ಈಗಷ್ಟೇ ಬೇಸಿಗೆ ಕಾಲ ಶುರುವಾಗುತ್ತಿದೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಬೇಸಿಗೆಯ ಆರಂಭದಲ್ಲಿಯೇ ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗಿದೆ. ಇದಕ್ಕೆಲ್ಲ ಕಾರಣ ಪರಿಸರ ನಾಶ ಹಾಗೂ ಜಾಗತಿಕ ತಾಪಮಾನದ ಏರಿಕೆ ಎಂಬುದು ಎಲ್ಲರಿಗೂ ಗೊತ್ತಿರುವ ವಾಸ್ತವ ಅಂಶ. ಇದೇ ವೇಳೆ ಜಾಗತಿಕ ತಾಪಮಾನ ಏರಿಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ “ಬೆಳಕೆ’ ಎಂಬ ಮ್ಯೂಸಿಕ್ ವಿಡಿಯೋ ಹಾಡು ಬಿಡುಗಡೆಯಾಗಿದೆ.
ಈಗಾಗಲೇ ಕನ್ನಡದಲ್ಲಿ “ಹೊಂಬಣ್ಣ’, “ಎಂಥ ಕಥೆ ಮಾರಾಯ’, “ತಿಮ್ಮನ ಮೊಟ್ಟೆಗಳು’ ಸಿನಿಮಾಗಳನ್ನು ನಿರ್ದೇಶಿಸಿರುವ ರಕ್ಷಿತ್ ತೀರ್ಥಹಳ್ಳಿ ನಿರ್ದೇಶಿಸಿರುವ “ಬೆಳಕೆ’ ಹಾಡಿಗೆ ಆದರ್ಶ ಅಯ್ಯಂಗಾರ್ ಧ್ವನಿಯಾಗುವುದರ ಜೊತೆಗೆ ಅಭಿನಯವನ್ನು ಮಾಡಿದ್ದಾರೆ. ಇತ್ತೀಚೆಗೆ ಈ ಹಾಡು ಬಿಡುಗಡೆಯಾಗಿದ್ದು, ಇದೇ ವೇಳೆ ಮಾತಿಗೆ ಸಿಕ್ಕ ತಂಡ ಈ ಗೀತೆಯ ವಿಶೇಷತೆಗಳನ್ನು ಪರಿಚಯಿಸಿತು.
“ಈಗಾಗಲೇ ನಮ್ಮ “ಶ್ರೀಕೃಷ್ಣ ಪ್ರೊಡಕ್ಷನ್ಸ್’ ಮೂಲಕ ಈಗಾಗಲೇ ಜನರಿಗೆ ಉತ್ತಮ ಸಂದೇಶ ನೀಡುವ ವಿಡಿಯೋ ಹಾಡುಗಳನ್ನು ಬಿಡುಗಡೆ ಮಾಡಿದ್ದೇವೆ. ಮತ್ತೂಂದು ಉತ್ತಮ ಸಂದೇಶವುಳ್ಳ ಹಾಡನ್ನು ನಿರ್ಮಿಸುವ ಸಲುವಾಗಿ ನಮ್ಮ ತಂಡದ ಜೊತೆ ಚರ್ಚಿಸಿ ಜಾಗತಿಕ ತಾಪಮಾನದ ಕುರಿತು ಜನರಿಗೆ ಜಾಗೃತಿ
ಮೂಡಿಸುವ ಈ ಮ್ಯೂಸಿಕ್ ವಿಡಿಯೋ ಮಾಡಿದ್ದೇವೆ’ ಎಂದರು ಹಾಡಿಗೆ ಧ್ವನಿಯಾಗಿ ಜೊತೆಗೆ ಅಭಿನಯಿಸಿರುವ ಆದರ್ಶ್ ಅಯ್ಯಂಗಾರ್. ಪ್ರಮೋದ್ ಮರವಂತೆ ಬರೆದಿರುವ ಈ ಹಾಡಿಗೆ ಹೇಮಂತ್ ಜೋಯಿಸ್ ಸಂಗೀತ ನೀಡಿದ್ದಾರೆ. ಗುರುಪ್ರಸಾದ್ ನಾರ್ನಾಡ್ ಛಾಯಾಗ್ರಹಣ, ಸುಧೀರ್ ಎಸ್. ಜೆ ಸಂಕಲನದಲ್ಲಿ ಈ ಹಾಡು ಮೂಡಿಬಂದಿದೆ.
“ಈ ಹಿಂದೆ ಬೆಂಗಳೂರಿನಲ್ಲಿ ತಾಪಮಾನ ಕಡಿಮೆ ಇರುತ್ತಿತ್ತು. ಈಗ ಬೆಂಗಳೂರು, ಮಲೆನಾಡು ಹಾಗೂ ಉತ್ತರ ಕರ್ನಾಟಕ ಎಲ್ಲಾ ಕಡೆ ಹೆಚ್ಚು ಕಡಿಮೆ ಒಂದೇ ತಾಪಮಾನವಿರುತ್ತದೆ. ಇದಕ್ಕೆ ಕಾರಣ ಪರಿಸರ ನಾಶ. ಗಿಡ ಬೆಳಸುವುದು ಹಾಗೂ ಈಗಿರುವ ಗಿಡಗಳನ್ನು ಉಳಿಸುವುದೆ ಇದಕ್ಕೆ ಪರಿಹಾರ. ಇಲ್ಲದಿದ್ದರೆ ಮುಂದೆ ಇನ್ನೂ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಇಂತಹ ವಿಷಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಹಾಡು ಮಾಡಿದ್ದೇವೆ’ ಎಂಬುದು ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಮಾತು.
“ನಾನು ಸಾಕಷ್ಟು ಚಿತ್ರಗಳಿಗೆ ಹಾಡು ಬರೆಯುತ್ತಿದ್ದೇನೆ. ಆದರೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಈ ಹಾಡನ್ನು ಬರೆಯಲು ತುಂಬಾ ಸಂತೋಷವಾಯಿತು. ಇತ್ತೀಚೆಗೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ದಯವಿಟ್ಟು ಎಲ್ಲರೂ ತಮ್ಮ ಮನೆಯ ಮಹಡಿಯಲ್ಲಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ’ ಎಂದರು ಗೀತಸಾಹಿತಿ ಪ್ರಮೋದ್ ಮರವಂತೆ.