Advertisement

ಮತಾಂತರ ನಿಷೇಧ ಗದ್ದಲ; ಅಧಿವೇಶನದಲ್ಲೇ ಕಾಯ್ದೆ ಮಂಡನೆಗೆ ಬಿಜೆಪಿಯಲ್ಲಿ ಹೆಚ್ಚಿದ ಒತ್ತಡ

01:39 AM Dec 12, 2021 | Team Udayavani |

ಬೆಂಗಳೂರು: ಬೆಳಗಾವಿ ಅಧಿವೇಶನಕ್ಕೆ ಒಂದು ದಿನ ಬಾಕಿ ಇರುವಂತೆಯೇ ಉದ್ದೇಶಿತ ಮತಾಂತರ ನಿಷೇಧ ಮಸೂದೆ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್‌ ನಡುವೆ ಪರ-ವಿರೋಧದ ಗದ್ದಲ ಎದ್ದಿದೆ.

Advertisement

ಸೋಮವಾರ ಆರಂಭವಾಗಲಿರುವ ಅಧಿವೇಶನದಲ್ಲೇ ಮಸೂದೆ ಮಂಡಿಸಿ, ಒಪ್ಪಿಗೆ ಪಡೆಯಬೇಕು ಎಂಬುದು ಬಿಜೆಪಿ ಶಾಸಕರ ಒತ್ತಾಯ. ಹೀಗಾಗಿ ಸರಕಾರ ಮತಾಂತರ ನಿಷೇಧ ಮಸೂದೆ ಪರಿಶೀಲನೆಗಾಗಿ ರಚಿಸಿರುವ ಸಮಿತಿಯ ಒಪ್ಪಿಗೆ ಪಡೆದು, ಇದೇ ಅಧಿವೇಶನದಲ್ಲೇ ಮಂಡಿಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಮಸೂದೆಗೆ ಎಲ್ಲ ರೀತಿಯಲ್ಲೂ ವಿರೋಧ ವ್ಯಕ್ತಪಡಿಸುವುದಾಗಿ ಕಾಂಗ್ರೆಸ್‌ ಸ್ಪಷ್ಟವಾಗಿ ಹೇಳಿದೆ.

ಮುಂದಿನ ವಾರ ಕಾನೂನು ಸಚಿವ ಮಾಧುಸ್ವಾಮಿ ನೇತೃತ್ವದ ಪರಿಶೀಲನ ಸಮಿತಿ ಸಭೆ ನಡೆಯಲಿದೆ. ಇಲ್ಲಿ ಒಪ್ಪಿಗೆ ಸಿಕ್ಕ ಕೂಡಲೇ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಸದನದಲ್ಲಿ ಮಂಡಿಸಲು ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.

ಒಂದು ವೇಳೆ ಸಂಪುಟ ಸಭೆಗೆ ಅವಕಾಶ ದೊರೆಯದಿದ್ದರೆ, ಅಧಿವೇಶನದಲ್ಲಿ ಮಂಡಿಸಿ ಒಪ್ಪಿಗೆ ಪಡೆದು ಬಳಿಕ ಘಟನೋತ್ತರ ಅನುಮೋದನೆ ಪಡೆಯುವ ಬಗ್ಗೆಯೂ ಚಿಂತನೆ ಇದೆ ಎಂಬ ಮಾತುಗಳು ಕೇಳಿಬಂದಿವೆ.

ಈ ಮಧ್ಯೆ ವಿಧಾನಪರಿಷತ್‌ನ ಬಿಜೆಪಿ ಸದಸ್ಯ ತುಳಸೀ ಮುನಿರಾಜುಗೌಡ ಅವರು ಮತಾಂತರ ನಿಷೇಧಕ್ಕಾಗಿ ಖಾಸಗಿಯಾಗಿ ಮಸೂದೆ ಮಂಡಿಸಲು ತೀರ್ಮಾನಿಸಿದ್ದಾರೆ.

Advertisement

ಇದನ್ನೂ ಓದಿ:ಅಫ್ಘಾನಿಸ್ಥಾನಕ್ಕೆ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿದ ಭಾರತ

ಕಾಂಗ್ರೆಸ್‌ ವಿರೋಧ
ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ತರಲು ಹೊರಟಿರುವ ಮತಾಂತರ ನಿಷೇಧ ಮಸೂದೆಯನ್ನು ಕಾಂಗ್ರೆಸ್‌ ವಿರೋಧಿಸಿದೆ.

ಕರಡು ಸಿದ್ಧ
ಮತಾಂತರ ನಿಷೇಧ ಮಸೂದೆ ಮಂಡನೆವಿಚಾರದಲ್ಲಿ ವಿವಿಧ ರಾಜ್ಯಗಳಲ್ಲಿ ಜಾರಿ ಯಲ್ಲಿರುವ ಮತಾಂತರ ನಿಷೇಧ ಕಾಯ್ದೆ ಗಳನ್ನು ಗೃಹ ಇಲಾಖೆ ಅಧ್ಯಯನ ನಡೆಸಿ ಕರಡು ಸಿದ್ಧಪಡಿಸಿದೆ.

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅಧ್ಯಕ್ಷತೆಯ ಪರಿಶೀಲನ ಸಮಿತಿಯಲ್ಲಿ ಗೃಹ ಸಚಿವರು, ಗೃಹ ಇಲಾಖೆ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಇರಲಿದ್ದು, ಈ ಸಮಿತಿ ಮುಂದಿನ ವಾರದಲ್ಲಿ ಸಭೆ ನಡೆಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.

ಆತುರ ಬೇಡ
ಮತಾಂತರ ನಿಷೇಧ ಮಸೂದೆ ಮಂಡನೆ ಪರಿಶೀಲನ ಸಮಿತಿ ನಿರ್ಧಾರದ ಮೇಲೆ ನಿಂತಿದೆ. ಸೂಕ್ಷ್ಮವಾಗಿರುವ ಈ ಮಸೂದೆಯನ್ನು ತರಾತುರಿಯಲ್ಲಿ ತರಲು ಸಚಿವ ಜೆ.ಸಿ ಮಾಧುಸ್ವಾಮಿ ಹಿಂದೇಟು ಹಾಕುತ್ತಿದ್ದಾರೆ. ಉ.ಪ್ರದೇಶ, ಮಧ್ಯಪ್ರದೇಶ ಸರಕಾರಗಳು ಜಾರಿಗೆ ತಂದಿರುವ ಮತಾಂತರ ನಿಷೇಧ ಕಾಯ್ದೆಯನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಈ ಕಾರಣಕ್ಕೆ ತರಾತುರಿಯಲ್ಲಿ ಮಸೂದೆ ಜಾರಿ ಬೇಡ ಎಂಬ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಕ್ರೈಸ್ತರಿಂದ ಆಕ್ಷೇಪ
ಬೆಂಗಳೂರಿನಲ್ಲಿ ರೂನಾಲ್ಡ್‌ ಕೊಲಾಸೊ ನೇತೃತ್ವದಲ್ಲಿ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಕ್ರೈಸ್ತ ಮುಖಂಡರ ನಿಯೋಗವು ಮತಾಂತರ ನಿಷೇಧ ಕಾಯ್ದೆ ಅಗತ್ಯವಿಲ್ಲ ಎಂದು ಮನವಿ ಮಾಡಿದೆ. ಮತಾಂತರ ನಿಷೇಧ ಕಾಯ್ದೆ ಬೇರೆ ರೀತಿಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಯಾರೂ ಬಲವಂತ ಅಥವಾ ಆಮಿಷವೊಡ್ಡಿ ಮತಾಂತರ ಮಾಡುತ್ತಿಲ್ಲ ಎಂದು ಹೇಳಿದೆ.

ಕರಡಿನಲ್ಲಿ ಏನಿದೆ?
ಗೃಹ ಇಲಾಖೆ ಸಿದ್ಧಪಡಿಸಿರುವ ಮತಾಂತರ ನಿಷೇಧ ಮಸೂದೆ ಯಲ್ಲಿ ಮದುವೆ ಹೆಸರಿನಲ್ಲಿ ಮತಾಂತರ, ದಲಿತ ಮತ್ತು ಹಿಂದುಳಿದ ವರ್ಗದವರಿಗೆ ಆಮಿಷ ಒಡ್ಡಿ ಮತಾಂತರಕ್ಕೆ ತಡೆ, ಮತಾಂತರಕ್ಕೆ ಕನಿಷ್ಠ 1 ವರ್ಷದಿಂದ 10 ವರ್ಷದ ವರೆಗೆ ಶಿಕ್ಷೆ ನೀಡುವ ಬಗ್ಗೆ ಪ್ರಸ್ತಾವ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮತಾಂತರ ನಿಷೇಧ ಮಸೂದೆಯ ಕರಡು ಸಿದ್ಧವಾಗಿದ್ದು, ಇದೇ ಅಧಿವೇಶನದಲ್ಲಿ ಮಂಡಿಸಲು ಸಿದ್ಧತೆ ಮಾಡಲಾಗಿದೆ. ಈಗ ಜಾರಿಯಾಗಿರುವ ಕಾಯ್ದೆಗಳ ವಿರುದ್ಧ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿರುವುದನ್ನು ಪರಿಶೀಲನೆ ಮಾಡಲಾಗುತ್ತಿದೆ.
– ಆರಗ ಜ್ಞಾನೇಂದ್ರ, ಗೃಹ ಸಚಿವ

ಚುನಾವಣೆ ಸಮೀಪಿಸುತ್ತಿರುವುದರಿಂದ ಬಿಜೆಪಿ ಒಂದೊಂದೇ ಸಮುದಾಯವನ್ನು ಗುರಿ ಮಾಡುತ್ತಿದೆ. ಮತಾಂತರ ನಿಷೇಧ ಮಸೂದೆ ವಿಚಾರ ಕೇವಲ ಇಲ್ಲಿನ ವಿಚಾರವಲ್ಲ, ಇಡೀ ವಿಶ್ವವೇ ಗಮನಿಸುವ ವಿಚಾರ.-ಡಿ.ಕೆ.ಶಿವಕುಮಾರ್‌,ಕೆಪಿಸಿಸಿ ಅಧ್ಯಕ್ಷ

ಬಲವಂತದ ಮತ್ತು ಆಮಿಷದ ಮತಾಂತರವನ್ನು ಕಟುವಾಗಿ ಖಂಡಿಸುತ್ತೇವೆ. ಅದೇ ರೀತಿ ಮತಾಂತರ ನಿಷೇಧ ಮಸೂದೆಯನ್ನು ಬಲವಾಗಿ ವಿರೋಧಿಸುತ್ತೇವೆ. ಯಾವುದೇ ಧರ್ಮವನ್ನು ಬಲವಂತ ಅಥವಾ ಆಮಿಷವಿಲ್ಲದೆ ನಂಬುವ, ಅಳವಡಿಸಿ ಕೊಳ್ಳುವ, ಆಚರಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯವು ಪ್ರತಿಯೊಬ್ಬ ನಾಗರಿಕನ ಮೂಲ ಮತ್ತು ಸಾಂವಿಧಾನಿಕ ಹಕ್ಕು.
-ಸೈಯದ್‌ ಸಾದತುಲ್ಲಾ ಹುಸೇನಿ, ಜಮಾತೆ ಇಸ್ಲಾಮಿ ಹಿಂದ್‌ ರಾಷ್ಟ್ರೀಯ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next