Advertisement

ಮಹನೀಯರ ಜೀವನವೇ ಸಂದೇಶ

05:26 PM Feb 16, 2020 | Naveen |

ಬೆಳಗಾವಿ: ಮಹನೀಯರ ಜೀವನವೇ ಒಂದು ಸಂದೇಶ. ಅಂಥವರನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೇ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕಿದೆ ಎಂದು ಕೆ.ಎಸ್‌.ಎಫ್‌.ಸಿ ನಿವೃತ್ತ ಪ್ರಧಾನ ವ್ಯವಸ್ಥಾಪಕ ಪಿ.ಆರ್‌. ಜಾಧವ ಹೇಳಿದರು.

Advertisement

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಶನಿವಾರ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಏರ್ಪಡಿಸಲಾಗಿದ್ದ ಸಂತ ಸೇವಾಲಾಲ ಜಯಂತಿ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಸಮಾಜದ ಮಹನೀಯರು ಮನುಕುಲದ ಉದ್ಧಾರಕ್ಕಾಗಿ ಒಳ್ಳೆಯ ಸಂದೇಶಗಳನ್ನು ಕೊಟ್ಟು ಹೋಗಿದ್ದಾರೆ. ಅವರ ಸಂದೇಶ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ಸೇವಾಲಾಲರು ಕೇವಲ ಬಂಜಾರ ಸಮುದಾಯಕ್ಕೆ ಮಾತ್ರ ಕೆಲಸ ಮಾಡಲಿಲ್ಲ. ಬದಲಾಗಿ ಎಲ್ಲ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಸಮಾಜಕ್ಕೆ ಅವರ ಕೊಡುಗೆ ಅಪಾರ. ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಆಧುನಿಕ ಯುಗದಲ್ಲಿ ಕಲಿಯಬೇಕಾದದ್ದು ತುಂಬಾ ಇದೆ. ಆದ್ದರಿಂದ ಶಿಸ್ತು ರೂಢಿಸಿಕೊಂಡರೆ ಜಗತ್ತನ್ನು ಗೆಲ್ಲಲು ಸಾಧ್ಯ ಎಂದು ಹೇಳಿದರು.

ಸಮಾಜದ ಮುಖಂಡರಾದ ಎಂ. ಟಿ.ರಾಠೊಡ ಮಾತನಾಡಿ, ಸಮಾಜದ ಕಟ್ಟಳೆಗಳನ್ನು ಮುರಿಯದೇ ಸೇವಾಲಾಲರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.
ಹೇಮಂತ ಲಮಾಣಿ ಮತ್ತು ತಂಡದವರು ವಚನ ಗಾಯನ ಕಾರ್ಯಕ್ರಮ ನಡಸಿಕೊಟ್ಟರು. ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಗೋಪಾಲ ಲಮಾಣಿ, ಎಂ.ಪಿ.ರಾಠೊಡ, ಆರ್‌ .ಟಿ. ರಾಠೊಡ, ಎಸ್‌. ಪಿ.ರಾಠೊಡ, ಶೈಲಜ ಚವಾಣ, ಕೆ.ಸಿ. ಸತೀಶ್‌, ಮಾಜಿ ನಗರ ಸೇವಕಿ ಜಯಶ್ರೀ ಮಾಳಗಿ, ದಲಿತ ಮುಖಂಡ ಮಲ್ಲೇಶ ಚೌಗಲೆ ಉಪಸ್ಥಿತರಿದ್ದರು.

ಲಂಬಾಣಿ ವೇಷದಲ್ಲಿ ಸಚಿವರು: ಸೇವಾಲಾಲ ಜಯಂತಿಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಪಾರಂಪರಿಕ ಲಂಬಾಣಿ ವೇಷದಲ್ಲಿ ಬಂದು ಎಲ್ಲರ ಗಮನಸೆಳೆದರು. ಜಾನಪದ ಕಲಾವಿದರ ಜೊತೆಗೆ ಸೇವಾಲಾಲರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಸಚಿವರು, ಲಂಬಾಣಿ ಸಮುದಾಯದ ವಿಶೇಷ ಉಡುಪು ಧರಿಸಿ ಜಗ್ಗಲಗಿ ಬಾರಿಸುವ ಮೂಲಕ ಮೆರವಣಿಗೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next