Advertisement

ಬೆಳಗಾವಿ: ಕರ್ನಾಟಕದ ನಿಲುವು ಎತ್ತಿಹಿಡಿದ ಕೇಂದ್ರ

12:28 AM Mar 18, 2021 | Team Udayavani |

ಮರಾಠಿ ಭಾಷಿಕರು ಅಧಿಕವಿರುವ ರಾಜ್ಯದ ಗಡಿ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸುವಂತೆ ಶಿವಸೇನೆ ಮಾಡಿದ್ದ ಮನವಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ಕೇಂದ್ರದ ಈ ಸ್ಪಷ್ಟ ನಿಲುವು ಬೆಳಗಾವಿ ವಿಷಯವನ್ನು ಮುಂದಿಟ್ಟುಕೊಂಡು ಪದೇ ಪದೆ ತಕರಾರು ತೆಗೆಯುತ್ತಲೇ ಬಂದಿರುವ ಮಹಾರಾಷ್ಟ್ರ ಸರಕಾರ ಮತ್ತು ಅಲ್ಲಿನ ರಾಜಕೀಯ ನಾಯಕರ ಬಾಯಿಗೆ ಬೀಗ ಜಡಿದಿದೆ.

Advertisement

ಬೆಳಗಾವಿ ಸಹಿತ ಮರಾಠಿ ಭಾಷಿಕರು ಅಧಿಕ ಸಂಖ್ಯೆಯಲ್ಲಿರುವ ಪ್ರದೇಶಗಳನ್ನು ಕರ್ನಾಟಕದಿಂದ ಬೇರ್ಪಡಿಸಿ ಮಹಾರಾಷ್ಟ್ರಕ್ಕೆ ಸೇರ್ಪಡೆ­ಗೊಳಿ­­ಸಬೇಕು ಎಂದು ಈ ಹಿಂದಿನಿಂದಲೂ ಹೋರಾಟ ನಡೆಸುತ್ತಲೇ ಬಂದಿರುವ ಮಹಾರಾಷ್ಟ್ರದ ರಾಜಕೀಯ ಪಕ್ಷಗಳು ಮತ್ತು ಅಲ್ಲಿನ ನಾಯಕರು ಇವೆಲ್ಲದರಲ್ಲೂ ಸೋಲು ಕಂಡಿದ್ದರು. ಶಿವಸೇನೆ ಇತ್ತೀಚೆಗೆ ಗಡಿ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿತ್ತು. ಮಂಗಳವಾರ ಲೋಕಸಭೆಯಲ್ಲಿ ಶಿವಸೇನೆ ಸಂಸದರ ಪ್ರಶ್ನೆಗೆ ಉತ್ತರ ನೀಡಿದ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್‌ ಅವರು ಇಂಥ ಮನವಿಗಳು ಹಲವಾರು ಬಾರಿ ಕೇಂದ್ರಕ್ಕೆ ಸಲ್ಲಿಕೆಯಾಗಿ­ದ್ದರೂ ಕೇಂದ್ರ ಸರಕಾರ ಇವುಗಳನ್ನು ಪರಿಗಣಿಸಿಲ್ಲ. ಮರಾಠಿ ಭಾಷಿಕರು ಹೆಚ್ಚಿರುವ ಪ್ರದೇಶಗಳನ್ನು ಒಗ್ಗೂಡಿಸಿ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ರಚನೆಯ ಪ್ರಸ್ತಾವ ಕೇಂದ್ರ ಸರಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಈ ವಿಚಾರದಲ್ಲಿ ವಿನಾಕಾರಣ ತಗಾದೆ ತೆಗೆಯುತ್ತಿರುವ ಶಿವಸೇನೆಗೆ ಸೂಕ್ತ ತಿರುಗೇಟು ನೀಡಿದರು.

ಬೆಳಗಾವಿ ಗಡಿ ವಿವಾದ ಮುಗಿದ ಅಧ್ಯಾಯ ಎಂದು ಕರ್ನಾಟಕ ಸರಕಾರ ಈ ಹಿಂದಿನಿಂದಲೂ ಬಲವಾಗಿ ಪ್ರತಿಪಾದಿಸುತ್ತಲೇ ಬಂದಿದೆ. ಕಾನೂನು ಹೋರಾಟದಿಂದ ಹಿಡಿದು ಎಲ್ಲ ತೆರನಾದ ಹೋರಾಟಗಳ­ಲ್ಲಿಯೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು ಅದನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸಲಾಗದು ಎಂದು ಸ್ಪಷ್ಟವಾಗಿ ಹೇಳಲಾ­ಗಿದೆ. ಆದರೆ ಮಹಾರಾಷ್ಟ್ರದ ನಾಯಕರು ರಾಜಕೀಯ ಕಾರಣಗಳಿಗಾಗಿ ಈ ವಿಷಯವನ್ನು ಮತ್ತೆಮತ್ತೆ ಪ್ರಸ್ತಾವಿಸುವ ಮೂಲಕ ಅದನ್ನು ವಿವಾದವಾಗಿ ಜೀವಂತವಿರಿಸುವ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದ್ದಾರೆ. ಮರಾಠಿ ಭಾಷಿಕರ ಹಿತರಕ್ಷಣೆಯ ನೆಪದಲ್ಲಿ ಬೆಳಗಾವಿ ಗಡಿ ತಕರಾರನ್ನು ಕೆದಕಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಇರಾದೆ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆ ನಾಯಕರದು.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ವಿವಿಧ ನ್ಯಾಯ­ಮಂಡಳಿಗಳು, ನ್ಯಾಯಾಲಯಗಳು, ತಜ್ಞರ ಸಮಿತಿಗಳು ಸ್ಪಷ್ಟವಾಗಿ ಹೇಳಿದ್ದರೂ ಇವ್ಯಾವುದಕ್ಕೂ ಬೆಲೆಕೊಡದೆ ವಿನಾಕಾರಣ ಈ ವಿಷಯವನ್ನು ಕೆದಕಿ ಮತ್ತೆ ರಾದ್ಧಾಂತ ಸೃಷ್ಟಿಸುವ ಕಾರ್ಯವನ್ನು ಶಿವಸೇನೆ ನಾಯಕರು ಮಾಡುತ್ತಿದ್ದಾರೆ. ಮಹಾಜನ್‌ ಆಯೋಗದ ವರದಿಯ ಅನುಸಾರ ಈ ವಿವಾದ ಬಗೆಹರಿದಿದೆ. ಅಷ್ಟು ಮಾತ್ರವಲ್ಲದೆ ಈ ಪ್ರದೇಶದ ಜನರು ಪರಸ್ಪರ ಸೌಹಾರ್ದದಿಂದ ಬಾಳುತ್ತಿದ್ದಾರೆ. ಅಭಿವೃದ್ಧಿ ಯೋಜನೆ, ಜನ­ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದ ವಿಚಾರದಲ್ಲೂ ಸರಕಾರದಿಂದ ಯಾವುದೇ ತಾರತಮ್ಯ ನಡೆಸಲಾಗುತ್ತಿಲ್ಲ. ಇವೆಲ್ಲದರ ಹೊರತಾಗಿಯೂ ಮಹಾರಾಷ್ಟ್ರದ ರಾಜಕೀಯ ನಾಯಕರು ಮತ್ತು ಕೆಲವೊಂದು ಮರಾಠಿ ಸಂಘಟನೆಗಳ ನಾಯಕರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಈ ಪ್ರದೇಶದಲ್ಲಿ ಶಾಂತಿಗೆ ಭಂಗ ತರುವ ಪ್ರಯತ್ನವನ್ನು ನಡೆಸುತ್ತಿರುವುದು ಒಕ್ಕೂಟ ವ್ಯವಸ್ಥೆಗೆ ಮಾಡುತ್ತಿರುವ ಅವಮಾನವೇ ಸರಿ.

Advertisement

Udayavani is now on Telegram. Click here to join our channel and stay updated with the latest news.

Next