ಬೆಳಗಾವಿ: ಕೊರೊನಾ ನೆಪದಲ್ಲಿ ಮೊಬೈಲ್ ದಾಸರಾಗಿದ್ದ ಜನರನ್ನು ವಿಶೇಷವಾಗಿ ಮಕ್ಕಳನ್ನು ಅದರಿಂದ ಹೊರತರುವಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಾಡೇಗಾವ್ ತಾಲೂಕಿನ ಮೋಹಿತೆ ವಡಗಾವ್ ಗ್ರಾಮದ ಮುಖಂಡರು ಯಶಸ್ವಿಯಾಗಿದ್ದಾರೆ. ಒಂದೇ ತಿಂಗಳ ಅವಧಿಯಲ್ಲಿ ಮಾಡಿದ ಗ್ರಾಮದ ಈ ಯಶೋಗಾಥೆ ಈಗ ಇಡೀ ದೇಶದ ತುಂಬಾ ಸದ್ದು ಮಾಡುತ್ತಿದೆ.
ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯರು ಗ್ರಾಮಸ್ಥರ ಸಹಕಾರದಿಂದ ತೆಗೆದುಕೊಂಡ ಈ ನಿರ್ಣಯ ಮಕ್ಕಳ ಜೀವನ ಚಿತ್ರಣವನ್ನೇ ಬದಲಾಯಿಸಿದೆ. ಮೋಹಿತೆ ವಡಗಾವ್‌ನ ಜನಸಂಖ್ಯೆ ಕೇವಲ 3 ಸಾವಿರ. 400ಕ್ಕೂ ಹೆಚ್ಚು ಮಕ್ಕಳು ಗ್ರಾಮದಲ್ಲಿ ಕಲಿಯುತ್ತಿದ್ದಾರೆ. ಕೊರೊನಾದಿಂದ 2 ವರ್ಷ ಶೈಕ್ಷಣಿಕ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿತ್ತು. ಕೊರೊನಾ ಕಡಿಮೆಯಾಗಿ ಶಾಲೆಗಳು ಎಂದಿನಂತೆ ಅರಂಭವಾದರೂ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಕಾಣಲಿಲ್ಲ. ಮಕ್ಕಳು ಮೊಬೈಲ್ ಗೀಳು
ಅಂಟಿಸಿಕೊಂಡರು. ಶಿಕ್ಷಕರು ಸಹ ಮಕ್ಕಳ ಕಲಿಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಇಂತಹ ಸ್ಥಿತಿಯಲ್ಲಿ ಮಕ್ಕಳನ್ನು ಮೊಬೈಲ್‌ದಿಂದ ಹೊರತರುವುದು ಅನಿವಾರ್ಯವಾಯಿತು. ಆಗ ಗ್ರಾಪಂ ಅಧ್ಯಕ್ಷ ವಿಜಯ ಮೋಹಿತೆ ಮೊದಲು ಆಯ್ಕೆ ಮಾಡಿಕೊಂಡಿದ್ದು ಗ್ರಾಮದಲ್ಲಿ 2 ತಾಸು ಮೊಬೈಲ್ ಮತ್ತು ಮನೆಯಲ್ಲಿನ ಟಿವಿ ಕಡ್ಡಾಯವಾಗಿ ಬಂದ್ ಎಂಬ ನಿರ್ಧಾರ. ಗ್ರಾಪಂ ಸಿಬ್ಬಂದಿ, ಶಿಕ್ಷಕರು ಮನೆ ಮನೆಗೆ ತೆರಳಿ ಹೊಸ ಪ್ರಯೋಗದ ಬಗ್ಗೆ ಜಾಗೃತಿ ಮೂಡಿಸಿದರು. ಇದಕ್ಕಾಗಿ ವಾರ್ಡ್‌ಗಳಲ್ಲಿ ಸಮಿತಿ ರಚಿಸಲಾಯಿತು.
ಪ್ರತಿದಿನ ಸಂಜೆ 7 ಗಂಟೆಗೆ ಗ್ರಾಮದಲ್ಲಿ ಸೈರನ್ ಮೊಳಗಿಸಲಾಗುತ್ತದೆ. ಸೈರನ್ ಶಬ್ದ ಕೇಳಿದ ತಕ್ಷಣ ಒಂದೂವರೆ ಗಂಟೆ ಮನೆಯಲ್ಲಿನ ಟಿವಿ ಬಂದ್ ಮಾಡಬೇಕು. ಮೊಬೈಲ್ ಬಳಕೆ ನಿಲ್ಲಿಸಬೇಕು ಎಂದು ಮನೆ ಮನೆಗೆ ತಿಳಿಸಲಾಯಿತು. ಗ್ರಾಮದ ಭೈರವನಾಥ ಮಂದಿರದ ಮೇಲೆ ಸೈರನ್ ಅಳವಡಿಸಲಾಯಿತು.
ಗ್ರಾಮಸ್ಥರ ಒಮ್ಮತದ ಒಪ್ಪಿಗೆಯಂತೆ ಆ.15ರಂದು ವಿನೂತನ ಆದೇಶ ಅನುಷ್ಠಾನಕ್ಕೆ ಬಂದಿತು. ಮೋಹಿತೆ ವಡಗಾವ್ ಗ್ರಾಮ ದೇಶಕ್ಕೇ ಮಾದರಿಯಾಗುವಂತಹ ಪ್ರಯೋಗಕ್ಕೆ ಸಾಕ್ಷಿಯಾಯಿತು. ಆರಂಭದಲ್ಲಿ ಒಂದಿಷ್ಟು ಜನ ಇದಕ್ಕೆ ಸ್ಪಂದಿಸಲಿಲ್ಲ. ಆದರೆ ಕೆಲವೇ ದಿನಗಳಲ್ಲಿ ಎಲ್ಲರೂ ಈ ನಿರ್ಧಾರಕ್ಕೆ ಒಗ್ಗಿಕೊಂಡರು.