Advertisement

ಬಿಜೆಪಿ ಶಾಸಕರಿಂದ ಬೆಳಗಾವಿ ಅಭಿವೃದ್ಧಿ ಕುಂಠಿತ : ಸತೀಶ ಜಾರಕಿಹೊಳಿ

04:30 PM Oct 12, 2021 | Team Udayavani |

ಬೆಳಗಾವಿ: ಬಿಜೆಪಿಯ ಇಬ್ಬರು ಶಾಸಕರ ಅಸಹಕಾರದಿಂದ ನಗರದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಈ ಬಗ್ಗೆ ಶಾಸಕರೇ ಸ್ಪಷ್ಟೀಕರಣ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ನಡೆದಿಲ್ಲ. ಪದೇ ಪದೇ ಸಭೆ ಮುಂದಕ್ಕೆ ಹೋಗುತ್ತಿರುವುದಕ್ಕೆ ಬಿಜೆಪಿಯ ಇಬ್ಬರು ಶಾಸಕರೇ ಕಾರಣ ಎಂದು ಆರೋಪಿಸಿದರು.

ಸ್ಥಳೀಯ ಇಬ್ಬರು ಶಾಸಕರು ಬುಡಾ ಅಧ್ಯಕ್ಷರಿಗೆ ಸಹಕಾರ ನೀಡುತ್ತಿಲ್ಲ. ನಗರಾಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರನ್ನೂ ಸಹ ಬಿಜೆಪಿ‌ ಶಾಸಕರು ಸಭೆಗೆ ಹೋಗಲು ಬಿಡುತ್ತಿಲ್ಲ. ಈ ಬಗ್ಗೆ ಬುಡಾ ಅಧ್ಯಕ್ಷರೇ ಹೇಳಿಕೆ ನೀಡಿದ್ದಾರೆ. ಇದಕ್ಕೆ ಶಾಸಕರೇ ಸ್ಪಷ್ಟನೆ ನೀಡಬೇಕು ಎಂದರು.

ಬುಡಾದಲ್ಲಿ ನಾವು ಮಂಜೂರು ಮಾಡಿದ ಕೆಲಸಗಳು ಇನ್ನೂ ಬಾಕಿ ಇವೆ. ಒಂದು ವರ್ಷದಿಂದ ಅಭಿವೃದ್ಧಿ ಕುಂಠಿತವಾಗಿದೆ. ಅನುದಾನ, ಸಹಾಯಧನ, ಪ್ರೋತ್ಸಾಹ ಧನ ಕಡಿತವಾಗಿವೆ.  ಇದಕ್ಕೆ ಬಿಜೆಪಿ ಶಾಸಕರೇ ಪರಿಹಾರವನ್ನು ಕಂಡುಕೊಳ್ಳಬೇಕು‌ ಎಂದರು.

ಮೇಯರ್ ಅಯ್ಕೆ ಆಗಿಲ್ಲ

Advertisement

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಬಂದು ತಿಂಗಳು ಕಳೆದರು ಇದುವರೆಗೂ ಮೇಯರ್ ಆಯ್ಕೆಯಾಗಿಲ್ಲ. ಮೇಯರ್, ಉಪಮೇಯರ್ ಆಗಲು ಒಂದು ವರ್ಷ ಬೇಕೆ ಬೇಕು ಎಂದು ನನಗನಿಸುತ್ತದೆ. ಬೆಳಗಾವಿಯಲ್ಲಿ ವ್ಯವಸ್ಥೆ ಹಾಗೆಯೇ ಇದೆ. ಕಳೆದ ಮೂರು ವರ್ಷಗಳಿಂದ ಸ್ಥಳೀಯ ಶಾಸಕರೇ ಇಲ್ಲಿ ದರ್ಬಾರ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಮುಂಬರುವ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಬೆಳಗಾವಿ ಉತ್ತರ ಹಾಗೂ ದಕ್ಷಿಣ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಕಾರ್ಯಕರ್ತರನ್ನು ಭೇಟಿ ಮಾಡುತ್ತಿದ್ದೇವೆ ಎಂದು ಸಹ ಸತೀಶ ಹೇಳಿದರು.

ಇದನ್ನೂ ಓದಿ: ನಕಲಿ ನೋಟು ಮುದ್ರಣ, ಭಯೋತ್ಪಾದನೆ…ಹಣಕ್ಕೆ ಬಾಯಿಬಿಡುವ ಸರ್ವಾಧಿಕಾರಿ ಕಿಮ್‌!

ಹಾನಗಲ್ ಹಾಗೂ ಸಿಂದಗಿ ವಿಧಾನಸಭೆ ಉಪಚುನಾವಣೆಯ ಬಗ್ಗೆ ಪ್ರಸ್ತಾಪಿಸಿದ ಅವರು ಹಾನಗಲ್ ನಲ್ಲಿ ಪಕ್ಷದ ಅಭ್ಯರ್ಥಿಗಳ ನಡುವೆ ಇದ್ದ ಗೊಂದಲ ಬಗೆಹರಿದಿದ್ದು, ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಲಿದ್ದಾರೆ ಎಂದರು.

ಮಾಜಿ ಸಚಿವ ರಮೇಶ ಜಾರಕಿಹೊಳಿ ಆಪ್ತರು ಡಿಕೆಶಿ ಭೇಟಿ ಮಾಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರು ಏನು ಸಂದೇಶ ಕೊಟ್ಟಿದ್ದಾರೆ ನನಗೆ ಗೊತ್ತಿಲ್ಲ. ಈ ಬಗ್ಗೆ ಅವರೇ ಸ್ಪಷ್ಟ ಉತ್ತರ ಕೊಡಬೇಕು. ನನ್ನ ಬಳಿ ಉತ್ತರ ಇಲ್ಲ ಎಂದು ಹೇಳಿದರು.

ಇನ್ನು ಬಿಜೆಪಿಯಲ್ಲಿನ ಬೆಳವಣಿಗೆ ನೋಡಿದರೆ ಮಾಜಿ ಸಿಎಂ ಯಡಿಯೂರಪ್ಪ ವಿರೋಧ ಪಕ್ಷದಲ್ಲಿದ್ದಂತೆ ಆಗಿದ್ದಾರೆ. ಅವರ ಆಪ್ತನ ಮೇಲೆ ಐಟಿ ದಾಳಿ ಆಗಿದೆ.  ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಿದ ಮೇಲೆ ವಿರೋಧ ಪಕ್ಷದವರಂತೆ ಕಾಣಲಾಗುತ್ತಿದೆ. ಬಿಜೆಪಿಯಲ್ಲಿ ಆತಂರಿಕ ಸಮಸ್ಯೆಗಳು ಇವೆ. ಕಾಲವೇ ಈ ಬಗ್ಗೆ ಎಲ್ಲವನ್ನೂ ಹೇಳಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next