Advertisement

ಬೆಳಗಾವಿ: ರಾಜ್ಯದ ಇತಿಹಾಸ ಬರೆವವರಿಗೆ ಮಾಹಿತಿ ಕಣಜ

02:41 PM Mar 05, 2024 | Team Udayavani |

ಉದಯವಾಣಿ ಸಮಾಚಾರ
ಬೆಳಗಾವಿ: ಕರ್ನಾಟಕದ ಇತಿಹಾಸ- ಒಂದು ಇಣುಕು ನೋಟ ಕೃತಿಯು, ಕರ್ನಾಟಕ ಇತಿಹಾಸ ಕುರಿತು ಬರೆಯುವ ಸಂಶೋಧಕರಿಗೆ ಒಂದು ದಿಕ್ಸೂಚಿಯಾಗಿದೆ. ಕೃತಿಕಾರ ಡಾ| ಜೋರಾಪೂರ ಅವರಿಗೆ ದೇಶ ತಿರುಗುವುದರ ಜೊತೆಗೆ ಅದರ ಬಗ್ಗೆ ಅಭ್ಯಸಿಸಿ, ದಾಖಲಿಸುವ ಗುಣವಿದೆ ಎಂದು ಗದಗದ ತೋಂಟದಾರ್ಯ ಮಠದ ಡಾ| ಸಿದ್ಧರಾಮ ಸ್ವಾಮಿಗಳು ಹೇಳಿದರು.

Advertisement

ನಗರದ ನಾಡಹಬ್ಬ ಉತ್ಸವ ಸಮಿತಿ ಹಾಗೂ ಪ್ರಹ್ಲಾದ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಎಸ್‌. ಜಿ. ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ ಸಭಾಗೃಹದಲ್ಲಿ ನಡೆದ ಹಿರಿಯ ಲೇಖಕ ಡಾ. ಸಿ. ಕೆ. ಜೋರಾಪೂರ ರಚಿಸಿದ ಕರ್ನಾಟಕದ ಇತಿಹಾಸ- ಒಂದು ಇಣುಕು ನೋಟ ಕೃತಿ ಲೋಕಾರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕರ್ನಾಟಕದ ಸಾಂಸ್ಕೃತಿಕ ಇತಿಹಾಸ, ಕರ್ನಾಟಕದ ಭೌಗೋಳಿಕ ಇತಿಹಾಸ ಮುಂತಾದ ವಿಷಯಗಳ ಕುರಿತು ಡಾ. ಸಿ. ಕೆ. ಜೋರಾಪೂರ ಅವರಿಂದ ಇನ್ನಷ್ಟು ಕೃತಿಗಳು ಹೊರಬರಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರಾದ ಡಾ| ಸತೀಶ ಹೊಸಮನಿ ಮಾತನಾಡಿ, ನಾವು ಅಂತರ್ಜಾಲ ವಾಚನಾಲಯಗಳನ್ನು ಪಾರಂಭಿಸಿದ್ದು ಯಾವುದೇ ಶುಲ್ಕವಿಲ್ಲದೇ ಚಂದಾದಾರರಾಗಬಹುದು. ಈ
ವಾಚನಾಲಯದಲ್ಲಿ ನಾಟಕ, ಕತೆ, ಕಾದಂಬರಿ, ಪ್ರಬಂಧ ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳನ್ನು ಮನೆಯಲ್ಲಿಯೇ ಕುಳಿತು ಓದಬಹುದಾಗಿದೆ ಎಂದರು.

ಕೃತಿಕಾರ ಡಾ| ಸಿ. ಕೆ. ಜೋರಾಪೂರ ಮಾತನಾಡಿ, ಬೆಳಗಾವಿ ಸಾಹಿತ್ಯ ಕ್ಷೇತ್ರವು ಜಾತಿ, ಮತ, ಗುಂಪುಗಾರಿಕೆಯಿಂದ ಕೂಡಿದ್ದು ಒಬ್ಬನು ಬೆಳೆದರೆ ಮತ್ತೂಬ್ಬನಿಗೆ ಸಹನೆಯಿಲ್ಲ. ಸರಿಯಾದ ವ್ಯಕ್ತಿಗೆ ಸಿಗದ ಪ್ರೋತ್ಸಾಹ, ಗೌರವ ಸಾಹಿತ್ಯ ಕ್ಷೇತ್ರದ ಹಿನ್ನೆಡೆಗೆ ಕಾರಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಕೃತಿ ಪರಿಚಯಿಸಿದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಮಹಾವಿದ್ಯಾಲಯದ ಉಪನ್ಯಾಸಕಿ ಡಾ| ರಾಧಾ ಬಿ. ಆರ್‌. ಅವರು, ಇತಿಹಾಸಕ್ಕೆ ಒಂದು ಮಹಾಕಾವ್ಯಕ್ಕೆ ಇರುವಂತಹ ಮೌಲ್ಯವಿದೆ. ಇತಿಹಾಸವಿಲ್ಲದೇ ಆದರ್ಶವಿಲ್ಲ. ಇತಿಹಾಸ ಕೇವಲ ಸಂಶೋಧನೆಗೆ ಅಲ್ಲ, ಮುಂದಿನ ಜೀವನದ ಮಾರ್ಗವಾಗಿದೆ ಎಂದರು.

Advertisement

ಡಾ| ಎಚ್‌. ಬಿ. ರಾಜಶೇಖರ ಅಧ್ಯಕ್ಷತೆ ವಹಿಸಿದ್ದರು. ಕಾರಂಜಿಮಠದ ಗುರುಸಿದ್ಧ ಸ್ವಾಮಿಗಳು, ಮಹಾಂತೇಶ ವಕ್ಕುಂದ, ಎಂ. ಬಿ.
ಝಿರಲಿ, ಪ್ರೊ. ಎಂ. ಎಸ್‌. ಇಂಚಲ, ಕೇದಾರನಾಥ ಜೋರಾಪೂರ, ಪ್ರಹ್ಲಾದ ಜೋರಾಪುರ, ಆರ್‌.ಪಿ. ಪಾಟೀಲ, ಆನಂದ ಪುರಾಣಿಕ ಮುಂತಾದವರು ಉಪಸ್ಥಿತರಿದ್ದರು. ಗ್ರಂಥದಾಸೋಹಿ ಆರ್‌.ಪಿ. ಪಾಟೀಲ ದಂಪತಿಗಳು, ಕನ್ನಡ ಹೋರಾಟಗಾರ
ಬಾಸೂರು ತಿಪ್ಪೇಸ್ವಾಮಿ, ಕಿತ್ತೂರ ಸಂಸ್ಥಾನ ಸಂಬಂಧಿಗಳಾದ ಸೋಮಶೇಖರ ದೇಸಾಯಿ, ಅಶೋಕ ದೇಸಾಯಿ, ಶಂಕರಗೌಡ ಪಾಟೀಲ, ಬಾಬಾಗೌಡಾ ಪಾಟೀಲ, ಸಿದ್ಧನಗೌಡ ಪಾಟೀಲ, ಸೋಮನಗೌಡ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಭುವನೇಶ್ವರಿ ಶಹಪೂರಕರ ವಚನ ಹಾಡಿದರು. ಸೋಮಲಿಂಗ ಮಾವಿನಕಟ್ಟಿ ಸ್ವಾಗತಿಸಿದರು.  ಬಸವರಾಜ ಗಾರ್ಗಿ ವಂದಿಸಿದರು. ಅನ್ನಪೂರ್ಣಾ ಹಿರೇಮಠ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next