Advertisement
1982, ಮೇ 16ರಂದು ಕನ್ನಡದ ವರನಟ ಡಾ.ರಾಜಕುಮಾರ ಅವರು ಬೆಳಗಾವಿಯಲ್ಲಿ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುವ ಮೂಲಕ ರಾಜ್ಯವ್ಯಾಪಿ ಕನ್ನಡದ ಕಿಚ್ಚನ್ನು ಹೊತ್ತಿಸಿದರು. ರಾಜ್ಯ ಭಾಷೆಯ ಬಗ್ಗೆ ರಾಜ್ಯದ ಜನತೆಯಲ್ಲಿ ಸಂಚಲನ ಮೂಡಿಸಿದ ಈ ಚಳವಳಿಯೇ ಇಂದಿನ ಎಲ್ಲ ಕನ್ನಡ ಪರ ಚಳವಳಿಗಳ ಮೂಲ ಬೇರು ಎಂದು ಆಗ ಹೋರಾಟದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಸ್ಮರಿಸಿಕೊಂಡಿದ್ದಾರೆ.
Related Articles
Advertisement
ಮೇ 16ರಂದು ಮುಂಜಾನೆ ಬೆಳಗಾವಿಯ ಕಾಲೇಜು ರಸ್ತೆಯ ಸನ್ಮಾನ ಹೋಟೆಲ್ ಹಿಂದಿದ್ದ ಬಯಲಿನಲ್ಲಿ (ಈಗ ಗಾಂಧಿ ಭವನ ಕಟ್ಟಲಾಗಿದೆ) ಸಹಸ್ರಾರು ಜನರನ್ನುದ್ದೇಶಿಸಿ ರಾಜಕುಮಾರ ಮಾತನಾಡಿದರು. ಬೆಳಗಾವಿಯಿಂದ ಆರಂಭವಾದ ಆಂದೋಲನ ಯಾತ್ರೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸಂಚರಿಸಿತು. ರಾಜ್ ಹೋದಲ್ಲೆಲ್ಲ ಸಾವಿರಾರು ಜನರು ಸೇರತೊಡಗಿದರು. ಸವದತ್ತಿ ಸಹಿತ ಅನೇಕ ಕಡೆಗಳಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು. ರಾಜಕುಮಾರ ಅವರ ಜತೆಗೆ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ, ಚಂದ್ರಶೇಖರ ಪಾಟೀಲ, ರಾ.ಯ. ಧಾರವಾಡಕರ, ಆರ್.ಸಿ.ಹಿರೇಮಠ, ಬಸವರಾಜ ಕಟ್ಟೀಮನಿ, ರಾಮ ಜಾಧವ ಮೊದಲಾದವರಿದ್ದರು.
ಗೋಕಾಕ ಚಳವಳಿಗೆ ರಾಜ್ಯದಲ್ಲಿ ನಿರೀಕ್ಷೆ ಮೀರಿ ಬೆಂಬಲ ಸಿಗತೊಡಗಿದಾಗ ಗುಂಡೂರಾವ್ ಸರ್ಕಾರ ಎಚ್ಚೆತ್ತುಕೊಂಡಿತು. ರಾಜಕುಮಾರ ಹಾಗೂ ಇತರ ಹೋರಾಟಗಾರರನ್ನು ಮಾತುಕತೆಗೆ ಆಹ್ವಾನಿಸಿತು. ವರದಿಯ ಜಾರಿಗೆ ಸಮ್ಮತಿಸಿತು. ಮಾಧ್ಯಮಿಕ ಶಿಕ್ಷಣದಲ್ಲಿ ಕನ್ನಡದ ಸ್ಥಾನಮಾನಕ್ಕೆ ವರದಿಯು ಸೀಮಿತವಾಗಿದ್ದರೂ ಗೋಕಾಕ ಚಳವಳಿಯು ರಾಜ್ಯದಲ್ಲಿ ಹೊಸ ಅಲೆ ಸೃಷ್ಟಿಸಿತು. 1983ರಲ್ಲಿ ಅಧಿಕಾರಕ್ಕೆ ಬಂದ ಮೊಟ್ಟಮೊದಲ ಕಾಂಗ್ರೆಸ್ಸೇತರ ಜನತಾ ಪಕ್ಷದ ಸರ್ಕಾರದ ನಾಯಕ ರಾಮಕೃಷ್ಣ ಹೆಗಡೆ ಅವರು ಮೊದಲ ಬಾರಿಗೆ ಕನ್ನಡ ಕಾವಲು ಸಮಿತಿ ರಚಿಸಿದರು. ಇದರ ಮೊದಲ ಅಧ್ಯಕ್ಷರಾಗಿ ಪಕ್ಷೇತರ ಶಾಸಕ ಸಿದ್ದರಾಮಯ್ಯ ಅವರು ನೇಮಕಗೊಂಡರು.
1985ರಲ್ಲಿ ಜನತಾ ಪಕ್ಷದ ಸರ್ಕಾರವೇ ಮರಳಿ ಅಧಿಕಾರಕ್ಕೆ ಬಂದಾಗ ಪಾಟೀಲ ಪುಟ್ಟಪ್ಪ ಅಧ್ಯಕ್ಷರಾದರು. ಗೋಕಾಕ ಚಳವಳಿಯು ಕರ್ನಾಟಕ ಕಂಡ ಐತಿಹಾಸಿಕ ಚಳವಳಿಯಾಗಿತ್ತು. ನಾಡಿನಾದ್ಯಂತ ಕನ್ನಡ ಪರ ಸಂಘಟನೆಗಳು ಬೆಳೆದು ನಿಲ್ಲಲು ಈ ಚಳವಳಿಯೇ ಪ್ರೇರಣೆ ಎನ್ನಬಹುದು. ಇದರಲ್ಲಿ ಭಾಗವಹಿಸಿದ ಅನೇಕರು ರಾಜ್ಯದ ರಾಜಕೀಯದಲ್ಲಿ ಸ್ಥಾನಮಾನಗಳನ್ನು ಪಡೆದರೆಂಬುದು ಗಮನಾರ್ಹ ಸಂಗತಿ ಎಂದು ಚಂದರಗಿ ತಿಳಿಸಿದ್ದಾರೆ.