ಬೆಳಗಾವಿ: ದೇಶ ಸೇವೆ ಮಾಡುವ ಯೋಧನ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ಘಟನೆ ಬೆಳಗಾವಿಯ ರಾಮದುರ್ಗದ ತೋಟಗಿಟ್ಟಿ ಎಂಬಲ್ಲಿ ನಡೆದಿದೆ. ಅಷ್ಟೇ ಅಲ್ಲ ಯೋಧನ ಕುಟುಂಬದ ಜತೆ ಮಾತನಾಡಿದರೆ ಐದು ಸಾವಿರ ರೂಪಾಯಿ ದಂಡ ವಿಧಿಸುವ ಎಚ್ಚರಿಕೆ ಕೂಡಾ ನೀಡಲಾಗಿದೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ.
ಯೋಧನ ಕುಟುಂಬಕ್ಕೆ ಬಹಿಷ್ಕಾರ ಹಾಕಿದ ಬಗ್ಗೆ ಪಬ್ಲಿಕ್ ಟಿವಿ ವರದಿ ಬಿತ್ತರಿಸಿದ್ದು, ಯೋಧನ ಕುಟುಂಬಕ್ಕೆ ಯಾರೋಬ್ಬರ ಮನೆಯಲ್ಲೂ ನೀರು ಸಿಗಲ್ಲ, ಊರಿನ ಜಾತ್ರೆ, ದೇಗುಲ ಪ್ರವೇಶಕ್ಕೂ ನಿಷೇಧ ಹೇರಲಾಗಿದೆ ಎಂದು ತಿಳಿಸಿದೆ.
ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಯೋಧ ವಿಠಲ್ ಕಡಕೋಳ ಮತ್ತು ಅವರ ಕುಟುಂಬಕ್ಕೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದು, ವಿಠಲ್ ಅವರ ತಂದೆಗೆ ಸೇರಿದ್ದ ಜಾಗದಲ್ಲಿ ಅಂಗನವಾಡಿ ನಿರ್ಮಿಸುವುದಕ್ಕೆ ಮುಂದಾದಾಗ ಅದನ್ನು ವಿರೋಧಿಸಿದ್ದಾರೆಂದು ಕಳೆದ ಮೂರು ವರ್ಷದ ಹಿಂದೆ ಬಹಿಷ್ಕಾರ ಹಾಕಲಾಗಿತ್ತು ಎಂದು ವಿವರಿಸಿದೆ.
ಯೋಧನ ಹಾಗೂ ಆತನ ಅಣ್ಣನ ಮದುವೆಗೂ ಗ್ರಾಮಸ್ಥರು ಅಡ್ಡಿಪಡಿಸಿದ್ದಾರೆ. ಇದರಿಂದಾಗಿ ಯೋಧನ ಕುಟುಂಬ ಮದುವೆಯನ್ನು ಮುಂದೂಡಲಾಗಿದೆಯಂತೆ. ಊರಿನವರು ಬಹಿಷ್ಕಾರ ಹಾಕಿರುವ ಬಗ್ಗೆ ಸ್ವತಃ ಯೋಧ ವಿಠಲ್ ತಮ್ಮ ಅಳಲು ತೋಡಿಕೊಂಡಿದ್ದಾರೆ.