ಬೀಳಗಿ: ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ, ಸಿಬ್ಬಂದಿಯ ಕೊರತೆ ಹಾಗೂ ಅಗತ್ಯ ಮೂಲ ಸೌಲಭ್ಯಗಳಿಲ್ಲದೆ ಸೊರಗಿ ಸುಣ್ಣಾಗಿರುವ ಸ್ಥಳೀಯ ಉಪನೋಂದಣಿ ಇಲಾಖೆಗೆ ತಮ್ಮ ಅಗತ್ಯ ಕೆಲಸಗಳಿಗಾಗಿ ಸಾರ್ವಜನಿಕರು ನಿತ್ಯ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಆಸ್ತಿ ಖರೀದಿ, ಬ್ಯಾಂಕ್ ಬೋಜಾ, ಋಣಭಾರ ಪತ್ರ ಸೇರಿದಂತೆ ಅನೇಕ ಕೆಲಸಗಳಿಗಾಗಿ ಉಪ ನೋಂದಣಿ ಇಲಾಖೆಗೆ ಅಲೆದಲೆದು ಸಾರ್ವಜನಿಕರು ಸುಸ್ತಾಗಿ ಹೋಗಿದ್ದಾರೆ. ನೋಂದಣಿ ಇಲಾಖೆಯಲ್ಲಿ ತಮ್ಮ ಅಗತ್ಯ ಕೆಲಸ ಪೂರೈಸಿಕೊಳ್ಳಬೇಕಾದರೆ ನಾಲ್ಕಾರು ದಿನ ಆಫೀಸಿಗೆ ಅಲೆಯಲೇಬೇಕು. ಇದು ಅನಿವಾರ್ಯ. ಇಲಾಖೆಯವರು ತ್ವರಿತ ಗತಿಯಲ್ಲಿ ಕೆಲಸ ಮಾಡಿಕೊಡುವ ಮೂಲಕ ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ ಎನ್ನುವ ದೂರು ಕೇಳಿಬರುತ್ತಿದೆ.
“ನಮ್ಮ ಕೆಲಸ ಏನ ಮಾಡಿದಿರಿ? ಎಂದು ಸಾರ್ವಜನಿಕರು ಕೇಳಿದರೆ “ಸರ್ವರ್ ಪ್ರಾಬ್ಲಿಂ ಇದೆ, ನಾಳೆ ಬಾ, ಇವತ್ತು ಕಂಪ್ಯೂಟರ್ ಹುಡುಗ ಇಲ್ಲ. ನಾಳೆ ಬಾ, ನೀನು ಕೊಟ್ಟ ಅರ್ಜಿ ಪಾಳೆ ಇನ್ನು ಬಂದಿಲ್ಲ’ ಹೀಗೆ ಬರೀ “ಇಂದು ಬೇಡ, ನಾಳೆ ಬಾ’ ಎಂದು ಸಾಗ ಹಾಕುತ್ತಿರುವ ಉಪ ನೋಂದಣಿ ಇಲಾಖೆಯವರು ಬೇಗನೆ ಕೆಲಸ ಮಾಡದೆ ಸತಾಯಿಸುತ್ತಿದ್ದಾರೆ.
ನಾಲ್ಕಾರು ದಿನದವರೆಗೆ ಈ ರೀತಿ ಸಾರ್ವಜನಿಕರಿಗೆ ಏಕೆ ಪೀಡಿಸುತ್ತಾರೆ ಎಂದು ಬಿಡಿಸಿ ಹೇಳಬೇಕೇನ್ರಿ ಎಂದು ನೋಂದಣಿ ಇಲಾಖೆಗೆ ಬಂದ ವ್ಯಕ್ತಿಯೋರ್ವರು ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಉಪ ನೋಂದಣಿ ಇಲಾಖೆಗೆ ಬರುವ ವೃದ್ಧರ ಗೋಳಂತು ದೇವರೇ ಬಲ್ಲ. ಇಂದು ಆಗಲ್ಲ, ನಾಳೆ ಬನ್ನಿ ಎಂದು ಸಿದ್ಧ ಉತ್ತರವನ್ನು ಸಾದರಪಡಿಸುವ ಇಲಾಖೆಯವರ ಬೇಜವಾಬ್ದಾರಿ ತನದಿಂದ ವೃದ್ಧರು ಇಲಾಖೆಗೆ ತಿರುಗಾಡಿ ಹೈರಾಣಾಗಿದ್ದಾರೆ. ಬರೋಬ್ಬರಿ 100 ವರ್ಷ ವಯಸ್ಸಿನ ಮುಪ್ಪಾನು ಮುದುಕಿಯ ಕಟ್ಟಿಕೊಂಡು ಆಕೆಯ ಹೆಸರಲ್ಲಿರುವ ಆಸ್ತಿಯನ್ನು ನಮ್ಮ ಹೆಸರಿಗೆ ನೋಂದಾಯಿಸಿಕೊಳ್ಳಲು ನಾಲ್ಕಾರು ದಿವಸದಿಂದ ಇಲಾಖೆಗೆ ಅಲೆಯುತ್ತಿದ್ದೇವೆ. ವಯೋವೃದ್ಧರಿಗೆ ಮೊದಲು ಕೆಲಸ ಮಾಡಿಕೊಡಬೇಕೆನ್ನುವ ಮಾನವೀಯತೆಯೂ ಇಲ್ಲಿನ ಅಧಿಕಾರಿಗಳಿಗಿಲ್ಲ ಎಂದು ಮುದುಕಿಯ ಮಗನಾದ ತಾಲೂಕಿನ ಕೋಲೂರ ಗ್ರಾಮದ ಪರಮಾನಂದ ನಾಯ್ಕರ ಬೇಸರ ವ್ಯಕ್ತಪಡಿಸಿದರು.
“ಇಲ್ಲಿ ಕೆಲಸ ದೌಡ ಚುಕ್ತಾ ಆಗಬೇಕಾದರೆ, ರೊಕ್ಕ ಕೊಡಬೇಕು. ಮುದುಕಿಗೆ ನಡೆಯಲು ಬರೋದಿಲ್ಲ. ಬಾಡಿಗೆ ವಾಹನ ಮಾಡಿಕೊಂಡು ಬರಬೇಕು. ಹೀಗೆ ನಾಲ್ಕಾರು ದಿವಸದಿಂದ ನೋಂದಣಿ ಇಲಾಖೆಗೆ ಬರುತ್ತಿದ್ದೇವೆ. ಏನಾದರೊಂದು ಕುಂಟುನೆಪ ಹೇಳುತ್ತ ದಿನದೂಡುತ್ತಿದ್ದಾರೆ ಎಂದು ಪರಮಾನಂದ ನಾಯ್ಕರ ಆಕ್ರೋಶ ವ್ಯಕ್ತಪಡಿಸಿದರು.
ಹಲವಾರು ಕೆಲಸಗಳಿಗೆ ಉಪನೋಂದಣಿ ಇಲಾಖೆಗೆ ಜನ ಅಲೆಯುವಂತಾಗಿದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಇನ್ನು ಮುಂದಾದರೂ ಸಾರ್ವಜನಿಕ ಕೆಲಸಗಳಿಗೆ ಸ್ಪಂದಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಇನ್ನೂ 5 ಕಂಪ್ಯೂಟರ್ ಬೇಕು. ಸದ್ಯ 3 ಕಂಪ್ಯೂಟರ್ ಇವೆ. ಪೇಪರ್ ಇಲ್ಲ. ಸ್ಕ್ಯಾನರ್ ಇಲ್ಲ. ಸಿಬ್ಬಂದಿ ಕೊರತೆಯಿದೆ. ಮೇಲಿಂದ ಮೇಲೆ ಸರ್ವರ್ ಪ್ರಾಬ್ಲಿಂ. ಒಟ್ಟಿನಲ್ಲಿ ಇಲಾಖೆಗೆ ಅಗತ್ಯ ಮೂಲ ಸೌಲಭ್ಯಗಳಿಲ್ಲ. ಹೀಗಾಗಿ ಕೆಲಸದಲ್ಲಿ ತೊಂದರೆಯಾಗುತ್ತಿದೆ.
ಎಸ್.ಪಿ.ಮುತ್ತಪ್ಪಗೋಳ,
ಉಪನೋಂದಣಿ ಅಧಿಕಾರಿ, ಬೀಳಗಿ
ರವೀಂದ್ರ ಕಣವಿ