Advertisement

ಅನ್ಯಾಯಕ್ಕೆ  ಮಹಿಳೆ ತಲೆ ಬಾಗದಿರಲಿ

09:51 AM Mar 09, 2019 | Team Udayavani |

ಬೆಳಗಾವಿ: ಅನ್ಯಾಯಕ್ಕೆ ತಲೆಬಾಗದೇ ಅದರ ವಿರುದ್ಧ ಹೋರಾಟ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಸ್ವಾವಲಂಬಿ ಜೀವನ ಮಹಿಳೆಯರದ್ದಾಗಬೇಕು ಎಂದು ಉತ್ತರ ಪ್ರದೇಶ ಬುಂದೇಲಖಂಡದ ಗುಲಾಬಿ ಗ್ಯಾಂಗ್‌ ಸಂಸ್ಥಾಪಕಿ ಸಂಪತ್‌ ಪಾಲ ಹೇಳಿದರು.

Advertisement

ನಗರದಲ್ಲಿ ಕೆಎಲ್‌ಇ ಕೆಎಲ್‌ಇ ಸ್ತ್ರೀ ಶಕ್ತಿ ಸಂಘದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಭಾಗದ ಮಹಿಳೆಯರು ಸಶಕ್ತರಿದ್ದಾರೆ. ದೇಶ ಸೇವೆಯಲ್ಲಿ ನಿರತರಾದ ಸೈನಿಕರಿಗೆ ತಾಯಂದಿರ ಆಶೀರ್ವಾದವಿದೆ. ಉತ್ತರ ಭಾರತಕ್ಕೆ ಹೋಲಿಸಿದರೆ ಇಲ್ಲಿ ಹೆಚ್ಚು ಸುಶಿಕ್ಷಿತರು ಸಿಗುತ್ತಾರೆ. ಅದರಂತೆ ಇಲ್ಲಿನವರು ಹೆಚ್ಚು ಸಶಕ್ತರಾಗಿದ್ದಾರೆ ಎಂದರು.

ಸಮಾಜ ಮತ್ತು ಸರಕಾರ ರಚಿಸುವಲ್ಲಿ ಮಹಿಳೆ ಪ್ರಮುಖ ಪಾತ್ರವನ್ನು ವಹಿಸುತ್ತಾಳೆ. ಜನ್ಮ ನೀಡಿದ ಮಗುವಿಗೆ ಸಂಸ್ಕಾರ ಕಲಿಸಿ ಸಮಾಜದಲ್ಲಿ ಒಳ್ಳೆಯ ಪ್ರಜೆಯನ್ನಾಗಿ ಮಾಡುವಲ್ಲಿ ಅವಳ ಪಾತ್ರ ಅತ್ಯಂತ ಮುಖ್ಯವಾಗಿರುತ್ತದೆ. ಬಾಲ್ಯವಿವಾಹದಿಂದ ಗುಲಾಮಿ ಪದ್ಧತಿ ಹೆಚ್ಚಿತ್ತು. ಆದರೆ ಇಂದು ಅದು ಕಡಿಮೆಯಾಗಿದ್ದರೂ ಅಲ್ಲಲ್ಲಿ ಬಾಲ್ಯವಿವಾಹ ನಡೆಯುತ್ತಿದ್ದು, ಮಹಿಳೆ ಶೋಷಣೆಗೆ ಒಳಗಾಗುತ್ತಿದ್ದಾಳೆ ಎಂದು ವಿಷಾದ ವ್ಯಕ್ತಪಡಿಸಿದರು.

ಮಹಿಳೆಗೆ ಮಹಿಳೆಯೇ ವೈರಿಯಾಗಿದ್ದಾಳೆ. ಅತ್ತೆ ತನ್ನ ಸೊಸೆಯನ್ನು ಮಗಳಂತೆ ಕಾಣುವುದಿಲ್ಲ, ಸೊಸೆ ಅತ್ತೆಯನ್ನು ತಾಯಿಯಂತೆ ಕಾಣುವುದಿಲ್ಲ. ಇದರಿಂದ ಅವರಿಬ್ಬರ ನಡುವೆ ವೈರತ್ವ ಬೆಳೆಯುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಶೇ. 50ರಷ್ಟು ಮೀಸಲಾತಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಆ ಹಕ್ಕಿಗಾಗಿ ಮಹಿಳೆಯರು ಭಿಕ್ಷೆ ಏಕೆ ಬೇಡಬೇಕು ಎಂದು ಪ್ರಶ್ನಿಸಿದ ಅವರು, ಗ್ರಾಮೀಣ ಮಹಿಳೆಯರ ಬ್ಯಾಂಕ್‌ ಪಾಸ್‌ಬುಕ್‌ ತನ್ನ ಪತಿಯ ಹತ್ತಿರ ಇರುತ್ತದೆ. ಮೀಸಲಾತಿ ಎಲ್ಲಿಂದ ಬಂತು. ಮಹಿಳೆ ಅದನ್ನು ಹೋರಾಡಿ ಪಡೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ರಾಜ್ಯಸಭಾ ಸದಸ್ಯ, ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ| ಪ್ರಭಾಕರ ಕೋರೆ ಮಾತನಾಡಿ, ಜಗಜ್ಯೋತಿ ಬಸವೇಶ್ವರರು 12ನೇ ಶತಮಾನದಲ್ಲಿಯೇ ಸ್ತ್ರೀಗೆ ಸ್ವಾತಂತ್ರ್ಯ ನೀಡಿದ್ದರು. ಪ್ರಥಮ ಅನುಭವ ಮಂಟಪ ಎಂಬ ಸಂಸತ್ತು ಸ್ಥಾಪಿಸಿ ಮಹಿಳೆಯರಿಗೆ ವಿಶೇಷ ಸ್ಥಾನ ಕಲ್ಪಿಸಿದ್ದರು. ಸಾಮಾಜಿಕ ಕ್ರಾಂತಿಯ ಮೂಲಕ
ಸಮಾಜದಲ್ಲಿ ಭೇದ-ಭಾವ ಹೋಗಲಾಡಿಸಲು ಶ್ರಮಿಸಿದ್ದರು. ಮಹಿಳಾ ದಿನಾಚರಣೆ ಆರಂಭವಾಗಿ ಅನೇಕ ವರ್ಷ ಕಳೆದರೂ ಇಂದಿಗೂ ಮಹಿಳೆಯರ ಮೇಲಿನ ಶೋಷಣೆ ನಿಂತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

Advertisement

ಬಸವಣ್ಣನವರ ಸಮಾನತೆಯ ತತ್ವವನ್ನು ಸಂಸ್ಥೆಯಲ್ಲಿ ಪಾಲಿಸುತ್ತಿದ್ದೇವೆ. ಪುರುಷ ಪ್ರಧಾನ ರಾಷ್ಟ್ರಗಳಲ್ಲಿ ಇನ್ನೂ ಮಹಿಳೆಯರಿಗೆ ಮತದಾನದ ಹಕ್ಕು ಲಭಿಸಿಲ್ಲ. ಮಹಿಳೆಯರು ಯಾವುದರಲ್ಲಿಯೂ ಹಿಂದೆ ಬಿದ್ದಿಲ್ಲ. ವೈದ್ಯಕೀಯ, ಮಿಲಿಟರಿ ಕ್ಷೇತ್ರಗಳು ಸೇರಿದಂತೆ ಎಲ್ಲ ಕಡೆಯಲ್ಲಿಯೂ ಮಹಿಳೆಯರು ಇದ್ದಾರೆ. ಪೈಲಟ್‌ ಆಗಿ ಯುದ್ದದಲ್ಲಿ ಹೋರಾಟ ಮಾಡುತ್ತಾರೆ. ಸ್ವಾಭಿಮಾನದಿಂದ ದುಡಿದು ಹಣ ಗಳಿಸಿದರೆ ಹೆದರಿಕೆ ಇರುವುದಿಲ್ಲ. ಪುರುಷ ಪ್ರಧಾನ ಸಮಾಜ ತಾನಾಗಿಯೇ ಕೊನೆಯಾಗುತ್ತದೆ. ಕೆಎಲ್‌ಇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ನೌಕರರ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದರು.

ಕೆಎಲ್‌ಇ ಸಂಸ್ಥೆಯ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಆಶಾತಾಯಿ ಕೋರೆ, ಡಾ| ಪ್ರೀತಿ ದೊಡವಾಡ, ಜೆಎನ್‌ಎಂಸಿ ಪ್ರಾಚಾರ್ಯೆ ಎನ್‌. ಎಸ್‌. ಮಹಾಂತಶೆಟ್ಟಿ, ಡಾ| ವಿ.ಡಿ. ಪಾಟೀಲ, ಡಾ| ಅಲ್ಕಾ ಕಾಳೆ, ಡಾ| ರೇಣುಕಾ ಮೆಟಗುಡ, ಡಾ| ಹರಪ್ರೀತ್‌ ಕೌರ್‌, ಅಂಜನಾ ಅಧ್ಯಾಪಕ ಸೇರಿದಂತೆ ಇತರರು ಇದ್ದರು.

ಭಾರತದಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅತ್ಯಾಚಾರಗಳಾಗುತ್ತಿರುವುದು ಅತ್ಯಂತ ನೋವಿನ ಸಂಗತಿ. ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇತರ ಭಾಗಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅತ್ಯಾಚಾರ ಸಂಖ್ಯೆ ಕಡಿಮೆ. ಇದಕ್ಕೆಲ್ಲ ಕಾರಣ ಇಲ್ಲಿನ ಸಮಾಜ ಸುಧಾರಕರು.
 ಡಾ| ಪ್ರಭಾಕರ ಕೋರೆ,
 ರಾಜ್ಯಸಭಾ ಸದಸ್ಯ 

ನಾನು ಯಾವುದೇ ಪಕ್ಷ ಕಟ್ಟಲು ಗುಲಾಬಿ ಗ್ಯಾಂಗ್‌ ಸ್ಥಾಪಿಸಿಲ್ಲ. ಮಹಿಳೆಯ ಶೋಷಣೆ ವಿರುದ್ಧ ಹಾಗೂ ಅವರ ಹಕ್ಕಿನ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಲಖನೌದಲ್ಲಿ ಮಹಿಳೆಗೆ ಅನ್ಯಾಯವಾದಾಗ ಗುಲಾಬಿ ಸೀರೆ ಹಾಕಿಕೊಂಡು ಹೋರಾಟ ನಡೆಸಿದ್ದರಿಂದ ಸದ್ಯಕ್ಕೆ ಎಲ್ಲ ಸರಕಾರಿ ಅಧಿಕಾರಿಗಳು, ರಾಜಕಾರಣಿಗಳು ನನ್ನ ಮಾತು ಕೇಳುತ್ತಾರೆ. 
ಸಂಪತ್‌ ಪಾಲ,
ಗುಲಾಬಿ ಗ್ಯಾಂಗ್‌ ಸಂಸ್ಥಾಪಕಿ
.

Advertisement

Udayavani is now on Telegram. Click here to join our channel and stay updated with the latest news.

Next