ಬೆಳಗಾವಿ: ಕೋವಿಡ್ ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕ ಹೊಂದಿ ಸದ್ಯಕ್ಕೆ ಕ್ವಾರಂಟೈನ್‌ನಲ್ಲಿ ಇರುವ ಯಾವುದೇ ವ್ಯಕ್ತಿಯನ್ನು ಎಂಥದೇ ಸಂದರ್ಭದಲ್ಲೂ ಇನ್ನೊಬ್ಬರ ಜತೆ ಬೆರೆಯದಂತೆ ತೀವ್ರ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಎಸ್.ಬಿ. ಬೊಮ್ಮನಹಳ್ಳಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಜತೆ ಶುಕ್ರವಾರ ನಡೆದ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸೋಂಕಿತ ವ್ಯಕ್ತಿಯೊಬ್ಬರ ಜತೆ ಪ್ರಾಥಮಿಕ ಸಂಪರ್ಕ ಹೊಂದಿರುವ ಒಂದೇ ಕುಟುಂಬದ ಮೂವರು ಸದಸ್ಯರಲ್ಲೂ ಸೋಂಕು ಕಂಡುಬಂದಿರುವುದರಿಂದ ಈ ವಿಷಯದಲ್ಲಿ ಯಾವುದೇ ಕಾರಣಕ್ಕೆ ನಿರ್ಲಕ್ಷ್ಯ ತೋರಿಸಬಾರದು ಎಂದರು. ಈಗಾಗಲೇ ಬಿಡುಗಡೆಯಾಗಿರುವ ಪಡಿತರ ಆಹಾರ ಧಾನ್ಯವನ್ನು ಶನಿವಾರ ಸಂಜೆಯೊಳಗೆ ಸಂಪೂರ್ಣವಾಗಿ ವಿತರಿಸಬೇಕು. ಇದಲ್ಲದೇ ತಾಲ್ಲೂಕು ಮತ್ತಿತರ ಕೇಂದ್ರಗಳಲ್ಲಿ ಜನಸಂದಣಿ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಇನ್ನಷ್ಟು ತಿಳಿವಳಿಕೆ ಮೂಡಿಸಬೇಕು ಎಂದು ಸೂಚನೆ ನೀಡಿದರು.
ಆರೋಗ್ಯ ತಪಾಸಣೆ: ಈಗಾಗಲೇ ಘೋಷಿಸಲಾಗಿರುವ ಕಂಟೈನ್ಮೆಂಟ್ ಝೋನ್‌ಗಳಲ್ಲಿ ಎಷ್ಟು ಮನೆಗಳಿವೆ ಎಂಬುದನ್ನು ಪರಿಶೀಲಿಸಿ ಅವುಗಳ ಸಂಖ್ಯೆಗೆ ಅನುಗುಣವಾಗಿ ತಂಡಗಳನ್ನು ರಚಿಸಿ ಪ್ರತಿ ಮನೆ-ಮನೆಗಳಿಗೆ ಭೇಟಿ ನೀಡಿ ಸೋಂಕು ಲಕ್ಷಣಗಳ ಬಗ್ಗೆ ನಿರಂತರ ಪರಿಶೀಲಿಸಿ ವರದಿ ನೀಡಬೇಕು ಎಂದು ಜಿಪಂ ಸಿಇಒ ಡಾ| ರಾಜೇಂದ್ರ ಕೆ.ವಿ. ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆರೋಗ್ಯ ಹಾಗೂ ಮತ್ತಿತರ ಇಲಾಖೆ ಸದಸ್ಯರನ್ನು ಒಳಗೊಂಡ ತಂಡವು ಪ್ರತಿ ಮನೆಯಲ್ಲಿ ಇರುವವರ ಸಮಗ್ರ ಮಾಹಿತಿ ಕಲೆ ಹಾಕಬೇಕು. ಜ್ವರ, ಡಯಾಬಿಟಿಸ್, ರಕ್ತದೊತ್ತಡ, ಉಸಿರಾಟದ ತೊಂದರೆ ಸೇರಿದಂತೆ ಯಾವ ಬಗೆಯ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ತಕ್ಷಣವೇ ಜಿಲ್ಲಾಮಟ್ಟದ ತಂಡಕ್ಕೆ ಮಾಹಿತಿ ಸಲ್ಲಿಸಬೇಕು ಎಂದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಸ್.ವಿ.ಮುನ್ಯಾಳ,
ಸರ್ವೇಕ್ಷಣಾಧಿಕಾರಿ ಡಾ| ತುಕ್ಕಾರ ಉಪಸ್ಥಿತರಿದ್ದರು.