Advertisement

Karnataka: ನವೆಂಬರ್‌ನಲ್ಲಿ ಬೆಳಗಾವಿ ಅಧಿವೇಶನ? – ಸಚಿವ ಸಂಪುಟದಲ್ಲಿ ಇಂದು ಚರ್ಚೆ ಸಾಧ್ಯತೆ

10:23 PM Oct 04, 2023 | Team Udayavani |

ಬೆಂಗಳೂರು: ಒಟ್ಟು 12 ದಿನಗಳ ಕಾಲ ರಾಜ್ಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಸುವುದಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ಗುರುವಾರ ನಡೆಯುವ ಸಚಿವ ಸಂಪುಟ ಸಭೆಯ ಮುಂದೆ ಈ ವಿಚಾರ ಪ್ರಸ್ತಾಪವಾಗುವ ಸಾಧ್ಯತೆಗಳಿವೆ.

Advertisement

ಸದ್ಯಕ್ಕೆ ಸ್ಪೀಕರ್‌ ಯು.ಟಿ. ಖಾದರ್‌, ಮೇಲ್ಮನೆ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿದೇಶ ಪ್ರವಾಸದಲ್ಲಿದ್ದು, ಅ.19ರ ನಂತರ ರಾಜ್ಯಕ್ಕೆ ಮರಳಲಿದ್ದಾರೆ. ವಿದೇಶ ಪ್ರವಾಸಕ್ಕೆ ತೆರಳುವ ಮುನ್ನ ಸರ್ಕಾರದೊಂದಿಗೆ ಅಧಿವೇಶನದ ಬಗ್ಗೆ ಚರ್ಚೆಗಳು ನಡೆದಿದ್ದು, ಎಷ್ಟು ದಿನ, ಎಲ್ಲಿ ಕಲಾಪ ನಡೆಸಬೇಕೆಂಬ ಮೊದಲ ಹಂತದ ಚರ್ಚೆ ನಡೆದಿತ್ತು.

ನವೆಂಬರ್‌ ಕೊನೇ ವಾರದಲ್ಲಿ ಅಧಿವೇಶನ ಆರಂಭಿಸಿ, ಬೆಂಗಳೂರಿನಲ್ಲಿ 10 ದಿನ ಹಾಗೂ ಬೆಳಗಾವಿಯ ಸುವರ್ಣಸೌಧದಲ್ಲಿ 10 ದಿನ ಕಲಾಪ ನಡೆಸುವ ಬಗ್ಗೆ ಚಿಂತನೆ ನಡೆದಿದ್ದು, ಎರಡು ಕಡೆ ನಡೆಸಬೇಕೇ ಬೇಡವೇ ಎಂಬ ಚರ್ಚೆಗಳಿವೆ. ವರ್ಷದಲ್ಲಿ ಕನಿಷ್ಠ 60 ದಿನ ಕಲಾಪ ನಡೆಸಬೇಕೆನ್ನುವ ಆಶಯದಲ್ಲಿ ಸರ್ಕಾರವಿದೆಯಾದರೂ ಬೆಂಗಳೂರು ಹಾಗೂ ಬೆಳಗಾವಿ ಎರಡೂ ಕಡೆ 20 ದಿನ ನಡೆಸುವುದು ಕಷ್ಟ ಎಂಬುದನ್ನು ಅಧಿಕಾರಿಗಳು ತಿಳಿಸಿದ್ದಾರೆ.

ಎರಡೂ ಕಡೆ ಕಲಾಪ ನಡೆಸುವುದರಿಂದ ಖರ್ಚು ಹೆಚ್ಚಾಗಲಿದೆ. ಇಡೀ ವಿಧಾನಮಂಡಲ ಹಾಗೂ ಸರ್ಕಾರಿ ವ್ಯವಸ್ಥೆಯನ್ನು ಎರಡೂ ಕಡೆ ಬಳಸಿಕೊಳ್ಳುವುದು, ಸ್ಥಳಾಂತರಿಸುವುದು ಸುಲಭವಿಲ್ಲ. ಹೀಗಾಗಿ ಎಲ್ಲಾದರೂ ಒಂದು ಕಡೆ ಮಾಡುವುದು ಸೂಕ್ತ ಮತ್ತು 10-12 ದಿನಗಳಿಗೆ ಇಳಿಸಿದರೆ ಉತ್ತಮ ಎಂಬ ಸಲಹೆಗಳನ್ನು ನೀಡಿದ್ದಾರೆ.

ನವೆಂಬರ್‌ ಕೊನೆಯ ವಾರದಿಂದ ಡಿಸೆಂಬರ್‌ ಮೊದಲ ವಾರದವರೆಗೆ ಚಳಿಗಾಲದ ಅಧಿವೇಶನ ನಡೆದರೆ, ಮತ್ತೆ ಜನವರಿ ತಿಂಗಳಲ್ಲಿ ಜಂಟಿ ಅಧಿವೇಶನ, ಫೆಬ್ರವರಿಯಲ್ಲಿ ಬಜೆಟ್‌ ಅಧಿವೇಶನ ನಡೆಸಬೇಕಾಗುತ್ತದೆ. ಆನಂತರ ಲೋಕಸಭೆ ಚುನಾವಣಾ ತಯಾರಿ ನಡೆಸಬೇಕಿದೆ. ವರ್ಷದ ಕೊನೆಯ ಕಲಾಪವು ನವೆಂಬರ್‌-ಡಿಸೆಂಬರ್‌ನಲ್ಲಿ ನಡೆಯುವುದರಿಂದ ಹೆಚ್ಚು ದಿನ ನಡೆಸಬೇಕೆಂಬ ಚಿಂತನೆ ಸರ್ಕಾರದಲ್ಲಿದೆ. ಎರಡೂ ಕಡೆ ಸದನ ನಡೆದರೆ ಅಷ್ಟು ಸುದೀರ್ಘ‌ ದಿನಗಳು ಚರ್ಚಿಸಬಹುದಾದ ವಿಷಯಗಳ ಪಟ್ಟಿಯನ್ನೂ ನೀಡುವಂತೆ ಅಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ.
ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಮತ್ತೂಮ್ಮೆ ಚರ್ಚಿಸಿ, ಎಲ್ಲಿ, ಎಷ್ಟು ದಿನ ಕಲಾಪ ನಡೆಸಬೇಕೆಂಬುದು ತೀರ್ಮಾನ ಆಗಬಹುದು. ಇಲ್ಲದಿದ್ದರೆ, ಸ್ಪೀಕರ್‌, ಸಭಾಪತಿ ವಿದೇಶ ಪ್ರವಾಸದಿಂದ ಮರಳಿದ ನಂತರ ಮತ್ತೂಮ್ಮೆ ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಬಹುದು ಎಂದು ಮೂಲಗಳು ಹೇಳಿವೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next