Advertisement
ಮಹಾರಾಷ್ಟ್ರ ಹಾಗೂ ಗೋವಾಕ್ಕೆ ಹೊಂದಿಕೊಂಡಿರುವ ಬೆಳಗಾವಿಯಲ್ಲಿ ಉದ್ದಿಮೆದಾರರನ್ನು ಆಕರ್ಷಿಸಲು ಬೇಕಾದ ಎಲ್ಲ ಸೌಲಭ್ಯಗಳು ಇವೆ. ಸಂಪನ್ಮೂಲಗಳಿಗೆ ಕೊರತೆ ಇಲ್ಲ. ಹೀಗಿರುವಾಗ ಈಗಾಗಲೇ ಸಾಕಷ್ಟು ದೊಡ್ಡ ಉದ್ದಿಮೆಗಳನ್ನು ಹೊಂದಿರುವ ಹುಬ್ಬಳ್ಳಿಯಲ್ಲಿ ಸಮಾವೇಶ ನಡೆಸಲಿರುವ ಉದ್ದೇಶ ಏನು ಎಂಬ ಪ್ರಶ್ನೆಯನ್ನು ಗಡಿ ಭಾಗದ ಉದ್ಯಮಿಗಳು ಎತ್ತಿದ್ದು, ಈ ಬಂಡವಾಳ ಹೂಡಿಕೆದಾರರ ಸಮಾವೇಶ ಬಹಿಷ್ಕರಿಸುವ ಮಾತೂ ಆಡಿದ್ದಾರೆ.
Related Articles
Advertisement
ಹುಬ್ಬಳ್ಳಿ-ಧಾರವಾಡದಲ್ಲಿ ಈಗಾಗಲೇ ಟಾಟಾ ಪವರ್, ಬಿಡಿಕೆ, ಕಿರ್ಲೋಸ್ಕರ್ ಈಗ ಇನ್ಫೋಸಿಸ್ ಮೊದಲಾದ ಬೃಹತ್ ಕಂಪನಿಗಳಿವೆ. ಆದರೆ ಬೆಳಗಾವಿಯಲ್ಲಿ ಅಂತಹ ಒಂದೂ ಉದ್ದಿಮೆಗಳಿಲ್ಲ. ಸರಕಾರಗಳು ನಮ್ಮ ಕಡೆ ಗಮನವಿಟ್ಟು ನೋಡುತ್ತಲೇ ಇಲ್ಲ. ಈಗ ಹುಬ್ಬಳ್ಳಿಯಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸುವ ಮೂಲಕ ನಮ್ಮ ಬಗ್ಗೆ ಇರುವ ತಾರತಮ್ಯ ಧೋರಣೆ ಮುಂದುವರಿಸಿದ್ದಾರೆ ಎಂಬುದು ರೋಹನ್ ಜುವಳಿ ಅಸಮಾಧಾನ.
ಬೆಳಗಾವಿಯಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶ ಮಾಡಿದ್ದರೆ ನೆರೆಯ ಮಹಾರಾಷ್ಟ್ರ ಹಾಗೂ ಗೋವಾ ಉದ್ಯಮಿಗಳನ್ನು ಆಕರ್ಷಿಸಬಹುದಿತ್ತು. ಹುಬ್ಬಳ್ಳಿಯಲ್ಲಿ ಮಾಡುತ್ತಿರುವುದು ತಪ್ಪೇನೂ ಅಲ್ಲ. ಆದರೆ ಬೆಳಗಾವಿಯನ್ನೂ ಸಹ ಸಮಾನ ದೃಷ್ಟಿಯಲ್ಲಿ ನೋಡಬೇಕು. ಬೆಂಗಳೂರು-ಹುಬ್ಬಳ್ಳಿಗೆ ಕೊಡುವಷ್ಟು ಮಹತ್ವವನ್ನು ಬೆಳಗಾವಿಗೂ ನೀಡಬೇಕು ಎಂಬುದು ಉದ್ಯಮಿ ರಾಜೇಂದ್ರ ಹರಕುಣಿ ಅಭಿಪ್ರಾಯ.
ಹುಬ್ಬಳ್ಳಿಯಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶ ಮಾಡಿದ ಮಾತ್ರಕ್ಕೆ ಎಲ್ಲವೂ ಅಲ್ಲಿಗೇ ಹೋಗುವುದಿಲ್ಲ. ಆದರೆ ಹಿಂದಿನ ಇಂತಹ ಸಮಾವೇಶಗಳಲ್ಲಿ ಏನಾಗಿದೆ. ಎಷ್ಟು ಬಂಡವಾಳ ಹರಿದುಬಂದಿದೆ. ಅದರ ಸಾರ್ಥಕತೆ ಎಷ್ಟಾಗಿದೆ ಎಂಬ ಬಗ್ಗೆ ಅವಲೋಕನ ಮಾಡಬೇಕು. ಸಮಾವೇಶ ನಂತರ ಕಾಲಮಿತಿಯಲ್ಲಿ ಅದರ ನಿರ್ಣಯಗಳನ್ನು ಅನುಷ್ಠಾನಕ್ಕೆ ತಂದು ಮಂಜೂರಾತಿ ನೀಡಬೇಕು ಎನ್ನುತ್ತಾರೆ ಹರಕುಣಿ.
ಸರ್ಕಾರದಿಂದ ಪ್ರಾದೇಶಿಕವಾರು ನಡೆಸಲಾಗುವ ಬಂಡವಾಳ ಹೂಡಿಕೆದಾರರ ಸಮಾವೇಶವು ಬೆಳಗಾವಿಯಲ್ಲಿಯೇ ನಡೆಯಬೇಕಾಗಿತ್ತು. ಆದರೆ ನಮ್ಮ ಭಾಗದ ಸಚಿವರ ಹಾಗೂ ಶಾಸಕರ ಉದಾಸೀನತೆ ಮತ್ತು ಸಚಿವ ಶೆಟ್ಟರ್ ಅವರ ಕೃಪೆಯಿಂದ ಅದು ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ. ಕಲಬುರ್ಗಿ ವಿಭಾಗದ ಸಮಾವೇಶ ಕಲಬುರ್ಗಿಯಲ್ಲಿ,ಬೆಂಗಳೂರು ವಿಭಾಗದ ಸಮಾವೇಶ ಬೆಂಗಳೂರಿನಲ್ಲಿ ನಡೆಯುವುದಾದರೆ ಬೆಳಗಾವಿ ವಿಭಾಗದ ಸಮಾವೇಶ ಬೆಳಗಾವಿಯಲ್ಲಿ ಏಕೆ ನಡೆಯುತ್ತಿಲ್ಲ ಎಂಬುದು ಉದ್ಯಮಿಗಳು ಹಾಗೂ ಕನ್ನಡ ಹೋರಾಟಗಾರರ ಪ್ರಶ್ನೆ.
ಬೆಳಗಾವಿಯಲ್ಲಿ ಕೆಲ ತಿಂಗಳ ಹಿಂದೆ ಮಹಾರಾಷ್ಟ್ರದ ಉದ್ಯಮಿಗಳ ಜೊತೆ ಖಾಸಗಿ ಐಷಾರಾಮಿ ಹೋಟೆಲ್ ನಲ್ಲಿ ಸಭೆ ನಡೆಸಿದ ಸಚಿವ ಜಗದೀಶ ಶೆಟ್ಟರ ಈಗ ಹುಬ್ಬಳ್ಳಿಯಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶವನ್ನು ಖಾಸಗಿ ಹೋಟೆಲ್‌ನಲ್ಲಿ ನಡೆಸುತ್ತಿದ್ದಾರೆ. ಬೆಳಗಾವಿಯಲ್ಲಿ 500 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿದ ಸುವರ್ಣ ವಿಧಾನಸೌಧ ಖಾಲಿ ಬಿದ್ದಿರುವಾಗ ಸರ್ಕಾರದ ಕಾರ್ಯಕ್ರಮವನ್ನು ಖಾಸಗಿ ಹೋಟೆಲ್‌ನಲ್ಲಿ ಮಾಡುವ ಉದ್ದೇಶ ಏನು ಎಂಬುದು ಬೆಳಗಾವಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಸದಸ್ಯರ ಪ್ರಶ್ನೆ.
ಮಲಪ್ರಭಾ ಜಲಾಶಯದಿಂದ ನೀರು, ಜಿಲ್ಲೆಯಿಂದಲೇ ವಿದ್ಯುತ್ ಪಡೆಯುವ ಹುಬ್ಬಳ್ಳಿ ಧಾರವಾಡದ ಅಧಿಕಾರಸ್ಥರು ಬೆಳಗಾವಿ ಜಿಲ್ಲೆಯ ಹಿತವನ್ನೂ ಕಾಪಾಡಬೇಕು. 500 ಕೋಟಿ ರೂ.ವೆಚ್ಚದಲ್ಲಿ ಸುವರ್ಣಸೌಧ ಕಟ್ಟಿ ಎರಡನೇ ರಾಜಧಾನಿಯ ಪಟ್ಟ ಪಡೆಯುತ್ತಿರುವ ಬೆಳಗಾವಿಯನ್ನು ನಿರ್ಲಕ್ಷಿಸಿರುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂಬುದು ಕನ್ನಡ ಮುಖಂಡರ ಹೇಳಿಕೆ.
ಬೆಳಗಾವಿಗೆ ಅತಿಥಿ ಸಚಿವರುಜಿಲ್ಲೆಯ ಉಸ್ತುವಾರಿ ಹೊಣೆಯೂ ಹೊತ್ತ ಜಗದೀಶ ಶೆಟ್ಟರ ಅವರು ಬೆಳಗಾವಿಯ ಪಾಲಿಗೆ ಅತಿಥಿ ಸಚಿವರು. ಬೆಳಗಾವಿಯ ಹಳೆಯ ಜಿಲ್ಲಾ ಪಂಚಾಯತ ಕಟ್ಟಡದಲ್ಲಿ ನಾಲ್ಕು ತಿಂಗಳ ಹಿಂದೆ ತಮ್ಮ ಕಚೇರಿ ಆರಂಭಿಸಿದರೂ ಅಲ್ಲಿ ಒಮ್ಮೆಯೂ ಬಂದು ಕೂಡಲಿಲ್ಲ. ಜನರ ಸಮಸ್ಯೆಗಳನ್ನು ಕೇಳಲಿಲ್ಲ. ಕೇವಲ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲ.ಇನ್ನು ಬೆಳಗಾವಿ ಸೇರಿ ತ್ರಿವಳಿ ನಗರ ಪರಿಕಲ್ಪನೆ ನನಗಿದೆ ಎಂದು ಹೇಳಿದ್ದರು. ಆದರೆ ವಾಸ್ತವವಾಗಿ ಸಚಿವರಿಗೆ ಬೆಳಗಾವಿ ಬಗ್ಗೆ ಕಾಳಜಿ ಇಲ್ಲ ಎಂಬ ಅನುಮಾನ ಮೂಡಿದೆ ಎಂಬುದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆರೋಪ. ಕೇಶವ ಆದಿ