Advertisement

Belagavi: ‘ಕ್ರೆಡಿಟ್‌ ವಾರ್‌’ಗೆ ಕಾರಣವಾದ ವಂದೇ ಭಾರತ್‌

06:21 PM Nov 17, 2023 | Team Udayavani |

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿ ಜನರ ಬಹುದಿನಗಳ ಬೇಡಿಕೆಯಾಗಿದ್ದ ವಂದೇ ಭಾರತ್‌ ರೈಲು ಸಂಚಾರ ನನಸಾಗುವ ಸಮಯ ಸನ್ನಿಹಿತವಾಗಿದೆ. ಐಷಾರಾಮಿ ರೈಲು ಸಂಚಾರದ ಅಧಿಕೃತ ದಿನಾಂಕ ಘೋಷಣೆ ಮಾತ್ರ ಬಾಕಿ ಇದೆ. ಆದರೆ ರೈಲು ಸಂಚಾರ
ಆರಂಭವಾಗುವ ಮೊದಲೇ ಇದರ ಮಂಜೂರಾತಿ ವಿಷಯವಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ಮಧ್ಯೆ ಶ್ರೇಯಸ್ಸು (ಕ್ರೆಡಿಟ್‌ ವಾರ್‌) ಪಡೆಯಲು ಪೈಪೋಟಿ ಆರಂಭವಾಗಿದೆ.

Advertisement

ಮುಂದಿನ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ನಡೆದಿರುವ ಈ ಕ್ರೆಡಿಟ್‌ ವಾರ್‌ ಬಹಳ ಮಹತ್ವ ಪಡೆದುಕೊಂಡಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ಚುನಾವಣೆಗೆ ಮೊದಲೇ ಮತದಾರರ ಮನಗೆಲ್ಲಲು ಹೊಸ ರಾಜಕೀಯ ದಾಳ ಉರುಳಿಸುವ ಪ್ರಯತ್ನ ಮಾಡಿದ್ದಾರೆ.

ರೈಲು ಮಂಜೂರಾತಿ ವಿಷಯದಲ್ಲಿ ಸಂಸದರು, ರಾಜ್ಯಸಭಾ ಸದಸ್ಯರು ಮತ್ತು ವಿಧಾನ ಪರಿಷತ್‌ ಸದಸ್ಯರ ಪ್ರತ್ಯೇಕ ಪತ್ರಿಕಾ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದರೆ, ಇನ್ನೊಂದು ಕಡೆ ರಾಜಕೀಯ ಪಕ್ಷಗಳ ಮನೆ ಮತ್ತು ಸಾರ್ವಜನಿಕರಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿವೆ.

ಈ ರೈಲು ಸಂಚಾರ ವಿಷಯದಲ್ಲಿ ಕಾಂಗ್ರೆಸ್‌ ನಾಯಕರು ಒಂದು ಹೆಜ್ಜೆ ಮುಂದೆ ಹೋಗಿ ಪ್ರಚಾರ ಪಡೆದುಕೊಂಡಿರುವುದು ಬಿಜೆಪಿ ವಲಯದಲ್ಲಿ ಇರುಸುಮುರುಸು ಉಂಟುಮಾಡಿದೆ. ಕೆಲವರ ಅಸಮಾಧಾನಕ್ಕೂ ಕಾರಣವಾಗಿದೆ. ಆದರೆ ಇದುವರೆಗೆ
ಯಾವ ನಾಯಕರೂ ಇದನ್ನು ಬಹಿರಂಗವಾಗಿ ತೋರಿಸಿಕೊಂಡಿಲ್ಲ. ವಂದೇ ಭಾರತ್‌ ರೈಲು ವಿಚಾರದಲ್ಲಿ ಪತ್ರ ವ್ಯವಹಾರಕ್ಕಿಂತ ವೈಯಕ್ತಿಕ ಸಂಪರ್ಕ ಮತ್ತು ಸಂಬಂಧ, ನಿರಂತರ ಫಾಲೋ ಅಪ್‌ ಬಹಳ ಕೆಲಸ ಮಾಡಿದೆ.

ಕಳೆದ ನಾಲ್ಕು ದಿನಗಳಲ್ಲಿ ನಡೆದ ಬೆಳವಣಿಗೆಗಳೇ ಇದಕ್ಕೆ ಸಾಕ್ಷಿ. ವಂದೇ ಭಾರತ್‌ ರೈಲು ಸಂಚಾರ ಬೆಳಗಾವಿಗೆ ಮಂಜೂರಾಗಿದ್ದೇ ತಡ ಜಿಲ್ಲೆಯ ಜನರ ಮುಖದಲ್ಲಿ ಸಂತಸ ಮನೆ ಮಾಡಿತ್ತು. ವಂದೇ ಭಾರತ್‌ ದೀಪಾವಳಿಯ ಕೊಡುಗೆಯಾಗಿ ಬಂದಿತ್ತು. ಆದರೆ ಎರಡು ದಿನಗಳ ಹಿಂದೆ ರಾಜಸ್ತಾನ ಚುನಾವಣೆ ನೆಪ ಮುಂದೆ ಮಾಡಿ ಬೆಳಗಾವಿಗೆ ಮಂಜೂರಾದ ಆದೇಶವನ್ನು ರೈಲ್ವೆ ಇಲಾಖೆ ರದ್ದು ಮಾಡಿತ್ತು.

Advertisement

ಬೆಳಗಾವಿ ಜತೆಗೆ ರಾಜಸ್ತಾನಕ್ಕೂ ವಂದೇ ಭಾರತ್‌ ರೈಲು ಸಂಚಾರ ಮಂಜೂರು ಮಾಡಿದ್ದ ರೈಲ್ವೆ ಇಲಾಖೆ ನಂತರ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಕಾರಣದಿಂದ ಈ ಆದೇಶ ರದ್ದು ಮಾಡಿತ್ತು. ಆದರೆ ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟರಲ್ಲದೆ ಸತತ ಒತ್ತಡ ಹಾಕಿದರು. ಇದರ ಫಲವಾಗಿ ಎರಡು ದಿನಗಳ ಹಿಂದೆ ಆದೇಶ ರದ್ದು ಮಾಡಿದ್ದ ರೈಲ್ವೆ ಇಲಾಖೆ ಮತ್ತೆ ಹೊಸ ಆದೇಶ ಹೊರಡಿಸಿ ಬೆಳಗಾವಿಗೆ ಹೊಸ ಮಂಜೂರು ಆದೇಶ ನೀಡಿತು.

ಹಾಗೆ ನೋಡಿದರೆ ವಂದೇ ಭಾರತ್‌ ರೈಲು ಮಂಜೂರು ಕೇವಲ ಒಂದೆರಡು ಪತ್ರಗಳ ಮೇಲೆ ಆಗಿರುವ ಕೆಲಸವಲ್ಲ. ಹಾಗೆ ಆಗುವ ಕೆಲಸವೂ ಅಲ್ಲ. ಇದು ಕಾಂಗ್ರೆಸ್‌ ನಾಯಕರಿಗೂ ಗೊತ್ತು. ಹೀಗಿರುವಾಗ ನಾವು ನೀಡಿದ ಪತ್ರದಿಂದ ಆಗಿರುವ ಕೆಲಸ ಎಂದು ಹೇಳಿಕೊಳ್ಳುವುದು ಎಷ್ಟು ಸರಿ ಎಂಬುದು ಬಿಜೆಪಿ ಮುಖಂಡರ ಪ್ರಶ್ನೆ. ವಂದೇ ಭಾರತ್‌ ರೈಲು ಬೆಳಗಾವಿಯಿಂದ ಬೆಂಗಳೂರಿಗೆ ಆರಂಭಿಸಬೇಕು ಎಂಬುದರ ಹಿಂದೆ ಐದು ತಿಂಗಳಿಗೂ ಹೆಚ್ಚಿನ ಪ್ರಯತ್ನವಿದೆ. ಈ ಭಾಗದ ಜನಪ್ರತಿನಿಧಿಗಳು ಹಾಗೂ ಮುಖ್ಯಮಂತ್ರಿಗಳು ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದಾರೆ. ಆದರೆ ಈ ಪತ್ರಗಳ ಜತೆಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ
ಅವರ ವಿಶೇಷ ಪ್ರಯತ್ನ ಮತ್ತು ಮುತುವರ್ಜಿ ಫಲ ಕೊಟ್ಟಿದೆ. ರೈಲ್ವೆ ಸಚಿವರು ಹಾಗೂ ಅಧಿಕಾರಿಗಳನ್ನು ನಿರಂತರವಾಗಿ ಸಂಪರ್ಕ ಮಾಡಿದ್ದರಿಂದಲೇ ಈಗ ಬೆಳಗಾವಿ ಜನರ ಬಹುದಿನಗಳ ಬೇಡಿಕೆ ಈಡೇರಿದೆ ಎಂಬುದು ಪಕ್ಷದ ವಾದ.

ವಂದೇ ಭಾರತ್‌ ರೈಲು ವಿಸ್ತರಣೆ ಕುರಿತು ನಾನು, ಶಾಸಕರಾದ ಗಣೇಶ ಹುಕ್ಕೇರಿ ಹಾಗೂ ಮಹೇಂದ್ರ ತಮ್ಮಣ್ಣವರ ಪತ್ರ ಬರೆದಿದ್ದೆವು. ನಮ್ಮ ಪತ್ರದ ಜತೆಗೆ ಸಿಎಂ ಸಿದ್ದರಾಮಯ್ಯ ಅವರ ಪತ್ರವನ್ನು ರೈಲ್ವೆ ಸಚಿವರಾದ ಅಶ್ವಿ‌ನಿ ವೈಷ್ಣವ್‌ ಅವರಿಗೆ
ನೀಡಿ ಮನವಿ ಮಾಡಲಾಗಿತ್ತು. ನಮ್ಮ ಮನವಿಗೆ ಸ್ಪಂದಿಸಿ ರೈಲು ಸಂಚಾರಕ್ಕೆ ಒಪ್ಪಿಗೆ ನೀಡಿ ಆದೇಶ ಮಾಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಪ್ರಕಾಶ ಹುಕ್ಕೇರಿ, ವಿಧಾನ ಪರಿಷತ್‌ ಸದಸ್ಯ

ವಂದೇ ಭಾರತ್‌ ರೈಲು ಆರಂಭದ ವಿಚಾರದಲ್ಲಿ ರಾಜಕೀಯ ಬೇಡ. ಕಾಂಗ್ರೆಸ್‌ ನಾಯಕರು ಪತ್ರ ಬರೆದಿರಬಹುದು. ಆದರೆ ನಾವು ಪತ್ರದ ಜತೆಗೆ ವಿಶೇಷ ಪ್ರಯತ್ನ ಮಾಡಿದ್ದೇವೆ. ವಂದೇ ಭಾರತ್‌ ರೈಲು ಸಂಚಾರ ಭೂಪಟದಲ್ಲಿ ಬೆಳಗಾವಿ ಹೆಸರು ಕಣ್ಮರೆಯಾಗದಂತೆ ರೈಲ್ವೆ ಸಚಿವರು ಮತ್ತು ಅಧಿಕಾರಿಗಳ ಮೇಲೆ ನಿರಂತರ ಒತ್ತಡಹಾಕಿದ್ದೇವೆ. ಇದಲ್ಲದೆ ವೈಯಕ್ತಿಕ ಸಂಪರ್ಕ ಸಾಕಷ್ಟು ನೆರವಾಗಿದೆ.
ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯರು

*ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next