ಬೆಳಗಾವಿ: ಕೆಎಸ್‌ಆರ್‌ಪಿಗೆ ಉನ್ನತ ಪದವಿ ಹೊಂದಿದವರೂ ಸೇರಿಕೊಳ್ಳುತ್ತಿದ್ದಾರೆ. ನೀವು ಕಲಿತ ವಿದ್ಯೆ ವೃತ್ತಿಗೆ ಸಹಾಯವಾಗಲಿದೆ. ಅನೇಕ ಕಾನ್ಸಟೇಬಲ್‌ಗಳು ಇಲಾಖೆಯಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಾಧನೆ ಮಾಡುತ್ತಿದ್ದಾರೆ ಎಂದು ಸಿಐಡಿ ಡಿಜಿಪಿ ಪ್ರವೀಣ ಸೂದ್ ಹೇಳಿದರು.
ಇಲ್ಲಿಯ ಕಂಗ್ರಾಳಿ ಕೆ.ಎಚ್. ಗ್ರಾಮದ ಸಮೀಪ ಕೆಎಸ್‌ಆರ್‌ಪಿ ತರಬೇತಿ ಶಾಲೆಯಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ 4ನೇ ತಂಡದ ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಲ್ಲಿ ತರಬೇತಿ ಮುಗಿಸಿದರೂ ಇನ್ನು ಮುಂದೆ ಸಮಾಜದಲ್ಲಿ ಹೊಸ ತರಬೇತಿಗೆ ನೀವು ಅಣಿಯಾಗಬೇಕಿದೆ. ಉನ್ನತ ಪದವಿ ಹೊಂದಿದರೂ ಯಾವುದೇ ಕೀಳರಿಮೆ ಇರಬಾರದು. ಸಾಮಾನ್ಯ ಪೊಲೀಸ್ ಹಾಗೂ ಕೆಎಸ್‌ಆರ್‌ಪಿ ನಡುವೆ ವೇತನ, ಇತರೆ ಸೌಕರ್ಯಗಳ ಬಗ್ಗೆ ವ್ಯತ್ಯಾಸ ಬಗ್ಗೆ ಅನೇಕ ಜನರು ಕೆಎಸ್‌ಆರ್‌ಪಿಗೆ ಬರಲು ಹಿಂದೇಟು ಹಾಕುತ್ತಿದ್ದರು. ಈಗ ಬಹಳ ಬದಲಾವಣೆಗಳಾಗಿವೆ. ಮೊದಲಿನಂತೆ ಈಗ ತಾರತಮ್ಯ ಇಲ್ಲ. ಸಮಾನವಾಗಿ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕೆಎಸ್ ಆರ್‌ಪಿಯಲ್ಲಿ ಅನೇಕ ಅವಕಾಶಗಳಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕೆಎಸ್‌ಆರ್‌ಪಿ ಕಾನ್ಸ್‌ಟೇಬಲ್‌ಗಳಿಗೆ ಕಡ್ಡಾಯವಾಗಿ 12 ಸಿ.ಎಲ್.(ಸಾಮಾನ್ಯ ರಜೆ) ನೀಡುವ ಬಗ್ಗೆ ನಿಯಮ ರೂಪಿಸಬೇಕಾದ ಅಗತ್ಯವಿದೆ. ಸಿಎಲ್ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಈ ಬಗ್ಗೆ ಎಡಿಜಿಪಿ ಪರಿಶೀಲಿಸಬೇಕು ಎಂದು ಹೇಳಿದರು.
165 ಪ್ರಶಿಕ್ಷಣಾ ರ್ಧಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿ, ನಿರ್ಗಮನ ಪಥಸಂಚಲನ ನಡೆಸಿದರು. ತರಬೇತಿ ವೇಳೆ ಉತ್ತಮ ಸಾಧನೆ ತೋರಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಗಣ್ಯರು ಪೊಲೀಸ್ ಪತ್ರಿಕೆ ಬಿಡುಗಡೆ ಮಾಡಿದರು. ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ ಕುಮಾರ್, ಐಜಿಪಿ ರಾಘವೇಂದ್ರ ಸುಹಾಸ, ಮಹಾನಗರ ಪೊಲೀಸ್ ಆಯುಕ್ತ ಲೋಕೇಶ ಕುಮಾರ್,
ಡಿಸಿಪಿ ಸೀಮಾ ಲಾಟ್ಕರ್, ಕೆಎಸ್‌ಆರ್‌ಪಿ ತರಬೇತಿ ಶಾಲೆಯ ಪ್ರಾಚಾರ್ಯ ರಮೇಶ ಬೋರಗಾವೆ, 2ನೇ ಕೆಎಸ್‌ಆರ್‌ಪಿ ತರಬೇತಿ ಶಾಲೆಯ ಕಂಮಾಂಡೆಂಟ್ ಹಮಜಾ ಹುಸೇನ್ ಸೇರಿದಂತೆ ಇತರರು ಇದ್ದರು.