Advertisement

ಕನ್ನಡ ಭಾಷೆ ಬಳಸಿ-ಬೆಳೆಸುವ ಕೆಲಸವಾಗಲಿ: ನಾಗರಾಜ

06:31 PM Mar 16, 2020 | Naveen |

ಬೀಳಗಿ: ಶ್ರದ್ಧೆಯಿಂದ ತತ್ವಗಳ ಆಚರಣೆ ಮಾಡಿದಾಗ ಸತ್ಯ, ಪ್ರಾಮಾಣಿಕತೆಯ ನಡೆಗಳು ನಮ್ಮ ಬದುಕನ್ನು ಕೈ ಹಿಡಿದು ನಡೆಸುತ್ತವೆ. ಮತ್ತೊಬ್ಬರನ್ನು ಬದಲಿಸುವುದಕ್ಕಿಂತ ಮುಂಚೆ, ನಮ್ಮನ್ನು ನಾವು ಬದಲಿಸಿಕೊಳ್ಳುವ ಮೂಲಕ ಯುವ ಪೀಳಿಗೆಗೆ ಸ್ಪೂರ್ತಿಯಾಗಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು.

Advertisement

ಪಟ್ಟಣದ ರುದ್ರಗೌಡ ಪಾಟೀಲ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಭಾ ಭವನದಲ್ಲಿ ಏರ್ಪಡಿಸಿದ ಕನ್ನಡ ಪದ ಸಂಪತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆಸಕ್ತಿ, ಉತ್ಸಾಹವಿರುವಲ್ಲಿ ಏಕಾಗ್ರತೆ ಬರುತ್ತದೆ. ಏಕಾಗ್ರತೆಯಿಂದ ಕೇಳುವುದು ಮನನವಾಗುತ್ತದೆ. ಅರ್ಥ ಮಾಡಿಕೊಂಡಿದ್ದನ್ನು ಸಂದರ್ಭನುಸಾರ ಪಾಲಿಸಬೇಕು. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಕುರಿತು ಬಾಗೇಪಲ್ಲಿಯ ಕನ್ನಡ ಸಂಸ್ಕೃತಿ ಸೇವಾ ಭಾರತಿ ಸಂಘಟನೆ ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಬಾಗೇಪಲ್ಲಿಯ ಕನ್ನಡ ಸಂಸ್ಕೃತಿ ಸೇವಾ ಭಾರತಿ ಸಂಸ್ಥಾಪಕ ಅಧ್ಯಕ್ಷ ಓಂಕಾರಪ್ರಿಯ ಬಾಗೇಪಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ಓದಿದವರಿಂದಲೇ ತಪ್ಪುಗಳಾಗುತ್ತಿವೆ. ಕನ್ನಡ ಭಾಷೆ ಬಳಸಿ ಬೆಳೆಸುವ ಕೆಲಸವಾಗಬೇಕು. ಕನ್ನಡ ಭಾಷೆ ನಮ್ಮ ತಾಯಿ. ಅನ್ಯ ಭಾಷೆಗಳು ತಾಯಿ ಸಮಾನ. ಯುವ ಸಮಾಜ ಬದಲಾಗಬೇಕು. ಸಂಸ್ಕೃತಿ, ಸತ್ಯ ಅರ್ಥೈಸಿಕೊಂಡವರು ಸಮಾಜಕ್ಕೆ ಉಪಕಾರಿಯಾಗುವರು. ಬದಲಾವಣೆ ಮತ್ತು ಸತ್ಯದ ಪರವಾಗಿ ಸಾಗುವುದು ಅವಶ್ಯವಿದೆ. ಪ್ರದರ್ಶನಕ್ಕೆ ನಿಲ್ಲುವುದು ಬೇಡ, ನಿದರ್ಶನಕ್ಕೆ ನಿಲ್ಲಬೇಕು ಎಂದು ಹೇಳಿದ ಅವರು, ಕನ್ನಡ ಪದ ಸಂಪತ್ತಿನ ಕುರಿತು ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ| ಸಾಗರ ತೆಕ್ಕೆನ್ನವರ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಪ್ರಥಮ ಬಾರಿಗೆ ನ್ಯಾಯಾಲಯದಲ್ಲಿ ಕನ್ನಡದಲ್ಲಿ ತೀರ್ಪು ನೀಡಿದ ಶ್ರೇಯಸ್ಸು ನ್ಯಾಯಮೂರ್ತಿ ಅರಳಿ ನಾಗರಾಜ ಅವರಿಗೆ ಸಲ್ಲುತ್ತದೆ ಎಂದರು.

Advertisement

ಸಾಹಿತಿ ಸಿದ್ಧರಾಮ ಶಿರೋಳ, ಕೆ.ಎನ್‌. ಬಡಿಗೇರ, ಮಾನವ ಹಕ್ಕು ಕಲ್ಯಾಣ ಮಂಡಳಿ ಕಾರ್ಯದರ್ಶಿ ಸದಾನಂದ ಏಳಗಂಟಿ, ಕಸಾಪ ತಾಲೂಕು ಅಧ್ಯಕ್ಷ ಡಿ.ಎಂ.ಸಾಹುಕಾರ ಇದ್ದರು. ಮೌನೇಶ ಕಮ್ಮಾರ ಸ್ವಾಗತಿಸಿದರು. ಚಂದ್ರಶೇಖರ ಹೆಗಡೆ ನಿರೂಪಿಸಿದರು. ಸಂತೋಷ ಕಳ್ಳಿಮನಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next