Advertisement
ಕಾಪು: ಕಾಪು ತಾಲೂಕಿನ ಬೆಳಪುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಉಡುಪಿ ಜಿಲ್ಲೆಯಲ್ಲೇ ಪ್ರಥಮದ್ದಾದ ಸುಮಾರು 141.38 ಕೋ. ರೂ. ವೆಚ್ಚದ ಅತ್ಯಾಧುನಿಕ ವಿಜ್ಞಾನ ಸಂಶೋಧನ ಕೇಂದ್ರ ಮತ್ತು ಸ್ನಾತಕೋತ್ತರ ಕೇಂದ್ರದ ಕಾಮಗಾರಿ ಭರದಿಂದ ಸಾಗುತ್ತಿದೆ.
2014-15ರಲ್ಲಿ ಬೆಳಪು ಗ್ರಾ.ಪಂ. ವ್ಯಾಪ್ತಿಯಲ್ಲಿ 22 ಎಕರೆ ಜಮೀನಿನಲ್ಲಿ ಬೆಳಪುವಿನ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಮಂಗಳೂರು ವಿವಿ ಮತ್ತು ಕರ್ನಾಟಕ ಹೌಸಿಂಗ್ ಬೋರ್ಡ್ ನಡುವೆ 2018ರ ಮಾರ್ಚ್ ತಿಂಗಳಲ್ಲಿ ಒಪ್ಪಂದವಾಗಿತ್ತು. 2021ಕ್ಕೆ ಕೇಂದ್ರ ಕಾರ್ಯಾರಂಭ ?
ಇಲಾಖೆ ನಿಯಮದಂತೆ ಡಿಸೆಂಬರ್ ಹೊತ್ತಿಗೆ ಪ್ರಥಮ ಹಂತದ ಕಾಮಗಾರಿ ಪೂರ್ಣಗೊಳ್ಳಬೇಕಿದ್ದು ಅಂದುಕೊಂಡಂತೆಯೇ ನಡೆದಲ್ಲಿ 2021ರ ಶೈಕ್ಷಣಿಕ ವರ್ಷದಿಂದಲೇ ಸ್ನಾತಕೋತ್ತರ ಅಧ್ಯಯನ ಕೇಂದ್ರದ ತರಗತಿಗಳು ಕಾರ್ಯಾರಂಭವಾಗುವ ಸಾಧ್ಯತೆ ಇದೆ..
Related Articles
ಮಂಗಳೂರು ವಿ.ವಿ. ಅಡಿಯಲ್ಲಿ ಕೊಡಗು ಜಿಲ್ಲೆಯ ಚಿಕ್ಕಳವಾರುವಿನಲ್ಲಿ ಈಗಾಗಲೇ ಸ್ನಾತಕೋತ್ತರ ಅಧ್ಯಯನ ಕೇಂದ್ರವಿದ್ದು ಸ್ನಾತಕೋತ್ತರ ಅಧ್ಯಯನಾಸಕ್ತ ಜಿಲ್ಲೆಯ ಯುವಜನರು ಕೊಣಾಜೆಯಲ್ಲಿರುವ ವಿವಿ ಕೇಂದ್ರವನ್ನೇ ಆಶ್ರಯಿಸಬೇಕಿತ್ತು. ಈಗ ಬೆಳಪುವಿನಲ್ಲಿ ನಿರ್ಮಾಣವಾಗುತ್ತಿರುವುದರಿಂದ ಅಧ್ಯಯನಾಸಕ್ತರಿಗೆ ಇಲ್ಲೇ ಅವಕಾಶ ದೊರೆಯಲಿದೆ.
Advertisement
ನಡೆಯುತ್ತಿರುವ ಕಾಮಗಾರಿಗಳುಆಡಳಿತ ಸೌಧ ಕಟ್ಟಡ, ಅತಿಥಿ ಗೃಹ-2, ಅಧಿಕಾರಿಗಳ ವಸತಿ ಗೃಹ, ಬೋಧಕೇತರ ಸಿಬಂದಿಗೆ ವಸತಿ ಗೃಹ, ವಿಜ್ಞಾನ ಸಂಕೀರ್ಣ ಕಟ್ಟಡ, ಸಂಶೋಧನ ಕೇಂದ್ರ, ನಿರ್ದೇಶಕರ ವಸತಿಗೃಹ, ಉಪಾಹಾರ ಗೃಹ, ರಸ್ತೆ ಮತ್ತು ಭೂ ಅಭಿವೃದ್ಧಿ ಕಾಮಗಾರಿ, ನೀರು ಸಂಗ್ರಹಣ ಘಟಕ, ಸೆಪ್ಟಿಕ್ ಟ್ಯಾಂಕ್ ಹಾಗೂ ಭೋಧಕೇತರ ಸಿಬಂದಿಗೆ ಬಿ ಮಾದರಿ ವಸತಿಗೃಹ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಬೆಳಪು ಸ್ನಾತಕೋತ್ತರ ಕೇಂದ್ರ ಶೀಘ್ರ ತಲೆ ಎತ್ತಲು ಸರಕಾರ ಕೂಡಲೇ ಅನುದಾನದ ವ್ಯವಸ್ಥೆಯನ್ನು ಕಲ್ಪಿಸಬೇಕೆನ್ನುವುದೇ ಆಶಯ. ಸರ್ವೇ ಮೂಲಕ ಆಯ್ಕೆ
ಪ್ರಥಮ ಹಂತದಲ್ಲಿ ವಾಣಿಜ್ಯ, ವ್ಯವಹಾರ ಆಡಳಿತ, ವಿಜ್ಞಾನ (ರಸಾಯನಶಾಸ್ತ್ರ, ಭೌತಶಾಸ್ತ್ರ, ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್) ಮತ್ತು ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿಭಾಗಗಳನ್ನು ತೆರೆಯಲು ವಿವಿ ಚಿಂತನೆ ನಡೆಸಿದೆ. ಇದರೊಂದಿಗೆ ಉಡುಪಿ ಜಿಲ್ಲೆಯ ಯುವ ಜನರ ಬೇಡಿಕೆ ಆಧರಿಸಿ ಯಾವ ವಿಷಯಗಳ ಕೇಂದ್ರಗಳನ್ನು ತೆರೆಯಬೇಕು ಎನ್ನುವುದರ ಬಗ್ಗೆ ಕಾಲೇ ಜುಗಳಲ್ಲಿ ಸರ್ವೇ ನಡೆಸಲು ವಿವಿ ಚಿಂತನೆ ನಡೆಸಿದೆ. 2.64 ಕೋಟಿ ರೂ. ವೆಚ್ಚದ ಆವರಣ ಗೋಡೆ
ಕೇಂದ್ರದ ಜಮೀನು ಒತ್ತುವರಿಯಾಗದಂತೆ ನೋಡಿಕೊಳ್ಳಲು ಕೂಡಲೇ ಆವರಣ ಗೋಡೆ ನಿರ್ಮಾಣವಾಗಬೇಕಿದ್ದು, ಅದಕ್ಕಾಗಿ 2.64 ಕೋಟಿ ರೂ. ಅನುದಾನ ಬೇಕಿದೆ. ಈ ಕಾಮಗಾರಿಗೆ ಆದ್ಯತೆ ನೀಡಿ, ಪ್ರಥಮದಲ್ಲೇ ನಡೆಸುವಂತೆ ಕರ್ನಾಟಕ ಹೌಸಿಂಗ್ ಬೋರ್ಡ್ ಮತ್ತು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಮಂಗಳೂರು ವಿವಿ ಕುಲಪತಿ ಡಾ| ಸುಬ್ರಹ್ಮಣ್ಯ ಎಡಪಡಿತ್ತಾಯ ಉದಯವಾಣಿಗೆ ತಿಳಿಸಿದ್ದಾರೆ. 141.38 ಕೋಟಿ ರೂ. ವೆಚ್ಚ
ಕೇಂದ್ರವು 141.38 ಕೋಟಿ ರೂ. ವೆಚ್ಚದ ಬೃಹತ್ ಯೋಜನೆಯಾಗಿದ್ದು, ಈಗಾಗಲೇ 2017-18 ಮತ್ತು 2018-19ರಲ್ಲಿ 33 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಪ್ರಥಮ ಹಂತದ ಕಾಮಗಾರಿ ಪೂರ್ಣಗೊಳಿಸಲು 80 ಕೋಟಿ ರೂ. ಅನುದಾನದ ಅಗತ್ಯವಿದೆ. ಉಳಿದ ಹಣವನ್ನು ವಿಶ್ವ ವಿದ್ಯಾಲಯದ ಆಂತರಿಕ ಸಂಪನ್ಮೂಲದಿಂದ ಭರಿಸಿಕೊಳ್ಳಬೇಕಿದೆ. ಇದರಲ್ಲಿ 62.33 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿಯನ್ನು ತಯಾರಿಸಿ 2017ರಲ್ಲಿ ಕಟ್ಟಡ ಸಮಿತಿ ಸಭೆ ನಡೆಸಿ, ಬಳಿಕ ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆಯನ್ನೂ ಪಡೆಯಲಾಗಿದೆ. ಪ್ರಗತಿಯಲ್ಲಿ
ಬೆಳಪು ಗ್ರಾಮದ ಜನತೆಯ ದಶಕಗಳ ಕನಸಾದ ವಿಜ್ಞಾನ ಸಂಶೋಧನಾ ಕೇಂದ್ರದ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಡಾ| ಎಸ್. ಎಡಪಡಿತ್ತಾಯ ಅವರು ಕುಲಸಚಿವರಾಗಿದ್ದಾಗ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಈಗ ಅವರೇ ಕುಲಪತಿಗಳಾಗಿರುವುದರಿಂದ ನಮ್ಮ ನಿರೀಕ್ಷೆಗಳು ಹೆಚ್ಚಿವೆ.
-ಡಾ| ದೇವಿಪ್ರಸಾದ್ ಶೆಟ್ಟಿ, ಅಧ್ಯಕ್ಷರು, ಬೆಳಪು ಗ್ರಾಮ ಪಂಚಾಯತ್ ಅನುದಾನ ಅಗತ್ಯವಿದೆ
ಕೇಂದ್ರದಲ್ಲಿ ಅತ್ಯಾಧುನಿಕ ವಿಜ್ಞಾನ ಕೇಂದ್ರಕ್ಕೆ ಪರಿಕರಗಳ ಜೋಡಣೆಗೆ ಕೋಟ್ಯಂತರ ರೂ. ಅನುದಾನದ ಅಗತ್ಯತೆಯಿದ್ದು, ಅದನ್ನು ಮುಂದಿನ ವರ್ಷಗಳಲ್ಲಿ ಜೋಡಿಸಿಕೊಳ್ಳಲು ಪ್ರಯತ್ನಿಸಲಾಗುವುದು. ಪ್ರಾರಂಭದಲ್ಲಿ ಸ್ನಾತಕೋತ್ತರ ಅಧ್ಯಯನ ತರಗತಿಗಳನ್ನು ಆರಂಭಿಸಲಾಗುವುದು.
-ಡಾ| ಸುಬ್ರಹ್ಮಣ್ಯ ಎಡಪಡಿತ್ತಾಯ,
ಮಂಗಳೂರು ವಿವಿ ಕುಲಪತಿ -ರಾಕೇಶ್ ಕುಂಜೂರು