ಬೆಳಗಾವಿ: ದೇಶದಲ್ಲಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಜನರು ಮರೆಯಲು ಸಾಧ್ಯವಿಲ್ಲ. ಸಂವಿಧಾನದ ಆಶೋತ್ತರಗಳನ್ನು ಧಿಕ್ಕರಿಸಿ ಜನರ ಮೇಲೆ ನಡೆಸಿದ್ದ ದೌರ್ಜನ್ಯವನ್ನು ಮರೆಯಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹೇಳಿದರು.
Advertisement
ನಗರದ ಹಿಂದವಾಡಿಯ ಮಹಾವೀರ ಭವನದಲ್ಲಿ ಮಂಗಳವಾರ ನಡೆದ ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ಮತ್ತು ತುರ್ತು ಪರಿಸ್ಥಿತಿಯಲ್ಲಿ ಸಂವಿಧಾನಕ್ಕೆ ಮಾಡಿದ ಅಪಚಾರ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿಗೆ ಈಗ 50 ವರ್ಷ ಆಗಿದೆ. ಇದನ್ನು ಜನರು ಮರೆಯಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಗಾಂಧಿ ಸಂವಿಧಾನದ ಕೊಲೆ ಮಾಡಿದ ಕರಾಳ ದಿನವನ್ನು ನಾವು ಮರೆಯಲು ಸಾಧ್ಯವಿಲ್ಲ. ಈ ಬಗ್ಗೆ ಕಾಂಗ್ರೆಸ್‌ನವರು ದೇಶದ ಜನರ ಕ್ಷಮೆಯಾಚಿಸಬೇಕು ಎಂದರು.
Related Articles
Advertisement
ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸಂವಿಧಾನದ ವಿರುದ್ಧ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್‌ನವರು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್ ತನ್ನನ್ನು ಸಂವಿಧಾನದ ರಕ್ಷಕ ಎಂಬಂತೆ ತೋರಿಸಿಕೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸಂವಿಧಾನ ಬದಲಿಸಲಿದ್ದಾರೆ ಎಂಬ ಸುಳ್ಳು ಪ್ರಚಾರ ಮಾಡಿದೆ. ಆದರೆ ಡಾ|ಬಾಬಾಸಾಹೇಬ ಅಂಬೇಡ್ಕರ ಅವರೇ ವಾಪಸ್ ಬಂದರೂ ಸಂವಿಧಾನ ಬದಲಿಸಲು ಸಾಧ್ಯವೇ ಇಲ್ಲ ಎಂದು ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.ಆದರೆ ಈ ವಿಷಯದಲ್ಲಿ ಕಾಂಗ್ರೆಸ್ ನಾಟಕ ಜೋರಾಗಿದೆ. ಸಂವಿಧಾನಕ್ಕೆ ದ್ರೋಹ ಮಾಡಿದ ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ನಾಶಪಡಿಸಿದೆ. ತುರ್ತು ಪರಿಸ್ಥಿತಿ ಘೋಷಣೆ ಕುರಿತು ಆತ್ಮಾವಲೋಕನದ ಅಗತ್ಯವಿದೆ. ಇಂದು ಅಂಬೇಡ್ಕರ್ ಬದುಕಿದ್ದರೆ ಸಂವಿಧಾನ ಉಲ್ಲಂಘಿಸಿದ್ದಕ್ಕೆ ಇಂದಿರಾ ಗಾಂಧಿ ಅವರಿಗೆ ತಕ್ಕ ಉತ್ತರ ನೀಡುತ್ತಿದ್ದರು. ಹೀಗಾಗಿ ಕಾಂಗ್ರೆಸ್ ಕ್ಷಮೆ ಕೇಳಬೇಕು ಎಂದರು. 2006ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರ್ಪಡೆಯಾಗುವ ಮುನ್ನ ತುರ್ತು ಪರಿಸ್ಥಿತಿ ಕುರಿತು ಅನೇಕ ಸಲ ಇಂದಿರಾ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದಾರೆ. ಬಹಿರಂಗವಾಗಿ ಅನೇಕ ಸಲ ವಿರೋಧ ಮಾಡಿದ್ದಾರೆ. ಆದರೆ ಈಗ ಮೌನ ವಹಿಸಿದ್ದಾದರೂ ಏಕೆ? ತುರ್ತು ಪರಿಸ್ಥಿತಿ ಘೋಷಣೆ ಬಗ್ಗೆ ರಾಹುಲ್ ಗಾಂಧಿ ಕಾರಣ ನೀಡಬೇಕು ಎಂದರು. ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ತುರ್ತು ಪರಿಸ್ಥಿತಿ ಕುರಿತು ಉಪನ್ಯಾಸ ನೀಡಿದರು. ನಿವೃತ್ತ ಕ್ಯಾಪ್ಟನ್ ಚಾಂಗಪ್ಪ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕರಾದ ಅಭಯ ಪಾಟೀಲ, ವಿಠಲ ಹಲಗೇಕರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ ಸೇರಿದಂತೆ ಇತರರು ಇದ್ದರು.