ಕಾಪು: ಕೇಂದ್ರ ಸರಕಾರದ ಮಹತ್ವದ ಯೋಜನೆ ನಗದು ರಹಿತ ವ್ಯವಹಾರದ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ವಿಜಯ ಬ್ಯಾಂಕ್‌ನ ಮಾನವ ಸಂಪದ ಅಧಿಕಾರಿ ವಿಜಯ್ ಬಹದ್ದೂರ್, ಶಿವಶಂಕರ್ ಮತ್ತು ವಿನಾಯಕ ಕಾಮತ್ ಅವರು ಶಿವಮೊಗ್ಗದಿಂದ ಮಂಗಳೂರು ವರೆಗೆ ಕೈಗೊಂಡಿರುವ ಸೈಕಲ್ ಜಾಥಾ ವಿಜಯ ಬ್ಯಾಂಕ್‌ನಿಂದ ಪ್ರಥಮ ಡಿಜಿಟಲ್ ಗ್ರಾಮ ಎಂದು ಘೋಷಿಸಲ್ಪಟ್ಟ ಬೆಳಪುವಿಗೆ ಫೆ. 20ರಂದು ತಲುಪಿತು.
ವಿಜಯ ಬ್ಯಾಂಕ್ ದೇಶದಲ್ಲಿ ನೂರು ಗ್ರಾಮಗಳನ್ನು ಡಿಜಿಟಲ್ ಗ್ರಾಮಗಳನ್ನಾಗಿ ಪರಿವರ್ತಿಸಲು ಪಣ ತೊಟ್ಟಿದ್ದು, ಅದರಂತೆ ಈಗಾಗಲೇ ವಿವಿಧ ಕಾರ್ಯ ಚಟುವಟಿಕೆಗಳನ್ನು ನಡೆಸಿ, ಬೆಳಪು ಗ್ರಾಮವನ್ನು ಕರಾವಳಿಯ ಪ್ರಥಮ ಡಿಜಿಟಲ್ ಗ್ರಾಮವನ್ನಾಗಿ ಘೋಷಿಸುವುದಾಗಿ ಘೋಷಣೆ ಮಾಡಿತ್ತು.
ಜಿಲ್ಲೆಯ ಪ್ರಥಮ ಡಿಜಿಟಲ್ ಗ್ರಾಮ: ವಿಜಯ ಬ್ಯಾಂಕ್ ಕ್ಷೇತ್ರೀಯ ಕಾರ್ಯಾಲಯದ ಉಪ ಮಹಾಪ್ರಬಂಧಕ ಎಂ.ಜೆ. ನಾಗರಾಜ್ ಮಾತನಾಡಿ, ವಿಜಯ ಬ್ಯಾಂಕ್ ಮೂಲಕ ಬೆಳಪು ಗ್ರಾಮಸ್ಥರಿಗೆ ಡಿಜಿಟಲ್ ಬ್ಯಾಂಕ್ ಬಗ್ಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಡಿಜಿಟಲ್ ಗ್ರಾಮ ಘೋಷಣೆಗೆ ಪೂರಕ ವಾಗುವಂತೆ ಗ್ರಾಮದಲ್ಲಿ ಉಚಿತ ವೈಫೈ ವ್ಯವಸ್ಥೆ, ಇ ಮೊಬೈಲ್ ಸೇವೆ, ಗ್ರಾಮದ ಪ್ರತೀ ಮನೆಗೂ ಬ್ಯಾಂಕ್ ಖಾತೆ ಮಾಡಲಾಗಿದೆ. ಇದರಿಂದ ಬೆಳಪು ಗ್ರಾಮ ಉಡುಪಿ ಜಿಲ್ಲೆಯ ಪ್ರಪ್ರಥಮ ಡಿಜಿಟಲ್ ಗ್ರಾಮವಾಗಿ ಮಾರ್ಪಾಡಾಗಿದೆ ಎಂದರು.
ಬೆಳಪು ಗ್ರಾಮದಲ್ಲಿ ಉತ್ತಮ ಸ್ಪಂದನೆ: ಜಾಥಾದ ನೇತೃತ್ವ ವಹಿಸಿರುವ ವಿಜಯ ಬಹದ್ದೂರ್ ಮಾತನಾಡಿ, ಕೇಂದ್ರ ಸರಕಾರ 500 ರೂ. ಮತ್ತು 1,000 ರೂ. ನೋಟುಗಳ ಅಪಮೌಲ್ಯದ ಹಿನ್ನೆಲೆ ಯಲ್ಲಿ ದೇಶದಲ್ಲಿ ನಗದು ರಹಿತ ವ್ಯವಹಾರ ಪ್ರಾರಂಭವಾಯಿತು. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನಾವು ಮೂವರು ಸೇರಿ ಸೈಕಲ್ ಜಾಥಾ ಪ್ರಾರಂಭಿಸಿದ್ದೇವೆ. ಡಿಜಿಟಲ್ ಗ್ರಾಮ ಘೋಷಣೆಗೆ ಪೂರಕವಾಗಿ ಬೆಳಪು ಗ್ರಾಮದಲ್ಲಿ ಉತ್ತಮ ಸ್ಪಂದನೆ ದೊರಕಿದ್ದು, ಗ್ರಾಮದ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿರುವುದು ಶ್ಲಾಘನೀಯ ಎಂದರು.
ಡಿಜಿಟಲ್ ಗ್ರಾಮವಾಗಿ ರೂಪಾಂತರಗೊಂಡ ಬೆಳಪು ಗ್ರಾಮಕ್ಕೆ ಆಗಮಿಸಿದ ಸೈಕಲ್ ಜಾಥಾವನ್ನು ಬೆಳಪು ಗ್ರಾ.ಪಂ. ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಸೈಕಲ್ ಜಾಥಾದ ನೇತೃತ್ವ ವಹಿಸಿ¨ª ವಿಜಯ ಬಹದ್ದೂರ್ ಶಾಲಾ ಮಕ್ಕಳಿಗೆ ಡಿಜಿಟಲ್ ಗ್ರಾಮದ ಬಗ್ಗೆ ಮತ್ತು ಇ ಬ್ಯಾಂಕಿಂಗ್ ಬಗ್ಗೆ ಮಾಹಿತಿ ನೀಡಿದರು.
ವಿಜಯ ಬ್ಯಾಂಕ್ ಸಿಬಂದಿ, ಗ್ರಾ.ಪಂ. ಸದಸ್ಯರು, ಶಾಲಾ ಶಿಕ್ಷಕ, ಶಿಕ್ಷಕಿಯರು, ವಿದ್ಯಾರ್ಥಿಗಳು, ನಾಗರಿಕರು ಭಾಗವಹಿಸಿದ್ದರು.