ಮುಖಂಡರ ಅಭಿಪ್ರಾಯ.
ಆಹ್ವಾನದ ಜತೆ ಎಚ್ಚರಿಕೆ
ನಮ್ಮ ಆತಿಥ್ಯದ ಮನವಿಗೆ ಸ್ಪಂದಿಸಿ ಬರುತ್ತಾರೆ ಎಂಬ ವಿಶ್ವಾಸದಿಂದ 25 ಹಳ್ಳಿಗಳಲ್ಲಿ ರೈತರ ಜತೆ ಸಮಾಲೋಚನೆ ಮಾಡಿದ್ದೇವೆ. ನಮ್ಮ ಭಾಗದ ತಿಂಡಿ, ತಿನಿಸುಗಳು, ಬಿಸಿ ಬಿಸಿ ರೊಟ್ಟಿ, ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶಗಳ ಭೋಜನವನ್ನು ಪ್ರೀತಿಯಿಂದ ನೀಡುತ್ತೇವೆ. ನಮ್ಮ ಆತಿಥ್ಯ ಸ್ವೀಕರಿಸಿದ ಬಳಿಕ ನಮ್ಮ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ, ಪರಿಹರಿಸುವ ಕೆಲಸ ಮಾಡಬೇಕು. ಪೂರ್ವ ತಯಾರಿ ಮಾಡಿಕೊಳ್ಳಲು ನಮಗೆ ಬೇಗನೆ ತಿಳಿಸಬೇಕು. ಒಂದು ವೇಳೆ ನಮ್ಮ ಪ್ರೀತಿಯ ಆಹ್ವಾನ ಸ್ವೀಕರಿಸದಿದ್ದರೆ ಮುಂದೆ ಲೋಕಸಭೆ ಚುನಾವಣೆ ಬರಲಿದೆ ಎಂಬುದು ರೈತರ ಸೂಕ್ಷ್ಮವಾದ ಎಚ್ಚರಿಕೆ.
ಶಾಸಕರು, ಸಚಿವರು ಹಾಗೂ ಅಧಿಕಾರಿಗಳು ತಮ್ಮ ಮನವಿಗೆ ಸ್ಪಂದಿಸಿ ಗ್ರಾಮದಲ್ಲಿ ವಾಸ್ತವ್ಯ ಮಾಡದಿದ್ದರೆ ಕಡೆಯ ಪಕ್ಷ ನಾಲ್ಕೈದು ಶಾಸಕರನ್ನು ಆಹ್ವಾನಿಸಿ ಗ್ರಾಮದಲ್ಲಿ ಉಳಿದುಕೊಳ್ಳುವಂತೆ ಪ್ರಯತ್ನಿಸಲಿರುವ ರೈತ ಮುಖಂಡರು ಈ ಮೂಲಕ ಸರಕಾರ ಹಾಗೂ ದೇಶಕ್ಕೆ ಹೊಸ ಸಂದೇಶ ರವಾನಿಸುವ ಆಲೋಚನೆ ಹೊಂದಿದ್ದಾರೆ.
ಮನೆಗಳಲ್ಲಿ ವ್ಯವಸ್ಥೆ
ತಮ್ಮ ಮನೆಗೆ ಬರುವ ಜನಪ್ರತಿನಿಧಿಗಳು ಮತ್ತು ಐಎಎಸ್ ಅಧಿಕಾರಿಗಳಿಗೆ ಆರತಿ ಬೆಳಗಿ, ಅಂಗಳದಲ್ಲಿ ರಂಗೋಲಿ ಹಾಕಿ ಅದ್ದೂರಿಯಾಗಿ ಸ್ವಾಗತಿಸುವುದಲ್ಲದೆ ಅವರ ಆಪ್ತ ಸಹಾಯಕರು, ಭದ್ರತಾ ಸಿಬಂದಿಗೂ ಎಲ್ಲ ರೀತಿಯ ವ್ಯವಸ್ಥೆ ಮಾಡಲು ಸಜ್ಜಾಗಿದ್ದಾರೆ. ಇದಕ್ಕಾಗಿ ಬೆಳಗಾವಿ ತಾಲೂಕಿನ ಹಲಗಾ, ಬಸ್ತವಾಡ, ಕೊಂಡಸಕೊಪ್ಪ, ಕೋಳಿಕೊಪ್ಪ, ಧಾಮನೆ, ಕೆ.ಕೆ.ಕೊಪ್ಪ, ಕಾಕತಿ, ಬಸ್ಸಾಪುರ, ಅರಳಿಕಟ್ಟಿ, ಮಜಗಾವಿ, ಮಚ್ಛೆ, ಹಿರೇಬಾಗೇವಾಡಿ, ಸಾಂಬ್ರಾ, ಚಂದನ ಹೊಸುರ, ಗಣಿಕೊಪ್ಪ, ಹೊನಗಾ, ಕಡೋಲಿ, ಅಂಬೇವಾಡಿ, ಉಚಗಾಂವ, ಪೀರನವಾಡಿ, ದೇಸೂರ, ನಂದಿಹಳ್ಳಿ, ಸುಳೇಭಾವಿ, ಮಾರಿಹಾಳ ಸಹಿತ 25 ಹಳ್ಳಿಗಳ 500ಕ್ಕೂ ಹೆಚ್ಚು ಮನೆಗಳಲ್ಲಿ ಅಧಿವೇಶನಕ್ಕೆ ಬರುವವರ ಆತಿಥ್ಯಕ್ಕೆ ರೈತರು ತಯಾರಿ ನಡೆಸುತ್ತಿದ್ದಾರೆ. ಭೀಕರ ಬರಗಾಲವಿರುವಾಗ ಕೋಟಿಗಟ್ಟಲೆ ಹಣ ಖರ್ಚು ಮಾಡುವುದು ಬೇಡ. ಇದೇ ಹಣ ಬರಗಾಲ ಪರಿಹಾರ ನಿಧಿಗೆ ಉಪಯೋಗ ಮಾಡಲಿ. ಸರಕಾರದ ಪ್ರತಿನಿಧಿಗಳು ಗ್ರಾಮೀಣ ಪ್ರದೇಶಕ್ಕೆ ಬಂದು ನಮ್ಮ ಬದುಕು ನೋಡಲಿ. ಇಲ್ಲಿನ ಸ್ಥಿತಿಗತಿ, ಸಂಕಷ್ಟ ತಿಳಿದುಕೊಳ್ಳಲಿ ಎಂಬ ಉದ್ದೇಶದಿಂದ ಈ ಪ್ರಯತ್ನಕ್ಕೆ ಮುಂದಾಗಿದ್ದೇವೆ.
– ಪ್ರಕಾಶ ನಾಯಕ, ರೈತ ಮುಖಂಡರು
Related Articles
Advertisement