ಸುತ್ತಲಿನ ಪ್ರದೇಶದ ಅಂತರ್ಜಲ ಹೆಚ್ಚಿಸುವದರ ಜೊತೆಗೆ ಜನ ಮತ್ತು ಜಾನುವಾರುಗಳ ದಾಹ ತೀರಿಸಬೇಕು. ಈ ರೀತಿಯ ಜಲಜಾಗೃತಿ ಎಷ್ಟು ಮಾಡಿದರೂ ಕಡಿಮೆಯೇ. ಆದರೆ ಇದ್ದ ಸಂಪನ್ಮೂಲಗಳನ್ನು ಬಳಸಿಕೊಂಡು ಸುಂದರ ಕೆರೆ ನಿರ್ಮಿಸಿ ನೀರು
ಸಂಗ್ರಹ ಮಾಡುವದು ನಿಜಕ್ಕೂ ಹೆಮ್ಮೆ ಪಡುವ ಸಾಧನೆಯೇ ಎನ್ನಬಹುದು.
Advertisement
ಅಂತಹ ಒಂದು ಹೆಮ್ಮೆಯ ಕೆಲಸ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿಯಡಿಅಮೃತ ಸರೋವರ ಯೋಜನೆಯ ಹೆಸರಿನಲ್ಲಿ ಹೆಮ್ಮೆಪಡುವ ಈ ಮಾದರಿ ಕಾರ್ಯವಾಗಿದೆ. ಇಂತಹ ಒಂದು ಒಳ್ಳೆಯ ಮಾದರಿ ಕೆಲಸಕ್ಕೆ ಪರಿಸರವಾದಿಗಳು ಮತ್ತು ಗ್ರಾಮೀಣ ಪ್ರದೇಶದ ಜನರು ಭೇಷ್ ಎಂದಿದ್ದಾರೆ. ಅಂತರ್ಜಲ ಮೂಲಗಳನ್ನು ಅಭಿವೃದ್ಧಿ
ಪಡಿಸುವುದು, ಮುಂಬರುವ ದಿನಗಳಲ್ಲಿ ನೀರಿಗಾಗಿ ನಡೆಸುವ ಪೈಪೋಟಿಯನ್ನು ತಪ್ಪಿಸುವುದು, ಜಲ ಸಂರಕ್ಷಣೆಯಿಂದ ಕೃಷಿ
ಚಟುವಟಿಕೆ, ಅರಣ್ಯೀಕರಣ ಅಭಿವೃದ್ಧಿ ಹಾಗೂ ಪರಿಸರ ಸಮತೋಲನವನ್ನು ರಕ್ಷಿಸಿ ಗ್ರಾಮೀಣ ಜನರ ಆರೋಗ್ಯ
ಸುಧಾರಿಸುವುದು, ಉದ್ಯೋಗಾವಕಾಶವನ್ನು ಕಲ್ಪಿಸುವುದು, ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡುವುದು, ಗ್ರಾಮೀಣ ಸಮುದಾಯದಲ್ಲಿ ಸಮರ್ಪಕ ನೀರಿನ ಸಂರಕ್ಷಣೆ, ಸದ್ಬಳಕೆ ಕುರಿತು ಅರಿವು ಮೂಡಿಸುವುದು ಈ ಅಮೃತ ಸರೋವರ ಯೋಜನೆಯ ಆಶಯ.
ಯೋಜನೆಯಡಿ ಕೆರೆಗೆ ನೀರು ಹರಿದು ಬರುವ ಕಾಲುವೆಗಳ ಪುನಶ್ಚೇತನ, ಕೆರೆಯ ಆವರಣದಲ್ಲಿ ಬೆಳೆದಿರುವ ಗಿಡಗಂಟೆಗಳನ್ನು
ತೆರವು ಮಾಡುವುದು, ಕೆರೆ ಕಟ್ಟೆಯ ದುರಸ್ತಿ, ಕೆರೆ ಅಂಚಿನ ಖಾಲಿ ಪ್ರದೇಶದಲ್ಲಿ ಸಸಿಗಳನ್ನು ಬೆಳೆಸುವುದು, ಸಾಮಾಜಿಕ ಹೊಣೆಗಾರಿಕೆ ಕಾರ್ಯನೀತಿ ನಿಧಿಯಲ್ಲಿ ಕೆರೆಯ ಅಂಗಳವನ್ನು ಸುಂದರೀಕರಣಗೊಳಿಸುವುದು ಎಲ್ಲಕ್ಕಿಂತ ಮುಖ್ಯವಾಗಿ ಕೆರೆಯ ಬಳಿ ಧ್ವಜಾರೋಹಣ ಕಟ್ಟೆಯನ್ನು ನಿರ್ಮಾಣ ಮಾಡಲಾಗಿದ್ದು ಆ.15 ಮತ್ತು ಜ.26ರಂದು ಗ್ರಾಮದ ಹಿರಿಯರಿಂದ ಧ್ವಜಾರೋಹಣ ಮಾಡಲಾಗುತ್ತಿದೆ. ಈ ಅಮೃತ ಸರೋವರದ ವಿಶೇಷ ಎಂದರೆ ನರೇಗಾ ಕಾರ್ಮಿಕರು ದಿನವಿಡೀ ಶ್ರಮವಹಿಸಿ ಕೆರೆಗಳ ನಿರ್ಮಾಣ ಮಾಡಿದ್ದಾರೆ. ಕಾರ್ಮಿಕರು ನಿರ್ಮಾಣ ಮಾಡಿರುವ ಕೆರೆಗಳಲ್ಲಿ ನೀರಿನ ರೂಪದಲ್ಲಿ ಅಮೃತ ಹರಿದುಬಂದು ಅಮೃತ ಸರೋವರವಾಗಿ ಬದಲಾಗಿವೆ. ಜಿಪಂ, ತಾಪಂ, ಗ್ರಾಪಂ ಅಧಿಕಾರಿಗಳ ನಿರಂತರ ಜಾಗೃತಿ, ಇದರಿಂದ ಆಗುವ ಪ್ರಯೋಜನದ ಬಗ್ಗೆ ಮಾಡಿದ ಮನವರಿಕೆ ಜಿಲ್ಲೆಯಲ್ಲಿ 140 ಕೆರೆಗಳ ನಿರ್ಮಾಣ ಮತ್ತು ಪುನರುಜ್ಜೀವನಕ್ಕೆ ಕಾರಣವಾಗಿದೆ. ಅಮೃತ ಸರೋವರ ಯೋಜನೆಯಡಿ ಜಿಲ್ಲೆಗೆ 283 ಕೆರೆಗಳ ನಿರ್ಮಾಣ ಮತ್ತು ಅಭಿವೃದ್ಧಿಯ ಗುರಿ ನೀಡಲಾಗಿದ್ದು ಇದುವರೆಗೆ 140 ಕೆರೆಗಳ ಕಾಮಗಾರಿ ಪೂರ್ಣಗೊಂಡಿದೆ. ಇದರಲ್ಲಿ 48 ಹೊಸ ಕೆರೆಗಳು ಮತ್ತು ಕೃಷಿ ಇಲಾಖೆ ವ್ಯಾಪ್ತಿಯ 92 ಕೆರೆಗಳು ಸೇರಿದ್ದು ಇದರಲ್ಲಿ ನೀರು ಹರಿದು ಬರುತ್ತಿದ್ದಂತೆ ಕೆರೆಯ ಸುತ್ತಲಿನ ಪರಿಸರವೇ ಬದಲಾಗಿದೆ.
Related Articles
ಚಿಕ್ಕೋಡಿ ತಾಲೂಕಿನಲ್ಲಿ 84 ಕೆರೆಗಳ ಪೈಕಿ 65, ಅಥಣಿಯಲ್ಲಿ 19 ಕೆರೆಗಳಲ್ಲಿ 11, ರಾಮದುರ್ಗದ 26 ಕೆರೆಗಳ ಪೈಕಿ 17 ಮತ್ತು ಬೆಳಗಾವಿ ತಾಲೂಕಿನಲ್ಲಿ 29 ಕೆರಗಳ ಪೈಕಿ 10 ಕೆರೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 127 ಕೆರೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಈ ಕೆರೆಗಳ ನಿರ್ಮಾಣದ ನಂತರ ಸುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡಿಬಂದಿದೆ.
Advertisement
ಜಿಲ್ಲೆಯಲ್ಲಿ ಅಮೃತ ಸರೋವರ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ನಿಗದಿತ ಗುರಿಯಲ್ಲಿಈಗಾಗಲೇ ಶೇ.50ರಷ್ಟು ಕೆರೆಗಳನ್ನು ನಿರ್ಮಾಣ ಮತ್ತು ಪುನರುಜ್ಜೀವನಗೊಳಿಸಲಾಗಿದೆ.
ಹರ್ಷಲ್ ಭೋಯರ್,
ಜಿಪಂ ಸಿಇಒ, ಬೆಳಗಾವಿ ಕೇಶವ ಆದಿ