Advertisement

ಗ್ರಾಮೀಣ ಭಾಗದಲ್ಲಿ ಶ್ರೀಗಂಧ ಕಳ್ಳರ ಗ್ಯಾಂಗ್‌ ಸಕ್ರಿಯ

01:33 PM Mar 01, 2020 | Naveen |

ಬೆಳಗಾವಿ: ಚಿನ್ನದ ಬೆಲೆ ಹೊಂದಿರುವ ಶ್ರೀಗಂಧದ ಗಿಡಗಳಿಗೆ ಕೊಡಲಿ ಹಾಕಿ ಕದಿಯುತ್ತಿರುವ ಗ್ಯಾಂಗ್‌ ಸಕ್ರಿಯಗೊಂಡಿದ್ದು, ತಾಲೂಕಿನ ಅನೇಕ ಹಳ್ಳಿಗಳಲ್ಲಿ ಶ್ರೀಗಂಧದ ಗಿಡಗಳನ್ನು ರಾತ್ರಿ ಹೊತ್ತಿನಲ್ಲಿ ಕಡಿದು ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬರುತ್ತಿದೆ.

Advertisement

ಬೆಳಗಾವಿ ತಾಲೂಕಿನ ಅಗಸಗಾ, ಚೆಲುವಿನಹಟ್ಟಿ, ಕಡೋಲಿ, ಕೇದನೂರ, ಮಣ್ಣಿಕೇರಿ, ಬೋಡಕೇನಹಟ್ಟಿ, ಹಂದಿಗನೂರ ಗ್ರಾಮಗಳಲ್ಲಿ ಶ್ರೀಗಂಧ ಗಿಡಗಳು ಕಳ್ಳತನವಾಗುತ್ತಿವೆ. ಇದರಿಂದ ಈ ಭಾಗದ ರೈತರು ಆತಂಕಕ್ಕೀಡಾಗಿದ್ದಾರೆ. ಆದರೆ ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಗಿಡ ಬೆಳೆಸಿ ಅರಣ್ಯ ಉಳಿಸಿ ಎಂಬ ಧ್ಯೇಯವಾಕ್ಯದೊಂದಿಗೆ ಅರಣ್ಯ ಇಲಾಖೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ. ಆದರೆ ಬೆಲೆಬಾಳುವ ಶ್ರೀಗಂಧದ ಗಿಡಗಳನ್ನು ಕಡಿದು ಕಳ್ಳತನ ಮಾಡಿರುವ ಬಗ್ಗೆ ಮಾಹಿತಿ ಬಂದರೂ ಜಾಣ ಕಿವುಡು ಪ್ರದರ್ಶಿಸುತ್ತಿದೆ ಎಂಬ ಆರೋಪವಿದೆ. ತಾಲೂಕಿನ ಈ ಹಳ್ಳಿಗಳಲ್ಲಿ ವಾರದಲ್ಲಿ ಮೂರ್‍ನಾಲ್ಕು ಗಿಡಗಳನ್ನು ಕಳ್ಳತನ ಮಾಡುವ ಗ್ಯಾಂಗ್‌ ಬೀಡು ಬಿಟ್ಟಿದ್ದು, ಇನ್ನೂವರೆಗೆ ಈ ಖದೀಮರನ್ನು ಹೆಡೆಮುರಿ ಕಟ್ಟಲು ಸಾಧ್ಯವಾಗಿಲ್ಲ. ಫಲವತ್ತಾದ ಭೂಮಿಯಲ್ಲಿ ಬೀಜ ಬಿದ್ದು ಪ್ರಾಕೃತಿಕವಾಗಿ ಬೆಳೆಯುವ ಗಿಡಗಳಿಗೂ ಸಂಚಕಾರ ಬಂದಿದೆ.

ಹೊಲಗಳಲ್ಲಿ ಪ್ರಾಕೃತಿಕವಾಗಿ ಹೆಚ್ಚಾಗಿ ಇಂಥ ಗಿಡಗಳು ಬೆಳೆಯುತ್ತಿದ್ದು, ಕಳ್ಳರು ರಾತ್ರಿ ಹೊತ್ತಿನಲ್ಲಿ ಕಡಿದುಕೊಂಡು ಹೋಗುತ್ತಿದ್ದಾರೆ. ಈ ಬಗ್ಗೆ ರೈತರು ಪೊಲೀಸ್‌ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರಿಂದ ಸರಿಯಾಗಿ ಸ್ಪಂದನೆ ಸಿಗುತ್ತಿಲ್ಲ. ಅರಣ್ಯ ಇಲಾಖೆಗೆ ಕೇಳಲು ಹೋದರಂತೂ ಕಠಿಣ ನಿಯಮಾವಳಿಗಳಿಂದ ರೈತರು ರೋಸಿ ಹೋಗಿದ್ದಾರೆ. ಹೀಗಾಗಿ ದೂರು ನೀಡುವ ಗೋಜಿಗೆ ಹೋಗುವುದು ಬೇಡ ಎಂದು ಸುಮ್ಮನೆ ಕುಳಿತಿದ್ದಾರೆ.

ಹೊಲಗಳಲ್ಲಿ ಸಸಿ ನೆಟ್ಟು ಗಿಡ ಬೆಳೆಸಿರುವ ರೈತರಿಗೆ ಈಗ ಮತ್ತೂಂದು ತಲೆ ನೋವು ಶುರುವಾಗಿದೆ. ದೊಡ್ಡದಾಗಿ ಮರ ಬೆಳೆದಾಗ ಕೃಷಿ ಚಟುವಟಿಕೆಗಳಿಗೆ ಅಡಚಣೆ ಉಂಟಾದರೆ ಕಟಾವು ಮಾಡಲು ಸರಳವಾಗಿ ಅನುಮತಿ ಸಿಗುತ್ತಿಲ್ಲ. ಅನೇಕ ಸಲ ಕಚೇರಿಗಳಿಗೆ ಅಲೆದಾಡಿ ಸಾಕಾಗಿ ಹೋಗಿದೆ. ಆದರೆ ಗಿಡಗಳನ್ನು ಕದ್ದುಮುಚ್ಚಿ ಕಡಿಯುವವರ ಸಂಖ್ಯೆ ಮಾತ್ರ ಹೆಚ್ಚಾಗಿ ಹೋಗಿದೆ.

Advertisement

ಈ ಬಗ್ಗೆ ಅರಣ್ಯ ಇಲಾಖೆ ಸುಮ್ಮನಿರುವುದಾದರೂ ಏಕೆ ಎನ್ನುವುದು ರೈತರ ಪ್ರಶ್ನೆ. ಶ್ರೀಗಂಧದ ಗಿಡಗಳನ್ನು ಅವ್ಯಾಹತವಾಗಿ ಕಡಿದು ಸಾಗಿಸುತ್ತಿರುವವರನ್ನು ಹಿಡಿದು ಜೈಲಿಗೆ ಅಟ್ಟಬೇಕು. ಸಪದ್ಭರಿತವಾದ ಈ ಗಿಡಗಳನ್ನು ರಕ್ಷಿಸುವ ಕೆಲಸ ಅರಣ್ಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಮಾಡಬೇಕು. ಶ್ರೀಗಂಧದ ಗಿಡ ಕಳ್ಳತನ ಮಾಡಿದವರ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಶ್ರೀಗಂಧ ಗಿಡಗಳನ್ನು ತಮ್ಮ ಖಾಸಗಿ ಜಾಗದಲ್ಲಿ ಬೆಳೆದಿದ್ದರೆ ಕಟಾವು ಮಾಡಲು ಅರಣ್ಯ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕು. ಅನುಮತಿಗಾಗಿ ಅರ್ಜಿ ಹಾಕಿದ ಬಳಿಕ ಅಧಿಕಾರಿಗಳು ಸ್ಥಳಕ್ಕೆ ಬಂದು ಅದರ ಮಾಹಿತಿ ಪಡೆದು ಗಿಡ ಕಟಾವು ಮಾಡಿ ಧಾರವಾಡದ ಮುಖ್ಯ ಡಿಪೋಗೆ ಕಳುಹಿಸಲಾಗುತ್ತದೆ. ಅದರ ಬೆಲೆ ಎಷ್ಟಾಗುತ್ತದೆ, ಅದರ ಮೌಲ್ಯ ಎಷ್ಟು ಎಂಬುದನ್ನು ನಿಖರವಾಗಿ ಲೆಕ್ಕ ಹಾಕಿ ಹಣ ಸಂದಾಯ ಮಾಡಲಾಗುತ್ತದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಖಾಸಗಿ ಮಾಲೀಕತ್ವದ ಜಾಗದಲ್ಲಿ ಶ್ರೀಗಂಧದ ಗಿಡ ಬೆಳೆದರೆ ಅದನ್ನು ರಕ್ಷಿಸುವ ಜವಾಬ್ದಾರಿ ಅವರೇ ಮಾಡಬೇಕಾಗುತ್ತದೆ. ಗಿಡಗಳನ್ನು ಕಳ್ಳತನ ಮಾಡಲು ಬಂದವರ ಬಗ್ಗೆ ಮಾಹಿತಿ ಕೊಟ್ಟರೆ ರೈತರ ಬೆಂಬಲಕ್ಕೆ ನಿಂತು ಕಳ್ಳರನ್ನು ಪತ್ತೆ ಹಚ್ಚುವ ಕೆಲಸ ಮಾಡಲಾಗುವುದು. ಈ ಬಗ್ಗೆ ನಿಖರವಾಗಿ ದೂರು ನೀಡಬೇಕು. ಎಸ್‌.ಎಂ. ಸಂಗೊಳ್ಳಿ,
ಎಸಿಎಫ್‌, ಬೆಳಗಾವಿ
ಉಪವಿಭಾಗ, ಅರಣ್ಯ ಇಲಾಖೆ

ಅರಣ್ಯ ಇಲಾಖೆಯ ಕಠಿಣ ಕಾನೂನು ನಿಯಮಗಳಿಂದಾಗಿ ಅನೇಕ ಗಿಡಗಳ ಕಟಾವಿಗೆ ಸಂಚಕಾರ ಬಂದಿದೆ. ತಮ್ಮ ಹೊಲದಲ್ಲಿ ಬೆಳೆದ ಗಿಡಗಳನ್ನು ಕಟಾವು ಮಾಡಲು ಅನುಮತಿಯೇ ಸಿಗುತ್ತಿಲ್ಲ. ಶ್ರೀಗಂಧ, ಸಾಗವಾನಿ, ಸೇರಿದಂತೆ ಅನೇಕ ಬೆಲೆಬಾಳುವ ಗಿಡಗಳನ್ನು ಬೆಳೆದರೂ ಅವುಗಳನ್ನು ಮಾರಾಟ ಮಾಡಿ ಉದ್ಯೋಗ ನಡೆಸಲು ಅವಕಾಶ ಇಲ್ಲದಂತಾಗಿದೆ. ಕೂಡಲೇ ಸರ್ಕಾರ ತನ್ನ ನಿಲುವು ಬದಲಾವಣೆ ಮಾಡಿಕೊಳ್ಳಬೇಕು.
ಸಂತೋಷ ಮೇತ್ರಿ,
ಅಗಸಗಾ ಗ್ರಾಮಸ್ಥ

ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next