Advertisement

ಎಂಎಲ್‌ಎಗಳು ಫಾರೇನ್‌ ಹೋಕ್ತಾರ, ನಾವ್‌ ಶಿಮ್ಲಾಕ್ಕೆ ಹೋಗೀವಿ

04:20 PM Sep 27, 2018 | |

ಬೆಳಗಾವಿ: ಎಂಎಲ್‌ಎ, ಎಂಪಿಗಳು ಅಧ್ಯಯನದ ಹೆಸರಿನಲ್ಲಿ ಫಾರೇನ್‌ ಟೂರ್‌ ಹೋಗಿ ಫೈವ್‌ ಸ್ಟಾರ್‌ ಹೊಟೇಲ್‌ನಲ್ಲಿ ಇರ್ತಾರೆ. ಆದರೆ ನಾವು ಕಾರ್ಪೊರೇಟರ್‌ಗಳು ಶಿಮ್ಲಾಕ್ಕೆ ಹೋಗಿ ಅಡ್ಡಾಡಿ ಅಲ್ಲಿಯ ಪಾಲಿಕೆಯಲ್ಲಿ ಕೈಗೊಂಡ ಯೋಜನೆಗಳ ಬಗ್ಗೆ ಅಧ್ಯಯನ ಪ್ರವಾಸ ಮಾಡುವುದರಲ್ಲಿ ತಪ್ಪೇನಿದೆ. 
ಅಧ್ಯಯನದ ಹೆಸರಿನಲ್ಲಿ ನಾಲ್ಕು ದಿನಗಳ ಶಿಮ್ಲಾ ಮಹಾನಗರ ಪಾಲಿಕೆಗೆ ಭೇಟಿ ನೀಡಲಿರುವ ಬೆಳಗಾವಿ ಪಾಲಿಕೆಯ ಬಹುತೇಕ ಸದಸ್ಯರ ಪ್ರಶ್ನೆ ಇದು. ಬೆಳಗಾವಿಯನ್ನೂ ಶಿಮ್ಲಾದಂತೆ ಅಭಿವೃದ್ಧಿ ಪಡಿಸಬೇಕೆಂಬ ಉದ್ದೇಶ ಇಟ್ಟುಕೊಂಡು ಪ್ರವಾಸ ಕೈಗೊಂಡಿದ್ದೇವೆ ಎನ್ನುತ್ತಿದ್ದಾರೆ ಈ ಸದಸ್ಯರು.

Advertisement

ಬೆಳಗಾವಿಯಿಂದ ಮುಂಬೈ ಮೂಲಕ ವಿಮಾನದಲ್ಲಿ ಮಂಗಳವಾರ ಶಿಮ್ಲಾಕ್ಕೆ ಪಾಲಿಕೆಯ 40 ಸದಸ್ಯರು ಪ್ರವಾಸ ಬೆಳೆಸಿದ್ದಾರೆ. ಮೊದಲೇ ಆರ್ಥಿಕ ಮುಗ್ಗಟ್ಟಿನಿಂದಾಗಿ ಪೌರ ಕಾರ್ಮಿಕರಿಗೆ ಸಂಬಳ ಕೊಡಲು ಒದ್ದಾಡುತ್ತಿರುವ ಮಹಾನಗರ ಪಾಲಿಕೆ ಈಗ ಸದಸ್ಯರ ಅಧ್ಯಯನಕ್ಕಾಗಿ ಪ್ರವಾಸ ಆಯೋಜಿಸಿದೆ. ಆದರೆ ಈ ಅಧ್ಯಯನ ಪ್ರವಾಸದಿಂದ ನಗರಕ್ಕೇನು ಲಾಭ ಎಂಬುದು ನಾಗರಿಕರ ಪ್ರಶ್ನೆ. ಪ್ರವಾಸಿ ತಂಡದೊಂದಿಗೆ ಪಾಲಿಕೆ ಅಧಿಕಾರಿಯೊಬ್ಬರು ಇದ್ದಾರೆ. ಸುಮಾರು ಐದಾರು ದಿನಗಳ ಕಾಲ ಪ್ರವಾಸ ನಡೆಸಲಿರುವ ಈ ತಂಡ ಶಿಮ್ಲಾ ನಂತರ ಇನ್ನೂ ಯಾವ್ಯಾವ ನಗರಕ್ಕೆ ಭೇಟಿ ನೀಡುತ್ತಾರೆ ಎಂಬುದು ಖಚಿತವಾಗಿಲ್ಲ. ಅಲ್ಲಿನ ಪಾಲಿಕೆಗೆ ಭೇಟಿ ನೀಡಿ ನಗರದ ಅಧ್ಯಯನ ಕೈಗೊಂಡು ಅಧಿಕಾರಿಗಳಿಗೆ ವರದಿ ನೀಡಲಿದ್ದಾರೆ. ಶಿಮ್ಲಾದಂತೆ ಬೆಳಗಾವಿಯನ್ನೂ ಸಿದ್ಧಗೊಳಿಸುವುದೇ ಈ ಪ್ರವಾಸಿ ಸದಸ್ಯರ ಉದ್ದೇಶವಾಗಿದೆ. ಅಧ್ಯಯನ ಪ್ರವಾಸದ ತಂಡದಲ್ಲಿ ಮೇಯರ್‌ ಬಸಪ್ಪ ಚಿಕ್ಕಲದಿನ್ನಿ, ಉಪಮೇಯರ್‌ ಮಧುಶ್ರೀ ಪೂಜಾರಿ ಸೇರಿದಂತೆ 40 ಸದಸ್ಯರಿದ್ದಾರೆ.

ಪಾಲಿಕೆ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದೆ. ಪೌರ ಕಾರ್ಮಿಕರಿಗೆ ಸಮರ್ಪಕವಾಗಿ ಸಂಬಳ ಕೊಡಲು ದುಡ್ಡು ಇಲ್ಲ. ಜತೆಗೆ ನಗರದಲ್ಲಿ ಮಳೆಯಿಂದಾಗಿ ಗುಂಡಿಗಳು ಬಿದ್ದಿರುವ ರಸ್ತೆಗಳನ್ನು ದುರಸ್ತಿ ಮಾಡಲು ಪಾಲಿಕೆಗೆ ಸಾಧ್ಯವಾಗುತ್ತಿಲ್ಲ. ಆದರೆ ಈಗ ಲಕ್ಷಾಂತರ ರೂ. ವೆಚ್ಚ ಮಾಡಿ ಅಧ್ಯಯನದ ನೆಪದಲ್ಲಿ ಪ್ರವಾಸ ಕೈಗೊಂಡಿರುವುದಕ್ಕೆ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾಗಿದ್ದು, ಶಿಮ್ಲಾ ನಗರದಲ್ಲಿ ಕೈಗೊಂಡ ಯೋಜನೆಗಳನ್ನು ಬೆಳಗಾವಿಯ ಸ್ಮಾರ್ಟ್‌ ಸಿಟಿ ಅಳವಡಿಸುವ ಯೋಜನೆ ಈ ತಂಡದ್ದಾಗಿದೆ. ಪ್ರವಾಸ ಕೈಗೊಂಡಿರುವ ಎಲ್ಲ ಸದಸ್ಯರೂ ತಮ್ಮ ಅಭಿಪ್ರಾಯಗಳನ್ನು ಬೆಳಗಾವಿ ಪಾಲಿಕೆಯಲ್ಲಿ ಮಂಡಿಸಲಿದ್ದಾರೆ. ಈಗಾಗಲೇ ಐದು ವರ್ಷಗಳ ಆಡಳಿತ ಅವಧಿಯಲ್ಲಿ ಪಾಲಿಕೆ ಸದಸ್ಯರು ಚಂಡೀಗಢ, ನಾಸಿಕ, ಕೊಲ್ಲಾಪುರ ನಗರಗಳಿಗೆ ಭೇಟಿ ನೀಡಿ ಬಂದಿದ್ದಾರೆ. ಅಲ್ಲಿಯ ಅಧ್ಯಯನದ ವರದಿಯನ್ನೂ ನೀಡಿದ್ದಾರೆ. ಆದರೆ ಅದನ್ನು ಎಷ್ಟರ ಮಟ್ಟಿಗೆ ಅಳವಡಿಸಿಕೊಳ್ಳಲಾಗಿದೆ ಎಂಬುದು ನಾಗರಿಕರ ಪ್ರಶ್ನೆ.

2-3 ತಿಂಗಳ ಹಿಂದೆಯಷ್ಟೇ ಶಿಮ್ಲಾದ ಸದಸ್ಯರು ಬೆಳಗಾವಿಗೆ ಬಂದು ಹೋಗಿದ್ದರು. ಇಲ್ಲಿಯ ಕಾಮಗಾರಿ ನೋಡಿ ಹೋಗಿದ್ದರು. ಈಗ ಬೆಳಗಾವಿ ಪಾಲಿಕೆಯ ಐದು ವರ್ಷದ ಅಧಿಕಾರವಧಿ ಮುಗಿಯಲು ಇನ್ನೂ ಮೂರ್‍ನಾಲ್ಕು ತಿಂಗಳು ಬಾಕಿ ಇದೆ. ಈಗ ಶಿಮ್ಲಾಕ್ಕೆ ಅಧ್ಯಯನ ಪ್ರವಾಸಕ್ಕೆ ಹೋಗಿ ಬಂದು ಅದನ್ನು ಎಷ್ಟರ ಮಟ್ಟಿಗೆ ಜಾರಿಗೆ ತರುತ್ತಾರೆ. ಸದಸ್ಯರು ಯಾವ ವರದಿ ಕೊಡುತ್ತಾರೆ. ಅಧಿಕಾರಿಗಳು ಅದನ್ನು ಹೇಗೆ ಜಾರಿಗೊಲಿಸುತ್ತಾರೆ ಎನ್ನುವ ಕುತೂಹಲ ಜನರಲ್ಲಿದೆ. 

Advertisement

ಮಹಾನಗರ ಪಾಲಿಕೆಯಲ್ಲಿ ಅಧ್ಯಯನ ಪ್ರವಾಸಕ್ಕಾಗಿಯೇ ಮೀಸಲಿಟ್ಟಿರುವ ನಿಧಿ ಮರಳಿ ಹೋಗುತ್ತದೆ ಎಂಬ ಉತ್ತರವನ್ನು ಸದಸ್ಯರು ನೀಡುತ್ತಿದ್ದು, ಇದೇ ಹಣವನ್ನು ಯಾವುದಾದರೂ ಅಭಿವೃದ್ಧಿ ಕಾರ್ಯಕ್ಕೆ ಬಳಸಬಹುದಾಗಿತ್ತು ಎಂಬ ಸಲಹೆ ಸಾರ್ವಜನಿಕರು ನೀಡಿದ್ದಾರೆ.  ಅಧ್ಯಯನ ಪ್ರವಾಸಕ್ಕೆ ಸದಸ್ಯರೇ ಹೋಗಬೇಕಾಗಿಲ್ಲ. ಯೋಜನಾ ಸಮಿತಿಯ ಅಧಿಕಾರಿಗಳು ಹೋದರೆ ಅದಕ್ಕೊಂದು ಅರ್ಥ ಬರುತ್ತದೆ. ಪಾಲಿಕೆಯ ಸದಸ್ಯರು ಹೋಗಿರುವುದು ಯಾವ ಕಾರಣಕ್ಕೆ ಎಂಬುದು ಅರ್ಥವಾಗುತ್ತಿಲ್ಲ. ಈ ಬಾರಿಯ ಅಧ್ಯಯನ ಪ್ರವಾಸ ಬಿಟ್ಟು ಕೊಡಗಿನ ನೆರೆ ಸಂತ್ರಸ್ತರಿಗೆ ಹಣ ಕೊಟ್ಟಿದ್ದರೆ ಎಷ್ಟೋ ಅನುಕೂಲವಾಗುತ್ತಿತ್ತು. ಜತೆಗೆ ನಮ್ಮ ಸದಸ್ಯರಿಗೂ ಪುಣ್ಯ ಪ್ರಾಪ್ತಿ ಆಗುತ್ತಿತ್ತು. ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಿರುವ ಇಂಥ ಸದಸ್ಯರಿಗೆ ಏನು ಹೇಳ್ಳೋದು ಅರ್ಥವಾಗುತ್ತಿಲ್ಲ.
. ಅಶೋಕ ಚಂದರಗಿ, ಕನ್ನಡ ಹೋರಾಟಗಾರರು

ಐದು ವರ್ಷಗಳ ಅವಧಿಯಲ್ಲಿ ಮೂರ್‍ನಾಲ್ಕು ಪ್ರವಾಸ ಮಾಡಿ ಬಂದವರು ಯಾವುದನ್ನು ಬೆಳಗಾವಿ ನಗರದಲ್ಲಿ ಅಳವಡಿಸಿದ್ದಾರೆ ಎಂಬ ಪ್ರಶ್ನೆ ಮೂಡುತ್ತಿದೆ. ಚಂಡಿಗಢಕ್ಕೆ ಹೋಗಿ ಬಂದವರು ಅಲ್ಲಿಯ ಯೋಜನೆಯನ್ನು ಅಲವಡಿಸಿದ್ದಾರೆಯೇ, ಪಾಲಿಕೆಯಲ್ಲಿ ಪೌರ ಕಾರ್ಮಿಕರಿಗೆ ಕೊಡಲು ಹಣ ಇಲ್ಲ. ಸುಮ್ಮನೇ ಸದಸ್ಯರು ಅಧ್ಯಯನದ ನೆಪ ಹೇಳಿ ಹೋಗಿದ್ದಾರೆ. ಇಲ್ಲಿಯವರೆಗೆ ಯಾವುದೋ ಪ್ರವಾಸಕ್ಕೂ ನಾನು ಹೋಗಿಲ್ಲ. ಅಧ್ಯಯನ ಎಂದರೆ ಅದು ಸರಿಯಾಗಿ ಜಾರಿಗೆ ಬರಬೇಕು ಎಂಬುದೇ ನಮ್ಮ ಅಭಿಪ್ರಾಯ.
. ಸರಳಾ ಹೇರೇಕರ, ಪಾಲಿಕೆ ಸದಸ್ಯರು

 ಭೈರೋಬಾ ಕಾಂಬಳೆ 

Advertisement

Udayavani is now on Telegram. Click here to join our channel and stay updated with the latest news.

Next