Advertisement

ಮತ್ತೂಂದು ದಾಖಲೆ ಬರೆದ ಬೆಳಗಾವಿ ವಿಮಾನ ನಿಲ್ದಾಣ

05:08 PM Sep 08, 2020 | Suhan S |

ಬೆಳಗಾವಿ: ಕಳೆದ ಜುಲೈ ತಿಂಗಳಲ್ಲಿ ಅತೀ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸುವ ಮೂಲಕ ಕೋವಿಡ್ ಹಾವಳಿ ಅವಧಿಯಲ್ಲಿ ರಾಜ್ಯದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಜನಸಾಂದ್ರತೆ ಇರುವ ಎರಡನೇ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಪಡೆದಿದ್ದ ಬೆಳಗಾವಿ ವಿಮಾನ ನಿಲ್ದಾಣ ಈಗ ಮತ್ತೂಂದು ದಾಖಲೆಯ ಸಾಧನೆ ಮಾಡಿದೆ.

Advertisement

ಕೋವಿಡ್ ಕಷ್ಟದ ಸಮಯದಲ್ಲಿ ಅತೀ ಹೆಚ್ಚುಪ್ರಯಾಣಿಕರಿಗೆ ಸೇವೆ ನೀಡುವ ಮೂಲಕ ಬೆಳಗಾವಿವಿಮಾನ ನಿಲ್ದಾಣ ರಾಜ್ಯದಲ್ಲಿ ಬೆಂಗಳೂರು ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಅತೀ ಹೆಚ್ಚು ಜನಸಾಂದ್ರತೆ ಇರುವ ನಿಲ್ದಾಣ ಎಂದು ಗುರುತಿಸಿಕೊಂಡಿದೆ. ಪ್ರಯಾಣಿಕರ ಸಂಚಾರದಿಂದ ವಿಮಾನ ನಿಲ್ದಾಣಗಳ ನಡುವೆ ಪೈಪೋಟಿ ಇದೆ ಎನ್ನಲಾಗದು. ಆದರೆ ಈ ಹಿಂದೆ ಪ್ರಯಾಣಿಕರಿಲ್ಲದೆ ನಷ್ಟದಲ್ಲಿದ್ದ ಬೆಳಗಾವಿ ವಿಮಾನ ನಿಲ್ದಾಣ ಈಗ ಅತೀ ಹೆಚ್ಚು ಪ್ರಯಾಣಿಕರ ಸಂಚಾರದ ಮೂಲಕ ರಾಜ್ಯದಲ್ಲಿ ಮಹತ್ವದ ಸ್ಥಾನ ಗಳಿಸಿರುವುದು ಹೆಮ್ಮೆ ಪಡುವಂತೆ ಮಾಡಿದೆ. ಈ ಭಾಗದ ಉದ್ಯಮಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ವಿಮಾನ ನಿಲ್ದಾಣ ಪ್ರಾಧಿಕಾರದ ಅಂಕಿ-ಅಂಶಗಳ ಪ್ರಕಾರ ಬೆಳಗಾವಿ ವಿಮಾನ ನಿಲ್ದಾಣದಿಂದ ಕಳೆದ ಆರು ತಿಂಗಳ ಅವಧಿಯಲ್ಲಿ 50 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಬೆಳಗಾವಿಯಿಂದ ಹೊರ ರಾಜ್ಯಗಳಿಗೆ ಹಾಗೂ ಬೇರೆ-ಬೇರೆ ರಾಜ್ಯಗಳಿಂದ ಬೆಳಗಾವಿಗೆ ಪ್ರಯಾಣ ಮಾಡಿದ್ದಾರೆ. ಈ ಮೂಲಕ ಬೆಳಗಾವಿ ವಿಮಾನ ನಿಲ್ದಾಣ ತನ್ನ ಹಿಂದಿನ ಎಲ್ಲ ದಾಖಲೆಗಳನ್ನು ಹಿಂದಿಕ್ಕಿದೆ. ಇದು ಗಡಿನಾಡಿಗೆ ಹೆಮ್ಮೆ ಉಂಟುಮಾಡುವ ಸಂಗತಿ.

ದೆಹಲಿ, ಚೆನ್ನೈಗೂ ಹಾರಲಿದೆ ವಿಮಾನ: ಈಗಾಗಲೇ ಬೆಂಗಳೂರು, ಮುಂಬೈ, ಹೈದರಾಬಾದ್‌, ಪುಣೆ, ಅಹ್ಮದಾಬಾದ್‌, ಮೈಸೂರು ಮತ್ತು ಇಂದೋರ್‌ ನಗರಗಳಿಗೆ ವಿಮಾನ ಸೇವೆ ನೀಡುತ್ತಿರುವ ಬೆಳಗಾವಿಯಿಂದ ದೆಹಲಿ ಹಾಗೂ ಚೆನ್ನೈಗೆ ವಿಮಾನ ಆರಂಭಿಸಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆ. ವಿಮಾನ ನಿಲ್ದಾಣದ ಪ್ರಯಾಣಿಕರ ದಾಖಲೆ ನೋಡಿದರೆ ಈ ಬೇಡಿಕೆಯೂ ಬಹಳ ಬೇಗ ಕಾರ್ಯರೂಪಕ್ಕೆ ಬರಲಿರುವ ಲಕ್ಷಣಗಳು ಕಾಣುತ್ತಿವೆ.

ಬೆಳಗಾವಿ ವಿಮಾನ ನಿಲ್ದಾಣ ಜನದಟ್ಟಣೆಯಿಂದ ಕೂಡಿರುವುದಕ್ಕೆ ಉಡಾನ್‌ ಯೋಜನೆ ಕಾರಣ ಎಂಬುದು ವಿಮಾನ ನಿಲ್ದಾಣದ ಅಧಿಕಾರಿಗಳ ಹೇಳಿಕೆ. ಇದೇ ಕಾರಣದಿಂದ ಈ ವಿಮಾನ ನಿಲ್ದಾಣ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿನ ಪ್ರಯಾಣಿಕರ ಸಂಖ್ಯೆಯ ದಾಖಲೆ ಮುರಿದಿದೆ. ಒಂದು ವರ್ಷದ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ. 2016-17ರಲ್ಲಿ ಬೆಳಗಾವಿ ವಿಮಾನ ನಿಲ್ದಾಣದಿಂದ 421 ವಿಮಾನಗಳ ಮೂಲಕ 95 ಸಾವಿರ ಪ್ರಯಾಣಿಕರು ಪ್ರಯಾಣ ಮಾಡಿದ್ದರೆ, 2017-18 ರಲ್ಲಿ 1.22 ಲಕ್ಷ ಪ್ರಯಾಣಿಕರು 2182 ವಿಮಾನಗಳ ಮೂಲಕ ಹಾಗೂ 2018-19ರಲ್ಲಿ 1026 ವಿಮಾನಗಳ ಮೂಲಕ 1.0  ಲಕ್ಷ ಪ್ರಯಾಣಿಕರು ಇದರ ಸೇವೆ ಪಡೆದುಕೊಂಡಿದ್ದರು. ಆದರೆ, 2019-20ರಲ್ಲಿ ಈ ಎಲ್ಲ ಅಂಕಿ-ಅಂಶಗಳ ದಾಖಲೆ ಮೀರಿ 2.78 ಲಕ್ಷ ಪ್ರಯಾಣಿಕರು ಈ ನಿಲ್ದಾಣವನ್ನು ಬಳಸಿಕೊಂಡಿದ್ದಾರೆ ಎನ್ನುತ್ತಾರೆ ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶಕುಮಾರ ಮೌರ್ಯ.

Advertisement

ಕೋವಿಡ್ ಸಂಕಷ್ಟದಲ್ಲಿ ಆರ್ಥಿಕ ಸ್ಥಿತಿ ಕುಸಿದಿರುವಾಗ ಪ್ರಯಾಣಿಕರು ಬರುವರೇ ಎಂಬ ಅನುಮಾನ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಕಾಡಿತ್ತು. ಆದರೆ ಜೂನ್‌ದಿಂದ ಆಗಸ್ಟ್‌ನಲ್ಲಿ ಕಂಡು ಬಂದ ಪ್ರಯಾಣಿಕರ ಸಂಖ್ಯೆ ಈ ಎಲ್ಲ ಅನುಮಾನಗಳನ್ನು ಪರಿಹರಿಸಿದೆ. ಮೇ 25ರಿಂದ ಲಾಕ್‌ಡೌನ್‌ ತೆರವಾಗಿ ವಿವಿಧ ರಾಜ್ಯಗಳಿಗೆ ವಿಮಾನ ಸಂಚಾರ ಆರಂಭವಾದ ನಂತರ ಮೇ 25ರಿಂದ 31ರವರೆಗೆ 445 ಪ್ರಯಾಣಿಕರು ಪ್ರಯಾಣ ಮಾಡಿದ್ದರೆ, ಜೂನ್‌ ತಿಂಗಳಲ್ಲಿ 10,346 ಪ್ರಯಾಣಿಕರು 386 ವಿಮಾನಗಳ ಮೂಲಕ ಪ್ರಯಾಣ ಮಾಡಿದ್ದಾರೆ. ಈ ಸಂಖ್ಯೆ ಜುಲೈ ತಿಂಗಳಲ್ಲಿ ನಾಲ್ಕು ಸಾವಿರ ಹೆಚ್ಚಾಗಿದೆ. ಅಂದರೆ 14,500 ಪ್ರಯಾಣಿಕರು 443 ವಿಮಾನಗಳ ಮೂಲಕ ವಿವಿಧ ರಾಜ್ಯಗಳಿಗೆ ಪ್ರಯಾಣ ಮಾಡಿದ್ದಾರೆ ಹಾಗೂ ಅಲ್ಲಿಂದ ಬೆಳಗಾವಿಗೆ ಆಗಮಿಸಿದ್ದಾರೆ. ಆಗಸ್ಟ್‌ ತಿಂಗಳಲ್ಲಿ ಅತೀ ಹೆಚ್ಚು ಅಂದರೆ 18,280 ಪ್ರಯಾಣಿಕರು ಈ ನಿಲ್ದಾಣದ ಸೇವೆ ಬಳಸಿಕೊಂಡಿದ್ದಾರೆ. ಇದೇ ವಿಶ್ವಾಸದ ಮೇಲೆ ಬೆಳಗಾವಿ ವಿಮಾನ ನಿಲ್ದಾಣ ಸೆಪ್ಟೆಂಬರ್‌ ತಿಂಗಳಲ್ಲಿ 22 ಸಾವಿರ ಪ್ರಯಾಣಿಕರನ್ನು ನಿರೀಕ್ಷೆ ಮಾಡಿದೆ.

ಶಿರಡಿ, ನಾಸಿಕ್‌ಗೂ ಸೇವೆ :  ಕಳೆದ ಜನವರಿಯಲ್ಲಿ ಉಡಾನ್‌-3ನೇ ಹಂತದ ಯೋಜನೆಯಲ್ಲಿ ಆಯ್ಕೆಯಾದ ಬೆಳಗಾವಿ ಈ ಯೋಜನೆಯಡಿ 18 ವಿಮಾನ ಸಂಸ್ಥೆಗಳ ಮೂಲಕ ಬೆಂಗಳೂರು, ಮುಂಬೈ, ಅಹ್ಮದಾಬಾದ್‌, ಹೈದರಾಬಾದ್‌ ಸೇರಿದಂತೆ ಒಟ್ಟು 13 ಮಾರ್ಗಗಳನ್ನು ಪಡೆದುಕೊಂಡಿತು. ನಂತರ ಫೆಬ್ರವರಿಯಲ್ಲಿ ಸ್ಟಾರ್‌ ಏರ್‌ಲೈನ್‌ ಬೆಂಗಳೂರಿಗೆ ತನ್ನ ಮೊದಲ ವಿಮಾನ ಸೇವೆ ಆರಂಭ ಮಾಡಿತು. ನಂತರ ಒಂದೊಂದೇ ಸಂಸ್ಥೆಗಳ ಮೂಲಕ ಬೆಳಗಾವಿ ದೇಶದ ಎಳು ನಗರಗಳಿಗೆ ತನ್ನ ಸೇವೆ ವಿಸ್ತರಿಸಿಕೊಂಡಿತು. ಈಗ ಸದ್ಯದಲ್ಲೇ ಸ್ಟಾರ್‌ ಏರ್‌ ಇಲ್ಲಿಂದ ಶಿರಡಿ, ನಾಸಿಕ್‌ ಮೊದಲಾದ ನಗರಗಳಿಗೆ ತನ್ನ ಸೇವೆ ಆರಂಭಿಸಲಿದೆ.

ಕೋವಿಡ್ ಸಮಸ್ಯೆ ಮಧ್ಯೆಯೂ ಬೆಳಗಾವಿ ವಿಮಾನ ನಿಲ್ದಾಣ ಸಾಕಷ್ಟು ನಿರೀಕ್ಷೆ ಹುಟ್ಟಿಸುವಂತಹ ಪ್ರಗತಿ ಸಾಧಿಸಿದೆ. ನಮ್ಮ ಸೇವೆ ಜನರಿಗೆ ಇಷ್ಟವಾಗಿದೆ. ನಮಗೆ ಇನ್ನೂ ಹೆಚ್ಚಿನ ವಿಶ್ವಾಸ ಮೂಡಿಸಿದೆ. ಡಿಸೆಂಬರ್‌ನಲ್ಲಿ ಚೆನ್ನೈ ಸೇರಿದಂತೆ ಇನ್ನೂ ಕೆಲವು ರಾಜ್ಯಗಳಿಗೆ ವಿಮಾನ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ.- ರಾಜೇಶಕುಮಾರ ಮೌರ್ಯ, ಬೆಳಗಾವಿ ವಿಮಾನ ನಿಲ್ದಾಣ ನಿರ್ದೇಶಕ

 

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next