ಬೆಳಗಾವಿ: ಮಹಾನಗರಪಾಲಿಕೆ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಎಲ್ಲರೂ ಪಾಠ ಕಲಿಸಬೇಕಾದ ಅಗತ್ಯವಿದೆ. ಒಂದು ವೇಳೆ ಅತಂತ್ರ ಸ್ಥಿತಿ ನಿರ್ಮಾಣವಾಗಿ ಯಾರಿಗೂ ಬಹುಮತ ಸಿಗದಿದ್ದರೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಒಂದಾಗಬೇಕು. ಈ ವೇಳೆ ಯಾವುದೇ ಕಾರಣಕ್ಕೂ ನಾಡದ್ರೋಹಿ ಎಂಇಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಕನ್ನಡ ಸಂಘಟನೆಗಳ ಮುಖಂಡರು ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿ, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ಅಸ್ಮಿತೆಗೆ ಧಕ್ಕೆ ತರುವಂಥ ಕೆಲಸ ರಾಜಕೀಯ ಪಕ್ಷಗಳು ಮಾಡಬಾರದು. ಪಕ್ಷದ ಚಿಹ್ನೆ ಮೇಲೆ ಚುನಾವಣೆ ನಡೆಯುತ್ತಿರುವುದರಿಂದ ಎಲ್ಲರೂ ಎಂಇಎಸ್‌ಗೆ ತಕ್ಕ ಪಾಠ ಕಲಿಸಬೇಕಾಗಿದೆ. ನಾಡು-ನುಡಿಗೆ ಧಕ್ಕೆ ಬರುವಂತ ಕೆಲಸ ಆಗಬಾರದು. ಯಾವುದೇ ರಾಜಕೀಯ ಪಕ್ಷಗಳು ಬಹುಮತ ಪಡೆದುಕೊಂಡರೂ, ಯಾರಿಗೂ ಬಹುಮತ ಸಿಗದಿದ್ದರೂ ಎಂಇಎಸ್‌ಗೆ ಕೈ ಜೋಡಿಸಬಾರದು. ಬೆಳಗಾವಿಯಲ್ಲಿ ಮಾತ್ರ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬೆಂಬಲ ನೀಡಬಾರದು. ಅತಂತ್ರ ಸ್ಥಿತಿ ನಿರ್ಮಾಣವಾದರೆ ಕೂಡಲೇ ಎಲ್ಲರೂ ಒಂದಾಗಿ ಎಂಇಎಸ್ ವಿರುದ್ಧ ಬೆಳಗಾವಿಯಲ್ಲಿ ಗದ್ದುಗೆ ಹಿಡಿಯಬೇಕು ಎಂದು ಒತ್ತಾಯಿಸಿದರು.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಇದೇ ಮೊದಲ ಸಲ ಪಕ್ಷದ ಚಿಹ್ನೆ ಮೇಲೆ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಈ ಹಿಂದೆ 2-3 ಸಲ ಇಂಥ ಪ್ರಯತ್ನ ನಡೆದಿದ್ದರೂ ಯಶಸ್ವಿ ಆಗಿರಲಿಲ್ಲ. ರಾಜಕೀಯ ಪಕ್ಷಗಳ ಟಿಕೆಟ್ ಪಡೆಯಲು ಮರಾಠಿ ಭಾಷಿಕರು ಹಿಂದೇಟು ಹಾಕುತ್ತಿದ್ದರು. ಕೇವಲ ಎಂಇಎಸ್‌ನಿಂದಲೇ ಸ್ಪರ್ಧಿಸುತ್ತಿದ್ದರು. ಈಗ ಹೆಚ್ಚಿನ ಸಂಖ್ಯೆಯಲ್ಲಿ ಮರಾಠಿ ಭಾಷಿಕರೂ ಬಿಜೆಪಿ-ಕಾಂಗ್ರೆಸ್ ಟಿಕೆಟ್ ಪಡೆದುಕೊಂಡಿದ್ದಾರೆ. ಈ ಬೆಳವಣಿಗೆಯಿಂದಾಗಿ ಎಂಇಎಸ್ ಅವಸಾನದ ಅಂಚಿನಲ್ಲಿದೆ. ಹಂತ ಹಂತವಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ತಾವು ಬೆಂಬಲಿಸುತ್ತಿರುವ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲೂ ಎಂಇಎಸ್‌ನವರು ತಡಕಾಡುತ್ತಿದ್ದಾರೆ. ಅಳಿವಿನ ಅಂಚಿನಲ್ಲಿರುವ ಎಂಇಎಸ್ ಒದ್ದಾಡುತ್ತಿದೆ ಎಂದು ಕಿಡಿಕಾರಿದರು.
ನಾಡ ವಿರೋಧಿಗಳನ್ನು ಅಧಿಕಾರದಿಂದ ದೂರವಿಡುವುದಕ್ಕೆ ಕಾಂಗ್ರೆಸ್-ಬಿಜೆಪಿ ಒಂದಾಗಬೇಕು. ಈ ಪಕ್ಷಗಳು ಸೇರಿ ಆಡಳಿತ ನಡೆಸುವುದಕ್ಕೂ ಮುಂದಾಗಬೇಕು. ಎಂಇಎಸ್‌ನೊಂದಿಗೆ ಯಾವುದಾದರೂ ರಾಜಕೀಯ ಪಕ್ಷಗಳು ಕೈಜೋಡಿಸಿದರೆ ಮುಂದೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಸ್ಥಳೀಯ ನಾಯಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ಏನಾದರೂ ಕನ್ನಡ ದ್ರೋಹ ಕೆಲಸಕ್ಕೆ ಕೈ ಹಾಕಿದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸೇರಿದಂತೆ ರಾಜ್ಯ ಮುಖಂಡರನ್ನು ಭೇಟಿಯಾಗಿ ವಿಷಯ ತಿಳಿಸಲಾಗುವುದು ಎಂದರು. ಟಿಕೆಟ್ ಹಂಚಿಕೆ ವಿಚಾರದಲ್ಲಿ ರಾಜಕೀಯ ಪಕ್ಷಗಳು ಕನ್ನಡ ಹೋರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲದಿರುವುದು ನಮ್ಮಲ್ಲಿ ಅಸಮಾಧಾನ ಮೂಡಿಸಿದೆ ಎಂದು ಅಶೋಕ ಚಂದರಗಿ ಹೇಳಿದರು.
ಮಹಾದೇವ ತಳವಾರ ಮತ್ತು ದೀಪಕ ಗುಡಗನಟ್ಟಿ ಮಾತನಾಡಿ, ಅ ಧಿಕಾರಕ್ಕೆ ಬಾರದಿದ್ದರೂ ನಡೆಯುತ್ತದೆ. ಆದರೆ ನಾಡದ್ರೋಹಿ ಕೆಲಸಕ್ಕೆ ಯಾರೂ ಕೈ ಹಾಕಬಾರದು. ನಾಡು-ನುಡಿಗೆ ಧಕ್ಕೆ ತರುವಂಥ ಕೆಲಸ ಮಾಡಬಾರದು ಎಂದು ಎಚ್ಚರಿಕೆ ನೀಡಿದ ಅವರು, ಈ ಚುನಾವಣೆಯಲ್ಲಿ ಕನ್ನಡ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಲವು ಪೋಸ್ rಗಳು ಹರಿದಾಡುತ್ತಿವೆ. ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕುತ್ತಿರುವವರ ವಿರುದ್ಧ ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂಥ ಕೆಲಸ ಆಗಬಾರದು. ಇಲ್ಲದಿದ್ದರೆ ಪೊಲೀಸರು ಹಾಗೂ ಸಂಬಂಸಿದ ಅ ಧಿಕಾರಿಗಳ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು.